- Kannada News Photo gallery Cricket photos Rohit Sharma Awarded Honorary Doctorate by ADYPU for Cricket Achievements
ಹಿಟ್‌ಮ್ಯಾನ್ ರೋಹಿತ್ ಶರ್ಮಾ ಇನ್ಮುಂದೆ ಡಾ. ರೋಹಿತ್ ಶರ್ಮಾ
Dr. Rohit Sharma: ಭಾರತ ತಂಡಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ರೋಹಿತ್ ಶರ್ಮಾ ಅವರಿಗೆ ಪುಣೆಯ ಅಜಿಂಕ್ಯ ಡಿವೈ ಪಾಟೀಲ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸಂದಿದೆ. ಕ್ರಿಕೆಟ್‌ಗೆ ಅವರ ಅಸಾಧಾರಣ ಕೊಡುಗೆಗಳು, ನಾಯಕತ್ವದಲ್ಲಿ ಎರಡು ಐಸಿಸಿ ಟ್ರೋಫಿಗಳನ್ನು ಗೆದ್ದ ಸಾಧನೆ ಮತ್ತು ಅಂತರರಾಷ್ಟ್ರೀಯ ದಾಖಲೆಗಳಿಗಾಗಿ ಈ ಗೌರವ ನೀಡಲಾಗಿದೆ. ಇನ್ನು ಮುಂದೆ ರೋಹಿತ್ ಶರ್ಮಾ "ಡಾ. ರೋಹಿತ್ ಶರ್ಮಾ" ಎಂದು ಗುರುತಿಸಿಕೊಳ್ಳಲಿದ್ದಾರೆ.
Updated on: Jan 22, 2026 | 4:20 PM

ಭಾರತ ತಂಡಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಮತ್ತು ಹಲವಾರು ಸ್ಮರಣೀಯ ಗೆಲುವುಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಮಾಜಿ ನಾಯಕ ರೋಹಿತ್ ಶರ್ಮಾ ಅವರಿಗೆ ಗೌರವ ಡಾಕ್ಟರೇಟ್ ಸಂದಿದೆ. ಪುಣೆಯ ಅಜಿಂಕ್ಯ ಡಿವೈ ಪಾಟೀಲ್ ವಿಶ್ವವಿದ್ಯಾಲಯ (ADYPU) ರೋಹಿತ್ ಶರ್ಮಾ ಅವರಿಗೆ ಗೌರವ ಡಾಕ್ಟರೇಟ್ (D.Litt.) ಪ್ರದಾನ ಮಾಡಲಿದೆ. ಜನವರಿ 24 ರಂದು ನಡೆಯುವ ವಿಶ್ವವಿದ್ಯಾಲಯದ 10 ನೇ ಘಟಿಕೋತ್ಸವ ಸಮಾರಂಭದಲ್ಲಿ ಈ ಗೌರವವನ್ನು ಪ್ರದಾನ ಮಾಡಲಾಗುವುದು.

ಕ್ರಿಕೆಟ್‌ಗೆ ರೋಹಿತ್ ಶರ್ಮಾ ನೀಡಿದ ಅಸಾಧಾರಣ ಕೊಡುಗೆಗಳಿಗಾಗಿ ಅವರನ್ನು ಗೌರವಿಸಲಾಗುತ್ತಿದೆ ಎಂದು ವಿಶ್ವವಿದ್ಯಾಲಯವೇ ಘೋಷಿಸಿದೆ. ಕ್ರಿಕೆಟ್ ಲೋಕದಲ್ಲಿ "ಹಿಟ್‌ಮ್ಯಾನ್" ಎಂದೇ ಪ್ರಸಿದ್ಧರಾಗಿರುವ ರೋಹಿತ್ ಶರ್ಮಾ ಇನ್ನು ಮುಂದೆ ಡಾ. ರೋಹಿತ್ ಶರ್ಮಾ ಎನಿಸಿಕೊಳ್ಳಲಿದ್ದಾರೆ.

ರೋಹಿತ್ ಶರ್ಮಾ ಭಾರತದ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರು. ಭಾರತದ ಪರ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ತಂಡವನ್ನು ಮುನ್ನಡೆಸಿದ್ದ ರೋಹಿತ್ ಈಗಾಗಲೇ ಟೆಸ್ಟ್ ಮತ್ತು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಆದರೆ ಏಕದಿನ ಮಾದರಿಯಲ್ಲಿ ಅವರ ಪರಾಕ್ರಮ ಮುಂದುವರೆದಿದೆ.

ಮೇಲೆ ಹೇಳಿದಂತೆ ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ರೋಹಿತ್ ತಮ್ಮ ನಾಯಕತ್ವದಲ್ಲಿ ಭಾರತ ತಂಡವನ್ನು ಎರಡೆರಡು ಐಸಿಸಿ ಟ್ರೋಫಿ ಗೆಲುವಿನತ್ತ ಮುನ್ನಡೆಸಿದ್ದರು. 2024 ರ ಟಿ20 ವಿಶ್ವಕಪ್ನಲ್ಲಿ ಭಾರತವನ್ನು ಚಾಂಪಿಯನ್ ಮಾಡಿದ್ದ ರೋಹಿತ್, ಆ ಬಳಿಕ 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಸಹ ಭಾರತಕ್ಕೆ ಗೆದ್ದುಕೊಟ್ಟರು.

ರೋಹಿತ್ ಶರ್ಮಾ ಇದುವರೆಗೆ ಟೀಂ ಇಂಡಿಯಾ ಪರ 508 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಸಮಯದಲ್ಲಿ, ಅವರು 20,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ 111 ಅರ್ಧಶತಕಗಳು ಮತ್ತು 50 ಶತಕಗಳು ಸೇರಿವೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎಂಬ ವಿಶ್ವ ದಾಖಲೆ ಕೂಡ ರೋಹಿತ್ ಹೆಸರಿನಲ್ಲಿದೆ.
