
ರಾಜಸ್ಥಾನ್ ರಾಯಲ್ಸ್ ತಂಡ ತೊರೆದು ಸಿಎಸ್‌ಕೆ ತಂಡವನ್ನು ಕೂಡಿಕೊಂಡಿರುವ ಸಂಜು ಸ್ಯಾಮ್ಸನ್ 2026 ರ ಐಪಿಎಲ್‌ನಲ್ಲಿ ಇದುವರೆಗೆ 2 ಭರ್ಜರಿ ಶತಕಗಳನ್ನು ಬಾರಿಸಿದ್ದಾರೆ. ಅದರಲ್ಲೂ ಕೇವಲ 4 ಪಂದ್ಯಗಳ ಅಂತರದಲ್ಲಿ ಎರಡು ಶತಕಗಳನ್ನು ಬಾರಿಸಿರುವ ಸಂಜು ಸಿಎಸ್‌ಕೆ ಪರ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದೀಗ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲೂ ಸಂಜು ಮತ್ತೊಂದು ದಾಖಲೆ ಬರೆದಿದ್ದಾರೆ.

ಸಿಎಸ್‌ಕೆ ಪರ ಎರಡು ಶತಕಗಳ ಇನ್ನಿಂಗ್ಸ್ ಆಡಿರುವ ಸಂಜುಗೆ ಗುಜರಾತ್ ಟೈಟಾನ್ಸ್ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಸಂಜು ಕೇವಲ 11 ರನ್ ಗಳಿಸಲಷ್ಟೇ ಶಕ್ತರಾದರು. ಆದಾಗ್ಯೂ ಸಂಜು ಈ 11 ರನ್ಗಳ ಮೂಲಕ ಐಪಿಎಲ್‌ನಲ್ಲಿ 5,000 ರನ್‌ಗಳನ್ನು ಪೂರೈಸಿದರು. ಹಾಗೆಯೇ ಅತಿ ವೇಗವಾಗಿ 5000 ರನ್ ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಐಪಿಎಲ್‌ನಲ್ಲಿ ಇದುವರೆಗೆ 185 ಪಂದ್ಯಗಳಲ್ಲಿ 180 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿರುವ ಸಂಜು 31.69 ರ ಸರಾಸರಿಯಲ್ಲಿ 5000 ರನ್ಗಳ ಗಡಿ ದಾಟಿದ್ದಾರೆ. ಈ ರನ್ ಪೂರೈಸಲು ಸಂಜು ಕೇವಲ 3,555 ಎಸೆತಗಳನ್ನು ತೆಗೆದುಕೊಂಡಿರುವುದು ಅವರನ್ನು ಅತಿ ವೇಗವಾಗಿ 5000 ರನ್ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಗೆ ಕಾರಣವಾಗಿದೆ.

ಈ ಮೂಲಕ ಸಂಜು ಸ್ಯಾಮ್ಸನ್ ಸಿಎಸ್‌ಕೆ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಅವರ ದಾಖಲೆಯನ್ನು ಅವರು ಮುರಿದಿದ್ದಾರೆ. ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಐಪಿಎಲ್‌ನಲ್ಲಿ 5000 ರನ್‌ಗಳನ್ನು ಪೂರೈಸಲು 3620 ಎಸೆತಗಳನ್ನು ತೆಗೆದುಕೊಂಡಿದ್ದರು. ಆದರೆ ಸಂಜು 65 ಎಸೆತಗಳನ್ನು ಕಡಿಮೆ ತೆಗೆದುಕೊಳ್ಳುವ ಮೂಲಕ 5000 ರನ್ ಪೂರೈಸಿ ಸುರೇಶ್ ರೈನಾ ಅವರನ್ನು ಹಿಂದಿಕ್ಕಿದ್ದಾರೆ.

ಒಟ್ಟಾರೆಯಾಗಿ ಐಪಿಎಲ್‌ನಲ್ಲಿ ವೇಗವಾಗಿ 5000 ರನ್ ಗಳಿಸಿದ ದಾಖಲೆ ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ ಅವರ ಹೆಸರಿನಲ್ಲಿದೆ. ಗೇಲ್ ಕೇವಲ 3288 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದು, ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಎರಡನೇ ಸ್ಥಾನದಲ್ಲಿದ್ದು, ಅವರು 3554 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು.