ಸ್ಮೃತಿ ಮಂಧಾನ ಸಿಡಿಲಬ್ಬರಕ್ಕೆ ವಿಶ್ವ ದಾಖಲೆಗಳೇ ಉಡೀಸ್
Smriti Mandhana: ಟೀಮ್ ಇಂಡಿಯಾ ಉಪನಾಯಕಿ ಸ್ಮೃತಿ ಮಂಧಾನ 2024 ರಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅದರಲ್ಲೂ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಅರ್ಧಶತಕ ಸಿಡಿಸಿ ಹಲವು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ. ಆ ದಾಖಲೆಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...
Updated on:Dec 21, 2024 | 9:35 AM

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಟೀಮ್ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದು ಸಹ ಶ್ರೀಲಂಕಾ ಮತ್ತು ನ್ಯೂಝಿಲೆಂಡ್ ಆಟಗಾರ್ತಯರು ಬರೆದಿದ್ದ ವಿಶ್ವ ದಾಖಲೆಗಳನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ವಿಂಡೀಸ್ ವಿರುದ್ಧದ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಅರ್ಧಶತಕ ಬಾರಿಸುವುದರೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಒಂದೇ ವರ್ಷ ಅತ್ಯಧಿಕ ಹಾಫ್ ಸೆಂಚುರಿ ಸಿಡಿಸಿದ ಮಹಿಳಾ ಬ್ಯಾಟರ್ ಎಂಬ ವಿಶ್ವ ದಾಖಲೆ ಸ್ಮೃತಿ ಮಂಧಾನ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಮಿಥಾಲಿ ರಾಜ್ ಹೆಸರಿನಲ್ಲಿತ್ತು.

2018 ರಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕಿ ಮಿಥಾಲಿ ರಾಜ್ 7 ಅರ್ಧಶತಕ ಬಾರಿಸಿ ಈ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಸ್ಮೃತಿ ಮಂಧಾನ ಯಶಸ್ವಿಯಾಗಿದ್ದಾರೆ.

ಸ್ಮೃತಿ ಮಂಧಾನ ಈ ವರ್ಷ ಟಿ20 ಕ್ರಿಕೆಟ್‌ನಲ್ಲಿ ಬರೋಬ್ಬರಿ 8 ಅರ್ಧಶತಕ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಒಂದೇ ವರ್ಷ ಅತ್ಯಧಿಕ ಹಾಫ್ ಸೆಂಚುರಿ ಸಿಡಿಸಿದ ಮಹಿಳಾ ಬ್ಯಾಟರ್ ಎನಿಸಿಕೊಂಡಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 77 ರನ್ ಬಾರಿಸುವುದರೊಂದಿಗೆ ಚುಟುಕು ಕ್ರಿಕೆಟ್‌ನಲ್ಲಿ ಒಂದೇ ವರ್ಷ ಅತ್ಯಧಿಕ ರನ್ ಕಲೆಹಾಕಿದ ವರ್ಲ್ಡ್ ರೆಕಾರ್ಡ್ ಕೂಡ ಸ್ಮೃತಿ ಮಂಧಾನ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ಚಾಮರಿ ಅಥಾಪತ್ತು ಹೆಸರಿನಲ್ಲಿತ್ತು.

ಶ್ರೀಲಂಕಾ ಆಟಗಾರ್ತಿ ಚಾಮರಿ ಅಥಾಪತ್ತು ಈ ವರ್ಷ 21 ಪಂದ್ಯಗಳಲ್ಲಿ 720 ರನ್ ಕಲೆಹಾಕಿದ್ದಾರೆ. ಇದೀಗ ಈ ರನ್ ರಾಶಿಗಳನ್ನು ದಾಟಿ ಸ್ಮೃತಿ ಮಂಧಾನ ಅಗ್ರಸ್ಥಾನಕ್ಕೇರಿದ್ದಾರೆ.

ಈ ವರ್ಷ 23 ಟಿ20 ಇನಿಂಗ್ಸ್ ಆಡಿರುವ ಸ್ಮೃತಿ ಮಂಧಾನ 8 ಅರ್ಧಶತಕಗಳೊಂದಿಗೆ 42.4 ಸರಾಸರಿಯಲ್ಲಿ ಒಟ್ಟು 763 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಒಂದೇ ವರ್ಷ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದರ ಜೊತೆಗೆ ಟಿ20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು 50+ ಸ್ಕೋರ್ ಕಲೆಹಾಕಿದ ವಿಶ್ವ ದಾಖಲೆಯನ್ನು ಸಹ ಸ್ಮೃತಿ ಮಂಧಾನ ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ ಈ ದಾಖಲೆ ನ್ಯೂಜಿಲೆಂಡ್‌ನ ಸುಝಿ ಬೆಟ್ಸ್ (29 ಬಾರಿ) ಹೆಸರಿನಲ್ಲಿತ್ತು. ಇದೀಗ 30ನೇ ಬಾರಿ ಐವತ್ತಕ್ಕಿಂತ ಹೆಚ್ಚು ರನ್ ಕಲೆಹಾಕುವ ಮೂಲಕ ಸ್ಮೃತಿ ಮಂಧಾನ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಹಾಗೆಯೇ ಏಕದಿನ ಕ್ರಿಕೆಟ್‌ನಲ್ಲಿ ಒಂದೇ ವರ್ಷ ಅತೀ ಹೆಚ್ಚು ಸೆಂಚುರಿ ಸಿಡಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಸ್ಮೃತಿ ಮಂಧಾನ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ನ್ಯಾಟ್ ಸ್ಕಿವರ್-ಬ್ರಂಟ್, ಸೋಫಿ ಡಿವೈನ್ ಸೇರಿದಂತೆ 7 ಬ್ಯಾಟರ್ಗಳು ಒಂದೇ ವರ್ಷ 3 ಏಕದಿನ ಶತಕಗಳನ್ನು ಬಾರಿಸಿದ್ದರು. ಇದೀಗ ಸ್ಮೃತಿ ಮಂಧಾನ ಒಂದೇ ವರ್ಷ 4 ಏಕದಿನ ಸೆಂಚುರಿ ಸಿಡಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.
Published On - 7:30 am, Sat, 21 December 24




