- TV9 Kannada Photo gallery Cricket photos Sreesanth's Kerala Cricket Ban Lifted After Apology; Set for KCL Return
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನಿಗೆ ಬಿಗ್ ರಿಲೀಫ್; 3 ವರ್ಷಗಳ ನಿಷೇಧ ತೆರವು..!
KCA Lifts Sreesanth's Ban: ಕೇರಳ ಕ್ರಿಕೆಟ್ ಅಸೋಸಿಯೇಷನ್ ಶ್ರೀಶಾಂತ್ ಮೇಲೆ ಹೇರಿದ್ದ 3 ವರ್ಷಗಳ ನಿಷೇಧವನ್ನು ತೆರವುಗೊಳಿಸಿದೆ. ಸಂಜು ಸ್ಯಾಮ್ಸನ್ ಕುರಿತ ಹಿಂದಿನ ಹೇಳಿಕೆಗಳಿಗಾಗಿ ಶ್ರೀಶಾಂತ್ ಕ್ಷಮೆಯಾಚಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇನ್ನು ಮುಂದೆ ಶ್ರೀಶಾಂತ್, ಕೆಸಿಎಲ್ ಸೀಸನ್ 3 ರಲ್ಲಿ ಏರೀಸ್ ಕೊಲ್ಲಂ ಸೈಲರ್ಸ್ ಫ್ರಾಂಚೈಸಿಯ ಸಹ-ಮಾಲೀಕರಾಗಿ ಮುಂದುವರಿಯಲಿದ್ದಾರೆ, ಕ್ರಿಕೆಟ್ ವಲಯದಲ್ಲಿ ಇದು ಒಂದು ದೊಡ್ಡ ಬೆಳವಣಿಗೆ.
Updated on: Jul 01, 2026 | 10:24 PM

ಕೇರಳ ಕ್ರಿಕೆಟ್ನಿಂದ ಮೂರು ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದ ಭಾರತದ ಮಾಜಿ ಕ್ರಿಕೆಟಿಗ ಎಸ್. ಶ್ರೀಶಾಂತ್ಗೆ ಸುಮಾರು ಒಂದು ವರ್ಷದ ನಂತರ ಬಿಗ್ ರಿಲೀಫ್ ಸಿಕ್ಕಿದೆ. ಕೇರಳ ಕ್ರಿಕೆಟ್ ಅಸೋಸಿಯೇಷನ್ನ ಸಾಮಾನ್ಯ ಸಭೆಯಲ್ಲಿ ಶ್ರೀಶಾಂತ್ ಕ್ಷಮೆಯಾಚಿಸಿದ ಬಳಿಕ ಅವರ ವಿರುದ್ಧ ಹೇರಿದ್ದ ನಿಷೇಧದ ಶಿಕ್ಷೆಯನ್ನು ತೆರವುಗೊಳಿಸಲಾಗಿದೆ.

ವಾಸ್ತವವಾಗಿ ಕಳೆದ ವರ್ಷ ಸಂಜು ಸ್ಯಾಮ್ಸನ್ ಅವರನ್ನು ವಿಜಯ್ ಹಜಾರೆ ಟ್ರೋಫಿಗೆ ಕೇರಳ ತಂಡದಲ್ಲಿ ಆಯ್ಕೆ ಮಾಡದಿರುವುದರ ಬಗ್ಗೆ ಅಸಮಾಧಾನಗೊಂಡಿದ್ದ ಶ್ರೀಶಾಂತ್ ಕೇರಳ ಕ್ರಿಕೆಟ್ ಅಸೋಸಿಯೇಷನ್ ವಿರುದ್ಧ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಹೀಗಾಗಿ ಅವರನ್ನು 3 ವರ್ಷಗಳ ಕಾಲ ಕೆರಳ ಕ್ರಿಕೆಟ್ನಿಂದ ಬ್ಯಾನ್ ಮಾಡಲಾಗಿತ್ತು.

ಇದೀಗ ಶ್ರೀಶಾಂತ್ ಕೆಸಿಎಲ್ ಮುಂದೆ ಕ್ಷಮೆಯಾಚಿಸಿದ್ದು, ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕೇರಳ ಕ್ರಿಕೆಟ್ ಅಸೋಸಿಯೇಷನ್, ವಿಶೇಷ ಸಾಮಾನ್ಯ ಸಭೆಯಲ್ಲಿ ಶ್ರೀಶಾಂತ್ ಮೇಲಿನ ನಿಷೇಧವನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ. ಶ್ರೀಶಾಂತ್, ಕೆಸಿಎ ವಿರುದ್ಧದ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ನಿಷೇಧ ತೆರವಾದ ಬಳಿಕ ಶ್ರೀಶಾಂತ್, ಕೇರಳ ಕ್ರಿಕೆಟ್ ಲೀಗ್ ಸೀಸನ್ 3 ರಲ್ಲಿ ಏರೀಸ್ ಕೊಲ್ಲಂ ಸೈಲರ್ಸ್ ಫ್ರಾಂಚೈಸಿಯ ಸಹ-ಮಾಲೀಕರಾಗಿ ಮುಂದುವರಿಯಲಿದ್ದಾರೆ. ಕಳೆದ ಕೆಸಿಎಲ್ ಸೀಸನ್‌ಗೂ ಮೊದಲು ಕೆಸಿಎ ಅವರ ಮೇಲೆ ನಿಷೇಧ ಹೇರಿತ್ತು. ಭಾರತದ ಮಾಜಿ ವೇಗದ ಬೌಲರ್ ಶ್ರೀಶಾಂತ್ ದೇಶದ ಮೂರು ಅಂತರರಾಷ್ಟ್ರೀಯ ಸ್ವರೂಪಗಳಲ್ಲಿ ಆಡಿದ್ದು, 27 ಟೆಸ್ಟ್, 53 ಏಕದಿನ ಮತ್ತು 10 ಟಿ20ಪಂದ್ಯಗಳನ್ನು ಆಡಿದ್ದಾರೆ.

ಶ್ರೀಶಾಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ 37.59 ಸರಾಸರಿಯಲ್ಲಿ 87 ವಿಕೆಟ್‌ಗಳನ್ನು ಕಬಳಿಸಿದ್ದರೆ, ಏಕದಿನ ಕ್ರಿಕೆಟ್‌ನಲ್ಲಿ, 33.44 ಸರಾಸರಿಯಲ್ಲಿ 75 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಉಳಿದಂತೆ 10 ಟಿ20 ಪಂದ್ಯಗಳಲ್ಲಿ ಏಳು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಶ್ರೀಶಾಂತ್ ದೇಶೀಯ ಕ್ರಿಕೆಟ್‌ನಲ್ಲಿ 74 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು 213 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಇದಲ್ಲದೆ, ಅವರು 92 ಲಿಸ್ಟ್ ಎ ಪಂದ್ಯಗಳಲ್ಲಿ 124 ವಿಕೆಟ್‌ಗಳು ಮತ್ತು 65 ಟಿ20 ಪಂದ್ಯಗಳಲ್ಲಿ 54 ವಿಕೆಟ್‌ಗಳನ್ನು ಕಬಳಿಸಿದ್ದಾರೆ.




