IPL 2023: ಸಿಡಿಲಬ್ಬರದ ಸಿಡಿಲಮರಿ ಸೂರ್ಯನ ಬ್ಯಾಟ್ನಿಂದ ತೂಫಾನ್ ಶತಕ
Suryakumar Yadav Century: ಮೊದಲ ವಿಕೆಟ್ಗೆ 61 ರನ್ ಪೇರಿಸಿ ರೋಹಿತ್ ಶರ್ಮಾ ಔಟಾದರು. ಆ ಬಳಿಕ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ ಗುಜರಾತ್ ಟೈಟಾನ್ಸ್ ಬೌಲರ್ಗಳ ಬೆಂಡೆತ್ತಿದ್ದರು.
Updated on: May 12, 2023 | 9:45 PM

IPL 2023: ಐಪಿಎಲ್ನ 57ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸ್ಪೋಟಕ ಶತಕ ಸಿಡಿಸುವ ಮೂಲಕ ಸೂರ್ಯಕುಮಾರ್ ಯಾದವ್ ಅಬ್ಬರಿಸಿದ್ದಾರೆ. ಇದರೊಂದಿಗೆ ಮುಂಬೈ ಇಂಡಿಯನ್ಸ್ ಪರ ಅತೀ ವೇಗದ ಶತಕ ಬಾರಿಸಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡವು ಮೊದಲು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಇಶಾನ್ ಕಿಶನ್ (31) ಹಾಗೂ ರೋಹಿತ್ ಶರ್ಮಾ (29) ಮುಂಬೈ ಇಂಡಿಯನ್ಸ್ ತಂಡಕ್ಕೆ ಸ್ಪೋಟಕ ಆರಂಭ ಒದಗಿಸಿದ್ದರು.

ಮೊದಲ ವಿಕೆಟ್ಗೆ 61 ರನ್ ಪೇರಿಸಿ ರೋಹಿತ್ ಶರ್ಮಾ ಔಟಾದರು. ಆ ಬಳಿಕ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ ಗುಜರಾತ್ ಟೈಟಾನ್ಸ್ ಬೌಲರ್ಗಳ ಬೆಂಡೆತ್ತಿದ್ದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದ ಸೂರ್ಯ ರನ್ ಗಳಿಕೆ ವೇಗವನ್ನು ಹೆಚ್ಚಿಸಿದರು.

ಅರ್ಧಶತಕದ ಬಳಿಕ ಅಬ್ಬರ ಮುಂದುವರೆಸಿದ ಸೂರ್ಯಕುಮಾರ್ ಯಾದವ್ ಗುಜರಾತ್ ಟೈಟಾನ್ಸ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದರು. ಅದರಂತೆ ಕೊನೆಯ ಓವರ್ ವೇಳೆಗೆ ಸೂರ್ಯಕುಮಾರ್ ಯಾದವ್ 87 ರನ್ಗಳಿಸಿದ್ದರು.

ಅಲ್ಝಾರಿ ಜೋಸೆಫ್ ಎಸೆದ ಅಂತಿಮ ಓವರ್ನ ಮೊದಲ ಎಸೆತದಲ್ಲಿ ಕ್ಯಾಮರೋನ್ ಗ್ರೀನ್ 1 ರನ್ ತೆಗೆದರು. ಆ ಬಳಿಕ ಸ್ಟ್ರೈಕ್ಗೆ ಬಂದ ಸೂರ್ಯ 2 ರನ್ ಓಡಿದರು. 3ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. 4ನೇ ಎಸೆತದಲ್ಲಿ ಸೂರ್ಯಕುಮಾರ್ ಭರ್ಜರಿ ಸಿಕ್ಸ್ ಸಿಡಿಸಿದರು. ಆ ನಂತರ 2 ರನ್. ಕೊನೆಯ ಎಸೆತದಲ್ಲಿ ಶತಕ ಪೂರೈಸಲು 3 ರನ್ಗಳ ಅವಶ್ಯಕತೆಯಿತ್ತು.

ಅಲ್ಝಾರಿ ಜೋಸೆಫ್ ಅವರ ಕೊನೆಯ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಸೂರ್ಯಕುಮಾರ್ ಯಾದವ್ ಐಪಿಎಲ್ನಲ್ಲಿ ಚೊಚ್ಚಲ ಶತಕ ಸಿಡಿಸಿದರು. ಅಂತಿಮವಾಗಿ 49 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 11 ಫೋರ್ನೊಂದಿಗೆ ಅಜೇಯ 103 ರನ್ ಬಾರಿಸಿದರು.

ಸೂರ್ಯಕುಮಾರ್ ಯಾದವ್ ಅವರ ಈ ಸಿಡಿಲಬ್ಬರದ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 218 ರನ್ ಕಲೆಹಾಕಿತು.
