Updated on: May 12, 2023 | 11:28 PM
IPL 2023: ಐಪಿಎಲ್ನ 57ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಶತಕ ಸಿಡಿಸುವ ಮೂಲಕ ಸೂರ್ಯಕುಮಾರ್ ಯಾದವ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಇಶಾನ್ ಕಿಶನ್ (31) ಹಾಗೂ ರೋಹಿತ್ ಶರ್ಮಾ (29) ತಂಡಕ್ಕೆ ಸ್ಪೋಟಕ ಆರಂಭ ಒದಗಿಸಿದ್ದರು.
ಆದರೆ ತಂಡದ ಮೊತ್ತ 61 ರನ್ ಆಗಿದ್ದ ವೇಳೆ ರೋಹಿತ್ ಶರ್ಮಾ ಔಟಾದರು. ಈ ವೇಳೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯ ತನ್ನ ಪ್ರತಾಪ ತೋರಿಸಲಾರಂಭಿಸಿದ. ಪರಿಣಾಮ ಗುಜರಾತ್ ಟೈಟಾನ್ಸ್ ಬೌಲರ್ಗಳು ಲಯ ತಪ್ಪಿದರು.
ಇತ್ತ 360 ಡಿಗ್ರಿಯಲ್ಲಿ ಬ್ಯಾಟ್ ಬೀಸಿದ ಸೂರ್ಯಕುಮಾರ್ ಯಾದವ್ 6 ಭರ್ಜರಿ ಸಿಕ್ಸ್ 11 ಫೋರ್ ಸಿಡಿಸಿದರು. ಪರಿಣಾಮ ಕೇವಲ 49 ಎಸೆತಗಳಲ್ಲಿ ಸೂರ್ಯಕುಮಾರ್ ಯಾದವ್ ಚೊಚ್ಚಲ ಐಪಿಎಲ್ ಶತಕ ಪೂರೈಸಿದರು. ಇದರೊಂದಿಗೆ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡರು.
ಕೇವಲ 49 ಎಸೆತಗಳಲ್ಲಿ ಸೆಂಚುರಿ ಸಿಡಿಸುವ ಮೂಲಕ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ಪರ ಅತೀ ವೇಗವಾಗಿ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿತ್ತು. ಹಿಟ್ಮ್ಯಾನ್ 52 ಎಸೆತಗಳಲ್ಲಿ ಶತಕ ಬಾರಿಸಿದ್ದರು.
ಇನ್ನು ಗುಜರಾತ್ ಟೈಟಾನ್ಸ್ ವಿರುದ್ಧ ಐಪಿಎಲ್ನಲ್ಲಿ ಅತ್ಯಧಿಕ ಸ್ಕೋರ್ಗಳಿಸಿದ ಬ್ಯಾಟರ್ ಎಂಬ ದಾಖಲೆ ಕೂಡ ಸೂರ್ಯಕುಮಾರ್ ಪಾಲಾಗಿದೆ. ಇದಕ್ಕೂ ಮುನ್ನ ಈ ರೆಕಾರ್ಡ್ 92 ರನ್ ಬಾರಿಸಿದ ಸಿಎಸ್ಕೆ ತಂಡದ ರುತುರಾಜ್ ಗಾಯಕ್ವಾಡ್ ಹೆಸರಿನಲ್ಲಿತ್ತು. ಇದೀಗ ಸೂರ್ಯಕುಮಾರ್ ಯಾದವ್ 103 ರನ್ ಬಾರಿಸಿ ಮಿಂಚಿದ್ದಾರೆ.
ಮುಂಬೈ ಇಂಡಿಯನ್ಸ್ ಪರ ಗರಿಷ್ಠ ಸ್ಕೋರ್ಗಳಿಸಿದ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಸೂರ್ಯಕುಮಾರ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಸನತ್ ಜಯಸೂರ್ಯ (114) ಅಗ್ರಸ್ಥಾನದಲ್ಲಿದ್ದು, ನಂತರದ ಸ್ಥಾನದಲ್ಲಿ ರೋಹಿತ್ ಶರ್ಮಾ (109) ಇದ್ದಾರೆ. ಇದೀಗ 3ನೇ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಕಾಣಿಸಿಕೊಂಡಿದ್ದಾರೆ.
ಇನ್ನು ಮುಂಬೈ ಇಂಡಿಯನ್ಸ್ ಪರ ಶತಕ ಸಿಡಿಸಿದ 5ನೇ ಬ್ಯಾಟರ್ ಎಂಬ ಹಿರಿಮೆಗೆ ಸೂರ್ಯಕುಮಾರ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಸನತ್ ಜಯಸೂರ್ಯ (114), ರೋಹಿತ್ ಶರ್ಮಾ (109), ಸಚಿನ್ ತೆಂಡೂಲ್ಕರ್ (100) ಹಾಗೂ ಲಿಂಡ್ಲ್ ಸಿಮನ್ಸ್ (100) ಶತಕ ಬಾರಿಸಿದ್ದರು.
ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಸೆಂಚುರಿ ಸಿಡಿಸಿದ ಮೊದಲ ಬ್ಯಾಟರ್ ಎಂಬ ದಾಖಲೆ ಕೂಡ ಸೂರ್ಯಕುಮಾರ್ ಪಾಲಾಗಿದೆ. ಇದಕ್ಕೂ ಮುನ್ನ ಗುಜರಾತ್ ಟೈಟಾನ್ಸ್ ವಿರುದ್ಧ ರುತುರಾಜ್ ಗಾಯಕ್ವಾಡ್ 92 ರನ್ಗಳಿಸಿದ್ದು ಇದುವರೆಗೆ ಶ್ರೇಷ್ಠ ಸಾಧನೆಯಾಗಿತ್ತು. ಇದೀಗ ಭರ್ಜರಿ ಸೆಂಚುರಿ ಸಿಡಿಸಿ ಸೂರ್ಯಕುಮಾರ್ ಯಾದವ್ ಹೊಸ ದಾಖಲೆ ನಿರ್ಮಿಸಿದ್ದಾರೆ.
ಇನ್ನು ಮುಂಬೈ ಇಂಡಿಯನ್ಸ್ ಪರ 50 ಎಸೆತಗಳ ಒಳಗೆ ಶತಕ ಸಿಡಿಸಿದ ಮೊದಲ ಭಾರತೀಯ ಹಾಗೂ 2ನೇ ಬ್ಯಾಟರ್ ಎಂಬ ವಿಶೇಷ ದಾಖಲೆಯನ್ನು ಕೂಡ ಸೂರ್ಯಕುಮಾರ್ ಯಾದವ್ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ಸನತ್ ಜಯಸೂರ್ಯ 45 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಇದೀಗ 49 ಎಸೆತಗಳಲ್ಲಿ ಸೆಂಚುರಿ ಪೂರೈಸುವ ಮೂಲಕ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ಪರ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಒಂದು ಸ್ಪೋಟಕ ಸೆಂಚುರಿಯ ಮೂಲಕ ಸಿಡಿಲಬ್ಬರದ ಸಿಡಿಲಮರಿ ಸೂರ್ಯಕುಮಾರ್ ಯಾದವ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿರುವುದು ವಿಶೇಷ.