ವಿಶ್ವ ದಾಖಲೆಯೊಂದಿಗೆ ವಿದಾಯ ಹೇಳಿದ ಟಿಮ್ ಸೌಥಿ
New Zealand vs England: ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವು 423 ರನ್ಗಳ ಅಮೋಘ ಗೆಲುವು ದಾಖಲಿಸಿದೆ. ಇದಾಗ್ಯೂ ಈ ಸರಣಿಯನ್ನು ಇಂಗ್ಲೆಂಡ್ ತಂಡವು 2-1 ಅಂತರದಿಂದ ಗೆದ್ದುಕೊಂಡಿದೆ. ಇನ್ನು ಈ ಸರಣಿಯೊಂದಿಗೆ ನ್ಯೂಝಿಲೆಂಡ್ ತಂಡದ ಅನುಭವಿ ವೇಗಿ ಟಿಮ್ ಸೌಥಿ ಟೆಸ್ಟ್ ಕೆರಿಯರ್ ಅಂತ್ಯಗೊಳಿಸಿದ್ದಾರೆ.
Updated on: Dec 17, 2024 | 8:53 AM

ನ್ಯೂಝಿಲೆಂಡ್ ತಂಡದ ಖ್ಯಾತ ಆಟಗಾರ ಟಿಮ್ ಸೌಥಿ (Tim Southee) ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಹ್ಯಾಮಿಲ್ಟನ್ನ ಸೆಡನ್ ಪಾರ್ಕ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂಲಕ ಸೌಥಿ ದೀರ್ಘಾವಧಿಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನವೇ ನಿವೃತ್ತಿ ಘೋಷಿಸಿದ್ದ ಸೌಥಿ, ಇದೀಗ ಅಂತಿಮ ಪಂದ್ಯದಲ್ಲಿ 423 ರನ್ಗಳ ಭರ್ಜರಿ ಜಯದೊಂದಿಗೆ ಟೆಸ್ಟ್ ಕೆರಿಯರ್ ಕೊನೆಗೊಳಿಸಿದ್ದಾರೆ. ವಿಶೇಷ ಎಂದರೆ ಸೌಥಿ ಕೊನೆಯ ಟೆಸ್ಟ್ ಪಂದ್ಯದ ಮೂಲಕ ಹಲವು ವಿಶ್ವ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.

ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 3 ಸಿಕ್ಸ್ ಸಿಡಿಸುವ ಮೂಲಕ ಟಿಮ್ ಸೌಥಿ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿಸಿದ ಬೌಲರ್ ಎನಿಸಿಕೊಂಡಿದ್ದಾರೆ. 155 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಸೌಥಿ ಒಟ್ಟು 98 ಸಿಕ್ಸ್ಗಳೊಂದಿಗೆ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಹಾಗೆಯೇ ಕ್ರಿಕೆಟ್ ಇತಿಹಾಸದಲ್ಲಿ ಮೂರು ಸ್ವರೂಪಗಳಲ್ಲೂ 150+ ವಿಕೆಟ್ ಪಡೆದ ವಿಶ್ವದ ಏಕೈಕ ಬೌಲರ್ ಎಂಬ ವಿಶ್ವ ದಾಖಲೆ ಕೂಡ ಟಿಮ್ ಸೌಥಿ ಹೆಸರಿನಲ್ಲಿದೆ. ಟೆಸ್ಟ್ನಲ್ಲಿ 391 ವಿಕೆಟ್ ಪಡೆದಿರುವ ಸೌಥಿ, ಏಕದಿನ ಕ್ರಿಕೆಟ್ನಲ್ಲಿ 221 ವಿಕೆಟ್ ಕಬಳಿಸಿದ್ದಾರೆ. ಇನ್ನು ಟಿ20 ಕ್ರಿಕೆಟ್ನಲ್ಲಿ 164 ವಿಕೆಟ್ ಪಡೆದು ಮಿಂಚಿದ್ದಾರೆ.

16 ವರ್ಷಗಳ ತಮ್ಮ ಟೆಸ್ಟ್ ಕ್ರಿಕೆಟ್ ಕೆರಿಯರ್ನಲ್ಲಿ ಟಿಮ್ ಸೌಥಿ ಒಟ್ಟು 106 ಪಂದ್ಯಗಳಲ್ಲಿ 23376 + ಎಸೆತಗಳನ್ನು ಎಸೆದಿದ್ದು, ಈ ವೇಳೆ 391 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ನ್ಯೂಝಿಲೆಂಡ್ ಪರ ಟೆಸ್ಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ 2ನೇ ಬೌಲರ್ ಎನಿಸಿಕೊಂಡಿದ್ದಾರೆ. ಇದೀಗ ತಮ್ಮ 36ನೇ ವಯಸ್ಸಿನಲ್ಲಿ ಟೆಸ್ಟ್ ವೃತ್ತಿಜೀವನ ಅಂತ್ಯಗೊಳಿಸಲು ಟಿಮ್ ಸೌಥಿ ನಿರ್ಧರಿಸಿದ್ದಾರೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More



