ಶರವೇಗದ ಸೆಂಚುರಿ… ಉರ್ವಿಲ್ ಪಟೇಲ್ ವಿಶ್ವ ದಾಖಲೆ
Urvil Pate World Record: ಟಿ20 ಕ್ರಿಕೆಟ್‌ನಲ್ಲಿ ಅತೀ ವೇಗದ ಶತಕ ಸಿಡಿಸಿದ ವಿಶ್ವ ದಾಖಲೆ ಸಾಹಿಲ್ ಚೌಹಾನ್ ಹೆಸರಿನಲ್ಲಿದೆ. 2024 ರಲ್ಲಿ ಎಸ್ಟೋನಿಯಾ ಪರ ಕಣಕ್ಕಿಳಿದ ಸಾಹಿಲ್, ಸೈಪ್ರಸ್ ವಿರುದ್ಧ ಕೇವಲ 27 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇದೀಗ ಟಿ20 ಕ್ರಿಕೆಟ್‌ನಲ್ಲಿ ಎರಡು ವಿಸ್ಫೋಟಕ ಸೆಂಚುರಿ ಸಿಡಿಸಿರುವ ಉರ್ವಿಲ್ ಪಟೇಲ್ ಮುಂದೊಂದು ದಿನ ಈ ವಿಶ್ವ ದಾಖಲೆಯನ್ನು ಮುರಿದರೂ ಅಚ್ಚರಿಪಡಬೇಕಿಲ್ಲ.
Updated on: Nov 27, 2025 | 7:23 AM

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಅದು ಕೂಡ ಸ್ಪೋಟಕ ಸೆಂಚುರಿಯೊಂದಿಗೆ ಎಂಬುದು ವಿಶೇಷ. ಹೀಗೆ ಅತೀ ಕಡಿಮೆ ಎಸೆತಗಳಲ್ಲಿ ಶತಕ ಬಾರಿಸಿ ಹೊಸ ದಾಖಲೆ ಬರೆದ ಬ್ಯಾಟರ್ನ ಹೆಸರು ಉರ್ವಿಲ್ ಪಟೇಲ್ (Urvil Patel).

ಹೈದರಾಬಾದಿನ ಜಿಮ್ಖಾನ ಮೈದಾನದಲ್ಲಿ ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಪಂದ್ಯದಲ್ಲಿ ಉರ್ವಿಲ್ ಪಟೇಲ್ ಕೇವಲ 31 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸರ್ವಿಸಸ್ ತಂಡವು 20 ಓವರ್‌ಗಳಲ್ಲಿ 182 ರನ್ ಕಲೆಹಾಕಿದ್ದರು.

183 ರನ್ ಗಳ ಗುರಿ ಬೆನ್ನತ್ತಿದ ಗುಜರಾತ್ ಪರ ಆರಂಭಿಕನಾಗಿ ಕಣಕ್ಕಿಳಿದ ಉರ್ವಿಲ್ ಪಟೇಲ್ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಕೇವಲ 31 ಎಸೆತಗಳಲ್ಲಿ ಶತಕ ಮೂಡಿಬಂತು. ಅಷ್ಟೇ ಅಲ್ಲದೇ 37 ಎಸೆತಗಳಲ್ಲಿ 10 ಭರ್ಜರಿ ಸಿಕ್ಸ್ ಹಾಗೂ 12 ಫೋರ್ ಗಳೊಂದಿಗೆ ಅಜೇಯ 119 ರನ್ ಬಾರಿಸಿದರು. ಈ ಮೂಲಕ ಕೇವಲ 12.3 ಓವರ್‌ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು.

ಈ ಸ್ಫೋಟಕ ಶತಕದೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ 35 ಕ್ಕಿಂತ ಕಡಿಮೆ ಎಸೆತಗಳಲ್ಲಿ 2 ಶತಕ ಸಿಡಿಸಿದ ವಿಶ್ವದ ಏಕೈಕ ದಾಂಡಿಗ ಎಂಬ ವಿಶ್ವ ದಾಖಲೆಯೊಂದು ಉರ್ವಿಲ್ ಪಟೇಲ್ ಪಾಲಾಯಿತು. ಇದಕ್ಕೂ ಮುನ್ನ, ಅಂದರೆ 2024 ರ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೇ ಉರ್ವಿಲ್ ಕೇವಲ 28 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

ಇದೀಗ ಮತ್ತೊಮ್ಮೆ ಉರ್ವಿಲ್ ಅಬ್ಬರಿಸಿದ್ದಾರೆ. ಈ ಬಾರಿ ಮೂರಂಕಿ ಮೊತ್ತ ಗಳಿಸಲು 31 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ 35 ಕ್ಕಿಂತ ಕಡಿಮೆ ಎಸೆತಗಳಲ್ಲಿ ಎರಡು ವೇಗದ ಶತಕ ಸಿಡಿಸಿದ ಬ್ಯಾಟರ್ ಎಂಬ ಹೊಸ ದಾಖಲೆ ನಿರ್ಮಿಸಿದ್ದಾರೆ.




