
ಐಪಿಎಲ್ 2026 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯಲಿರುವ ಈ ಪಂದ್ಯದಲ್ಲಿ ಆರ್ಸಿಬಿ ಗೆದ್ದರೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಉಳಿಯುವುದರ ಜೊತೆಗೆ ಕ್ವಾಲಿಫೈಯರ್ 1 ಆಡಲಿದೆ. ಇನ್ನು ಇದೇ ಪಂದ್ಯದಲ್ಲಿ ಆರ್ಸಿಬಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತೊಂದು ಇತಿಹಾಸ ಸೃಷ್ಟಿಸುವ ಗುರಿ ಹೊಂದಿದ್ದಾರೆ (PC- RCB X).

ಇಂದಿನ ಐಪಿಎಲ್ ಪಂದ್ಯವು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಈ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಇತಿಹಾಸ ರಚಿಸಲು ಕೇವಲ 58 ರನ್‌ಗಳ ದೂರದಲ್ಲಿದ್ದಾರೆ. ಕೊಹ್ಲಿ 58 ರನ್ ಗಳಿಸುವ ಮೂಲಕ ಐಪಿಎಲ್‌ನಲ್ಲಿ ಯಾರು ಮಾಡದ ದಾಖಲೆ ನಿರ್ಮಿಸಲಿದ್ದಾರೆ (PC- RCB X).

ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 58 ರನ್‌ಗಳ ಇನ್ನಿಂಗ್ಸ್ ಆಡಿದರೆ ಈ ಸೀಸನ್ನಲ್ಲಿ 600 ರನ್‌ಗಳ ಗಡಿ ದಾಟಲಿದ್ದಾರೆ. ಈ ಮೂಲಕ ಸತತ 4 ಸೀಸನ್‌ಗಳಲ್ಲಿ 600 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ದಾಖಲೆ ನಿರ್ಮಿಸಲಿದ್ದಾರೆ. ಕಿಂಗ್ ಕೊಹ್ಲಿ 2023 ರಲ್ಲಿ 639, 2024 ರಲ್ಲಿ 741 ಮತ್ತು 2025 ರಲ್ಲಿ 657 ರನ್ ಗಳಿಸಿದ್ದಾರೆ (PC- RCB X).

ಇನ್ನು ಐಪಿಎಲ್ 2026 ರಲ್ಲಿ ವಿರಾಟ್ ಕೊಹ್ಲಿ ಆಡಿರುವ 13 ಪಂದ್ಯಗಳಲ್ಲಿ 54.20 ಸರಾಸರಿ ಮತ್ತು 164.74 ಸ್ಟ್ರೈಕ್ ರೇಟ್ ನಲ್ಲಿ 542 ರನ್ ಗಳಿಸಿದ್ದಾರೆ. ಕೊಹ್ಲಿ ಇಂದು 58 ರನ್ ಗಳಿಸಿದರೆ, ಸತತ ನಾಲ್ಕು ಸೀಸನ್‌ಗಳಲ್ಲಿ 600 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ (PC- RCB X).

ಹೌದು, ವಿರಾಟ್ ಕೊಹ್ಲಿ ಹೊರತುಪಡಿಸಿ, ಕ್ರಿಸ್ ಗೇಲ್, ಡೇವಿಡ್ ವಾರ್ನರ್ ಮತ್ತು ಕೆಎಲ್ ರಾಹುಲ್ ಎಲ್ಲರೂ ಸತತ ಮೂರು ಆವೃತ್ತಿಗಳಲ್ಲಿ 600 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಆದಾಗ್ಯೂ, ಯಾವುದೇ ಬ್ಯಾಟ್ಸ್‌ಮನ್ ನಾಲ್ಕು ಬಾರಿ ಈ ಸಾಧನೆಯನ್ನು ಮಾಡಿಲ್ಲ. ಇಂದು, ಕಿಂಗ್ ಕೊಹ್ಲಿಗೆ ಇತಿಹಾಸ ನಿರ್ಮಿಸುವ ಅವಕಾಶವಿದೆ (PC- RCB X).