Virat Kohli: ನಿಧಾನವೇ ಪ್ರಧಾನ… ಅನಗತ್ಯ ದಾಖಲೆ ಬರೆದ ವಿರಾಟ್ ಕೊಹ್ಲಿ
IPL 2025 Virat Kohli: ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಒಟ್ಟು 61 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ 61 ಹಾಫ್ ಸೆಂಚುರಿಗಳಲ್ಲಿ ಮೂರು ಅರ್ಧಶತಕ ಮೂಡಿಬಂದಿದ್ದು 44 ಕ್ಕಿಂತ ಹೆಚ್ಚಿನ ಎಸೆತಗಳಲ್ಲಿ. ಈ ಮೂಲಕ ಐಪಿಎಲ್ನಲ್ಲಿ ಮೂರು ಬಾರಿ 44+ ಬಾಲ್ಗಳನ್ನು ಎದುರಿಸಿ ಅರ್ಧಶತಕ ಬಾರಿಸಿದ ಬ್ಯಾಟರ್ ಎಂಬ ಅನಗತ್ಯ ದಾಖಲೆಯನ್ನು ಕೊಹ್ಲಿ ನಿರ್ಮಿಸಿದ್ದಾರೆ.
Updated on: Apr 28, 2025 | 8:24 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 46ನೇ ಪಂದ್ಯದ ಮೂಲಕ ವಿರಾಟ್ ಕೊಹ್ಲಿ (Virat Kohli) ಅನಗತ್ಯ ದಾಖಲೆ ಬರೆದಿದ್ದಾರೆ. ಅದು ಸಹ ಅರ್ಧಶತಕ ಬಾರಿಸಿ ಎಂಬುದು ವಿಶೇಷ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿತು.

163 ರನ್ಗಳ ಗುರಿ ಬೆನ್ನತ್ತಿದ ಆರ್ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಉತ್ತಮ ಆರಂಭ ಒದಗಿಸಿದ್ದರು. ಅದರಲ್ಲೂ ಕಷ್ಟಕರವಾಗಿದ್ದ ಪಿಚ್ನಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ 45 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರೊಂದಿಗೆ ಈ ಬಾರಿಯ ಐಪಿಎಲ್ನಲ್ಲಿ ಅತ್ಯಂತ ನಿಧಾನಗತಿಯಲ್ಲಿ ಅರ್ಧಶತಕ ಬಾರಿಸಿದ ದಾಖಲೆ ವಿರಾಟ್ ಕೊಹ್ಲಿ ಪಾಲಾಯಿತು.

ಇದಕ್ಕೂ ಮುನ್ನ ಈ ದಾಖಲೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿಜಯ್ ಶಂಕರ್ ಹೆಸರಿನಲ್ಲಿತ್ತು. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 43 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ವಿಜಯ್ ಶಂಕರ್ ಈ ಅನಗತ್ಯ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಮುರಿದು ಕೊಹ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಅಂದಹಾಗೆ ಇದು ವಿರಾಟ್ ಕೊಹ್ಲಿ ಅವರ ಐಪಿಎಲ್ ಕೆರಿಯರ್ನ ಅತ್ಯಂತ ನಿಧಾನಗತಿಯ ಅರ್ಧಶತಕವಲ್ಲ. ಇದಕ್ಕೂ ಮುನ್ನ 2016 ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 47 ಎಸೆತಗಳನ್ನು ಎದುರಿಸಿ ಅರ್ಧಶತಕ ಬಾರಿಸಿದ್ದರು. ಇದೀಗ 45 ಎಸೆತಗಳ ಮೂಲಕ ಹಾಫ್ ಸೆಂಚುರಿ ಪೂರೈಸಿ ಅನಗತ್ಯ ದಾಖಲೆಗೆ ಮತ್ತೊಮ್ಮೆ ಕೊರೊಳೊಡ್ಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ 47 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 4 ಫೋರ್ಗಳೊಂದಿಗೆ 51 ರನ್ ಬಾರಿಸಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 163 ರನ್ಗಳ ಗುರಿಯನ್ನು ಆರ್ಸಿಬಿ ತಂಡ 18.3 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ರಾಯಲ್ ಪಡೆ 6 ವಿಕೆಟ್ಗಳ ಜಯ ಸಾಧಿಸಿದೆ.

ಅಂದಹಾಗೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಂತ ನಿಧಾನಗತಿಯ ಅರ್ಧಶತಕ ಬಾರಿಸಿದ ದಾಖಲೆ ಸೌತ್ ಆಫ್ರಿಕಾದ ಜೆಪಿ ಡುಮಿನಿ ಹೆಸರಿನಲ್ಲಿದೆ. 2009ರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದ ಡುಮಿನಿ ಅರ್ಧಶತಕ ಬಾರಿಸಲು ಬರೋಬ್ಬರಿ 55 ಎಸೆತಗಳನ್ನು ತೆಗೆದುಕೊಂಡಿದ್ದರು. ಇದುವೇ ಐಪಿಎಲ್ ಇತಿಹಾಸದ ಅತ್ಯಂತ ನಿಧಾನಗತಿಯ ಅರ್ಧಶತಕವಾಗಿದೆ.




