Updated on: Sep 19, 2021 | 5:22 PM
ಐಪಿಎಲ್ನ ದ್ವಿತಿಯಾರ್ಧಕ್ಕೆ ಭಾನುವಾರ ಚಾಲನೆ ದೊರೆಯಲಿದೆ. ಟೂರ್ನಿಯ ಉಳಿದ 31 ಪಂದ್ಯಗಳನ್ನು ಯುಎಇನ ಶಾರ್ಜಾ, ಅಬುಧಾಬಿ ಹಾಗೂ ದುಬೈ ಕ್ರಿಕೆಟ್ ಮೈದಾನದಲ್ಲಿ ಆಡಲಾಗುತ್ತದೆ. ಆದರೆ ದ್ವಿತಿಯಾರ್ಧ ಆರಂಭಕ್ಕೂ ಮುನ್ನವೇ ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ತಂಡವನ್ನು ಹೆಸರಿಸಿದ್ದಾರೆ ಟೀಮ್ ಇಂಡಿಯಾ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್.
ಈ ಬಗ್ಗೆ ಮಾತನಾಡಿರುವ ವೀರು, ಯುಎಇನಲ್ಲಿ ನನ್ನ ಪ್ರಕಾರ ಚಾಂಪಿಯನ್ ಆಗುವ ತಂಡ ಮುಂಬೈ ಇಂಡಿಯನ್ಸ್. ರೋಹಿತ್ ಶರ್ಮಾ ನೇತೃತ್ವದ ಮುಂಬೈ ತಂಡವು ಈ ಸಲ ಕೂಡ ಕಪ್ ಗೆಲ್ಲಲಿದೆ ಎಂದಿದ್ದಾರೆ. ಇದಾಗ್ಯೂ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಉತ್ತಮ ತಂಡವಾಗಿದ್ದು, ಅವರಿಗೂ ಉತ್ತಮ ಅವಕಾಶ ಇದೆ ಎಂದು ತಿಳಿಸಿದ್ದಾರೆ.
ಯುಎಇನಲ್ಲಿ ಟ್ರೋಫಿ ಗೆಲ್ಲುವ ಫೇವರೇಟ್ ತಂಡಗಳಲ್ಲಿ ಮುಂಬೈ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಂಚೂಣಿಯಲ್ಲಿದೆ. ಇದಾಗ್ಯೂ ಐದು ಬಾರಿಯ ಚಾಂಪಿಯನ್ ತಂಡ ಮುಂಬೈ ಸ್ವಲ್ಪ ಮುಂದಿದೆ ಎನ್ನಬಹುದು. ಹೀಗಾಗಿ ನನ್ನ ಪ್ರಕಾರ ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂದು ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ.
ಇನ್ನು ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಅವಕಾಶ ಇರುವುದಾಗಿ ತಿಳಿಸಿರುವ ಸೆಹ್ವಾಗ್, ಮುಂಬೈ ಹೊರತುಪಡಿಸಿದರೆ ಪ್ರಶಸ್ತಿ ಡೆಲ್ಲಿ ಪಾಲಾಗಲಿದೆ ಎಂದಿದ್ದಾರೆ. ಅಷ್ಟೇ ಅಲ್ಲದೆ ಐಪಿಎಲ್ನ ಪ್ರದರ್ಶನದಿಂದಾಗಿ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ಟೀಮ್ ಇಂಡಿಯಾದಲ್ಲೂ ಬದಲಾವಣೆಯಾಗಲಿದೆ ಎಂದು ವೀರು ತಿಳಿಸಿದ್ದಾರೆ.
ಕೂ ಆಪ್ಗೆ ಎಂಟ್ರಿಕೊಟ್ಟ ವೀರೇಂದ್ರ ಸೆಹ್ವಾಗ್