5 ಓವರ್ಗಳಲ್ಲಿ ವಿಶ್ವ ದಾಖಲೆ ನಿರ್ಮಿಸಿದ ವೆಸ್ಟ್ ಇಂಡೀಸ್
New Zealand vs West Indies: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ರೋಚಕ ಜಯ ಸಾಧಿಸಿದೆ. ಆಕ್ಲೆಂಡ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡ 5 ವಿಕೆಟ್ ಕಳೆದುಕೊಂಡು 207 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 204 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
Updated on: Nov 08, 2025 | 7:10 AM

ಟಿ20 ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ (West Indies) ತಂಡ ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ಕೊನೆಯ 5 ಓವರ್ಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ. ಆಕ್ಲೆಂಡ್ನ ಈಡನ್ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂಝಿಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 207 ರನ್ ಕಲೆಹಾಕಿತು. ಈ ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಅಲ್ಲದೆ ಕೇವಲ 86 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ಕಣಕ್ಕಿಳಿದ ರೋವ್ಮನ್ ಪೊವೆಲ್ ಹಾಗೂ ರೊಮಾರಿಯೊ ಶೆಫರ್ಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ 15 ಓವರ್ಗಳ ಮುಕ್ತಾಯದ ವೇಳೆಗೆ ವೆಸ್ಟ್ ಇಂಡೀಶ್ ತಂಡವು 6 ವಿಕೆಟ್ ಕಳೆದುಕೊಂಡು ಬರೋಬ್ಹರಿ 117 ರನ್ ಕಲೆಹಾಕಿತು.

ಇದಾದ ಬಳಿಕ ಶುರುವಾಗಿದ್ದೇ ಸಿಡಿಲಬ್ಬರ. ರೋವ್ಮನ್ ಪೊವೆಲ್ ಹಾಗೂ ರೊಮಾರಿಯೊ ಶೆಫರ್ಡ್ ಸಿಕ್ಸರ್ಗಳ ಸುರಿಮಳೆಗೈದರು. 16ನೇ ಓವರ್ನಲ್ಲಿ 24 ರನ್ ಚಚ್ಚಿದ ಈ ಜೋಡಿಯು 17ನೇ ಓವರ್ನಲ್ಲಿ 15 ರನ್ ಕಲೆಹಾಕಿತು. ಈ ಹಂತದಲ್ಲಿ 34 ರನ್ ಬಾರಿಸಿದ ರೊಮಾರಿಯೊ ಶೆಫರ್ಡ್ ಔಟಾದರು.

ಆ ಬಳಿಕ ರೋವ್ಮನ್ ಪೊವೆಲ್ ಹಾಗೂ ಮ್ಯಾಥ್ಯೂ ಫೋರ್ಡ್ ಅಬ್ಬರ ಶುರುವಾಯಿತು. ಪರಿಣಾಮ 18ನೇ ಓವರ್ನಲ್ಲಿ 22 ರನ್ಗಳು ಮೂಡಿಬಂದವು. ಆ ನಂತರದ 6 ಎಸೆತಗಳಲ್ಲಿ 14 ರನ್ ಮೂಡಿಬಂತು. ಇನ್ನು ಕೊನೆಯ ಓವರ್ನಲ್ಲಿ 12 ರನ್ ಕಲೆಹಾಕಿತು. ಈ ಮೂಲಕ ವೆಸ್ಟ್ ಇಂಡೀಸ್ ತಂಡವು 20 ಓವರ್ಗಳಲ್ಲಿ 204 ರನ್ಗಳಿಸಿ 3 ರನ್ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿತು.

ಅಂದರೆ 15 ಓವರ್ಗಳಲ್ಲಿ 117 ರನ್ ಕಲೆಹಾಕಿದ್ದ ವೆಸ್ಟ್ ಇಂಡೀಸ್ ಕೊನೆಯ 5 ಓವರ್ಗಳಿಸಿದ್ದು ಬರೋಬ್ಬರಿ 87 ರನ್ಗಳು. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕೊನೆಯ 5 ಓವರ್ಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ತಂಡವೆಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಇಂಗ್ಲೆಂಡ್ ತಂಡದ ಹೆಸರಿನಲ್ಲಿತ್ತು. 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ಕೊನೆಯ 5 ಓವರ್ಗಳಲ್ಲಿ 86 ರನ್ ಬಾರಿಸಿ ಈ ದಾಖಲೆ ನಿರ್ಮಿಸಿದ್ದರು. ಇದೀಗ ಈ ಭರ್ಜರಿ ದಾಖಲೆಯನ್ನು ಮುರಿಯುವಲ್ಲಿ ವೆಸ್ಟ್ ಇಂಡೀಸ್ ತಂಡ ಯಶಸ್ವಿಯಾಗಿದೆ.

ನ್ಯೂಝಿಲೆಂಡ್ ವಿರುದ್ಧದ ಪಂದ್ಯದ ಕೊನೆಯ 5 ಓವರ್ಗಳಲ್ಲಿ ಬರೋಬ್ಬರಿ 87 ರನ್ ಬಾರಿಸಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಕೊನೆಯ 30 ಎಸೆತಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ವೆಸ್ಟ್ ಇಂಡೀಸ್ ಪಡೆ ತನ್ನದಾಗಿಸಿಕೊಂಡಿದೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More
