- Kannada News Photo gallery Cricket photos WPL 2026: Gujarat Giants Set Record 207, Beat UP Warriorz by 10 Runs
WPL 2026: 400 ಕ್ಕೂ ಅಧಿಕ ರನ್, 21 ಸಿಕ್ಸರ್; ಮೊದಲ ಪಂದ್ಯದಲ್ಲೇ ಇತಿಹಾಸ ಸೃಷ್ಟಿ
Women's Premier League 2026: WPL 2026ರ ಎರಡನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಯುಪಿ ವಾರಿಯರ್ಸ್ ವಿರುದ್ಧ ಸೆಣಸಾಡಿತು. ಆಶ್ಲೇ ಗಾರ್ಡ್ನರ್ ಮತ್ತು ಅನುಷ್ಕಾ ಶರ್ಮಾ ಅವರ ಶತಕದ ಜೊತೆಯಾಟದಿಂದ ಗುಜರಾತ್ 207 ರನ್ ಗಳಿಸಿ ದಾಖಲೆ ನಿರ್ಮಿಸಿತು. ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ಉತ್ತಮ ಆರಂಭ ಪಡೆಯದೇ, ಫೋಬೆ ಲಿಚ್‌ಫೀಲ್ಡ್ ಅವರ ಹೋರಾಟದ ಹೊರತಾಗಿಯೂ, 10 ರನ್‌ಗಳಿಂದ ಸೋಲು ಕಂಡಿತು. ಗುಜರಾತ್ ತಂಡ ಐತಿಹಾಸಿಕ ಗೆಲುವು ಸಾಧಿಸಿತು.
Updated on:Jan 10, 2026 | 7:00 PM

ಮಹಿಳಾ ಪ್ರೀಮಿಯರ್ ಲೀಗ್ 2026 ರ ಎರಡನೇ ಪಂದ್ಯ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಒಮ್ಮೆಯೂ ಪ್ರಶಸ್ತಿ ಗೆಲ್ಲದ ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ದಾಖಲೆಯ 207 ರನ್ ಕಲೆಹಾಕಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ನಾಯಕಿ ಆಶ್ಲೇ ಗಾರ್ಡ್ನರ್ ಮತ್ತು ಅನುಷ್ಕಾ ಶರ್ಮಾ ಅವರ ಶತಕದ ಜೊತೆಯಾಟದ ಮೂಲಕ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳಿಗೆ 207 ರನ್ ಗಳಿಸಿತು. ಇದು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್‌ನ ಅತ್ಯಧಿಕ ಸ್ಕೋರ್ ಆಗಿದೆ. 2023 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್‌ನ ಹಿಂದಿನ ಅತ್ಯಧಿಕ ಸ್ಕೋರ್ ಏಳು ವಿಕೆಟ್‌ಗೆ 201 ಆಗಿತ್ತು.

ಗುಜರಾತ್ ತಂಡಕ್ಕೆ ಬೆತ್ ಮೂನಿ ಮತ್ತು ಸೋಫಿ ಡಿವೈನ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 41 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಮೂನಿ 13 ರನ್ ಗಳಿಸಿ ಔಟಾದರೆ, ಸೋಫಿ ಡಿವೈನ್ 55 ರನ್‌ಗಳಿಗೆ ಔಟಾದರು. ಆ ಬಳಿಕ ಜೊತೆಯಾದ ಅನುಷ್ಕಾ ಶರ್ಮಾ ಹಾಗೂ ನಾಯಕಿ ಆಶ್ಲೀ ಗಾರ್ಡ್ನರ್ ಜೋಡಿ ಮೂರನೇ ವಿಕೆಟ್‌ಗೆ 103 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡು ತಂಡದ ಸ್ಕೋರ್ ಅನ್ನು 150 ದಾಟಿಸಿತು.

ಅನುಷ್ಕಾ 30 ಎಸೆತಗಳಲ್ಲಿ 44 ರನ್ ಗಳಿಸಿದರೆ, ಗಾರ್ಡ್ನರ್ 41 ಎಸೆತಗಳಲ್ಲಿ 65 ರನ್ ಗಳಿಸಿದರು. ಮೂರನೇ ವಿಕೆಟ್‌ಗೆ 103 ರನ್‌ಗಳ ಪಾಲುದಾರಿಕೆಯು ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮೂರನೇ ಅತ್ಯಧಿಕ ಜೊತೆಯಾಟವಾಗಿದೆ. 2023 ರಲ್ಲಿ ಹರ್ಮನ್ಪ್ರೀತ್ ಕೌರ್ ಮತ್ತು ನ್ಯಾಟ್ ಶೀವರ್ ಬ್ರಂಟ್ ನಡುವಿನ 106 ರನ್‌ಗಳ ಪಾಲುದಾರಿಕೆಯು ಇದುವರೆಗಿನ ಅತ್ಯಧಿಕ ಮೊತ್ತವಾಗಿತ್ತು.

ಈ ಗುರಿ ಬೆನ್ನಟ್ಟಿದ ಬೆನ್ನಟ್ಟಿದ ಯುಪಿ ವಾರಿಯರ್ಸ್‌ಗೆ ಉತ್ತಮ ಆರಂಭ ದೊರೆಯಲಿಲ್ಲ. ಕಿರಣ್ ನವ್‌ಗಿರೆ ಕೇವಲ 1 ರನ್‌ಗೆ ಔಟಾದರು. ನಂತರ ಮೆಗ್ ಲ್ಯಾನಿಂಗ್ ಮತ್ತು ಫೋಬೆ ಲಿಚ್‌ಫೀಲ್ಡ್ ತಂಡದ ಇನ್ನಿಂಗ್ಸ್ಗೆ ಜೀವ ತುಂಬಿದರು. ಎರಡನೇ ವಿಕೆಟ್‌ಗೆ 70 ರನ್‌ಗಳ ಜೊತೆಯಾಟವಾಡಿದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಎರಡು ವಿಕೆಟ್‌ಗಳು ಬ್ಯಾಕ್ ಟು ಬ್ಯಾಕ್ ಉರುಳಿದವು.

ಮೆಗ್ ಲ್ಯಾನಿಂಗ್ 30 ರನ್‌ಗಳಿಗೆ ಔಟಾದರೆ, ನಂತರ ಬ್ಯಾಟಿಂಗ್‌ಗೆ ಬಂದ ಹರ್ಲೀನ್ ಡಿಯೋಲ್ 0 ರನ್‌ಗೆ ಮತ್ತು ದೀಪ್ತಿ ಶರ್ಮಾ 1 ರನ್‌ಗೆ ಔಟಾದರು. ಇದು ತಂಡದ ಮೇಲೆ ಒತ್ತಡವನ್ನು ಹೆಚ್ಚಿಸಿತು ಮತ್ತು ಸೋಲಿನತ್ತ ಸಾಗಲು ಪ್ರಾರಂಭಿಸಿತು. ಕೊನೆಯ ಓವರ್‌ನಲ್ಲಿ ಗೆಲ್ಲಲು 27 ರನ್‌ಗಳು ಬೇಕಾಗಿದ್ದವು. ಆದರೆ 15 ರನ್ ಕಲೆಹಾಕಲಷ್ಟೇ ಶಕ್ತವಾದ ಯುಪಿ ತಂಡವು 10 ರನ್‌ಗಳಿಂದ ಸೋತಿತು.

ತಂಡದ ಪರ ಏಕಾಂಗಿ ಹೋರಾಟ ನೀಡಿದ ಫೋಬೆ ಲಿಚ್‌ಫೀಲ್ಡ್ 40 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 78 ರನ್ ಬಾರಿಸಿದರು. ಆದರೆ ಇನ್ನೊಂದು ತುದಿಯಲ್ಲಿ ಲಿಚ್ಫೀಲ್ಡ್ಗೆ ಬೆಂಬಲ ಸಿಗಲಿಲ್ಲ. ಸಿಕ್ಕಿದ್ದರೆ, ಯುಪಿಗೆ ಗೆಲುವು ಸುಲಭವಾಗಿ ಧಕ್ಕುತ್ತಿತ್ತು. ಕೊನೆಯಲ್ಲಿ ಆಶಾ ಸೋಬನಾ ಕೂಡ 10 ಎಸೆತಗಳಲ್ಲಿ 27 ರನ್ ಬಾರಿಸಿ ಸೋಲಿನ ಅಂತರವನ್ನು ತಗ್ಗಿಸಿದರು.
Published On - 6:46 pm, Sat, 10 January 26
