ಜಿಂಬಾಬ್ವೆಯ ಐಸಿಸಿ ಅಂಡರ್-19 ವಿಶ್ವಕಪ್ ತಂಡದ ನಾಲ್ವರು ಸದಸ್ಯರಲ್ಲಿ ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿದೆ. ಇದನ್ನು ದೇಶದ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ. ಭಾನುವಾರ ಬಾರ್ಬಡೋಸ್‌ನಲ್ಲಿ ಐರ್ಲೆಂಡ್ ಅಂಡರ್-19 ವಿರುದ್ಧದ ನಾಲ್ಕು ಪಂದ್ಯಗಳ ಯುವ ಏಕದಿನ ಸರಣಿಯಲ್ಲಿ ಭಾಗವಹಿಸಿದ್ದ ಆಟಗಾರರು ಸೋಮವಾರ ಬೆಳಿಗ್ಗೆ ಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದರು.
ಜಿಂಬಾಬ್ವೆ ಕ್ರಿಕೆಟ್ ಹೇಳಿಕೆಯಲ್ಲಿ, 'ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ 2022 ರ ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‌ಗಾಗಿ ಜಿಂಬಾಬ್ವೆ ಅಂಡರ್-19 ತಂಡದಲ್ಲಿ ಸೇರ್ಪಡೆಗೊಂಡ ನಾಲ್ವರು ಆಟಗಾರರು ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿರುವುದನ್ನು ಜಿಂಬಾಬ್ವೆ ಕ್ರಿಕೆಟ್ ಖಚಿತಪಡಿಸುತ್ತದೆ. ಈ ನಾಲ್ಕು ಆಟಗಾರರಿಗೆ ಯಾವುದೇ ರೋಗಲಕ್ಷಣಗಳಿಲ್ಲ ಮತ್ತು ಪ್ರಸ್ತುತ ಪ್ರತ್ಯೇಕವಾಗಿದ್ದಾರೆ. ಸೇಂಟ್ ಕಿಟ್ಸ್ ಮತ್ತು ನೆವಿಸ್‌ನಲ್ಲಿ ಜಿಂಬಾಬ್ವೆಯ ಅಭ್ಯಾಸ ಪಂದ್ಯಕ್ಕೂ ಮುನ್ನ ಈ ನಾಲ್ವರು ಆಟಗಾರರನ್ನು ಮತ್ತೊಮ್ಮೆ ಪರೀಕ್ಷಿಸಲಾಗುತ್ತದೆ.
ಜಿಂಬಾಬ್ವೆ ಕ್ರಿಕೆಟ್ ಹೇಳಿಕೆಯ ಪ್ರಕಾರ, ಈ ಆಟಗಾರರು ಪ್ರಸ್ತುತ ಪ್ರತ್ಯೇಕವಾಗಿದ್ದಾರೆ ಮತ್ತು ಮತ್ತೊಮ್ಮೆ ಪರೀಕ್ಷೆಗೆ ಒಳಪಡುತ್ತಾರೆ. ನಂತರ ಮಾತ್ರ ಅವರು ಸೇಂಟ್ ಕಿಟ್ಸ್ ಮತ್ತು ನೆವಿಸ್‌ನಲ್ಲಿ ತಂಡವು ಅಧಿಕೃತ ಪಂದ್ಯಗಳನ್ನು ಆಡುವ ಉಳಿದ ಆಟಗಾರರನ್ನು ಸೇರಲು ಸಾಧ್ಯವಾಗುತ್ತದೆ. ಜನವರಿ 9 ಮತ್ತು 11 ರಂದು ಕೆನಡಾ ಮತ್ತು ಬಾಂಗ್ಲಾದೇಶ ಬಾಸ್ಸೆಟೆರೆಯಲ್ಲಿ ಅಭ್ಯಾಸ ಪಂದ್ಯಗಳನ್ನು ಆಡಬೇಕು. ಅಭ್ಯಾಸ ಪಂದ್ಯಗಳ ನಂತರ ಐಸಿಸಿ ಅಂಡರ್-19 ಪುರುಷರ ಕ್ರಿಕೆಟ್ ವಿಶ್ವಕಪ್ ನಡೆಯಲಿದೆ. ಜನವರಿ 14 ರಿಂದ ಫೆಬ್ರವರಿ 5 ರವರೆಗೆ ವೆಸ್ಟ್ ಇಂಡೀಸ್‌ನಲ್ಲಿ ಈ ಪಂದ್ಯಾವಳಿ ನಡೆಯಲಿದೆ.
ಜಿಂಬಾಬ್ವೆಯನ್ನು ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಪಪುವಾ ನ್ಯೂಗಿನಿಯಾ ಜೊತೆಗೆ C ಗುಂಪಿನಲ್ಲಿ ಇರಿಸಲಾಗಿದೆ. ತಂಡವು ಜನವರಿ 16 ರಂದು ಟ್ರಿನಿಡಾಡ್ ಮತ್ತು ಟೊಬಾಗೊದ ಡಿಯಾಗೋ ಮಾರ್ಟಿನ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ. ಇದೇ ಮೈದಾನದಲ್ಲಿ ಜನವರಿ 20ರಂದು ತಂಡ ಪಪುವಾ ನ್ಯೂಗಿನಿಯಾ ವಿರುದ್ಧ ಸೆಣಸಲಿದೆ.
ಜಿಂಬಾಬ್ವೆ ಜನವರಿ 22 ರಂದು ಟ್ರಿನಿಡಾಡ್ ಮತ್ತು ಟೊಬಾಗೋದ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ತನ್ನ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಭಾರತ ತಂಡವು ಜನವರಿ 15 ರಂದು ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
Published On - 5:59 pm, Tue, 4 January 22