Updated on:Jan 05, 2022 | 5:46 PM
ಬಿಗ್ ಬ್ಯಾಷ್ ಲೀಗ್‌ನ 11 ನೇ ಸೀಸನ್ನ 35ನೇ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಹಾಗೂ ಹೋಬರ್ಟ್ ಹರಿಕೇನ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೋಬಾರ್ಟ್ ತಂಡವು ಆರಂಭಿಕ ಆಘಾತಕ್ಕೆ ಸಿಲುಕಿತ್ತು. ಅಡಿಲೇಡ್ ತಂಡದ ನಾಯಕ ಪೀಟರ್ ಸಿಡ್ಲ್ ಅವರ ಮಾರಕ ಬೌಲಿಂಗ್ಗೆ ತತ್ತರಿಸಿದ ಹೋಬಾರ್ಟ್ 19 ಓವರ್‌ಗಳಲ್ಲಿ ಕೇವಲ 126 ರನ್‌ಗಳಿಗೆ ಆಲೌಟ್ ಆಯಿತು.
3.5 ಓವರ್ ಮಾಡಿದ ಪೀಟರ್ ಸಿಡ್ಲ್ ಕೇವಲ 23 ರನ್ ನೀಡಿ ಐದು ವಿಕೆಟ್ ಕಬಳಿಸಿದರು. ಇನ್ನು 127 ರನ್ಗಳ ಸಾಧಾರಣ ಗುರಿ ಪಡೆದ ಅಡಿಲೇಡ್ ಸ್ಟ್ರೈಕರ್ಸ್ ತಂಡವು ಮ್ಯಾಥ್ಯೂ ಶಾರ್ಟ್ ಅವರ ಅರ್ಧಶತಕದ ನೆರವಿನಿಂದ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಈ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿ ಗೆಲುವಿನ ರೂವಾರಿ ಎನಿಸಿಕೊಂಡ ಪೀಟರ್ ಸಿಡ್ಲ್ ಬಿಗ್ ಬ್ಯಾಷ್ ಲೀಗ್‌ನಲ್ಲಿ ಹೊಸ ದಾಖಲೆ ಬರೆದರು. ಕಳೆದ 11 ಸೀಸನ್ ಬಿಬಿಎಲ್ನಲ್ಲಿ ಯಾವುದೇ ನಾಯಕ ಐದು ವಿಕೆಟ್ ಕಬಳಿಸಿರಲಿಲ್ಲ.
ಇದೀಗ ಅಡಿಲೇಡ್ ತಂಡದ ನಾಯಕ ಪೀಟರ್ ಸಿಡ್ಲ್ ಹೋಬಾರ್ಟ್ ತಂಡದ ಐದು ವಿಕೆಟ್ ಉರುಳಿಸಿ ಬಿಬಿಎಲ್ನಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿಕೊಂಡರು. ಈ ಮೂಲಕ ಬಿಬಿಎಲ್ನಲ್ಲಿ ಚೊಚ್ಚಲ ಬಾರಿಗೆ 5 ವಿಕೆಟ್ ಕಬಳಿಸಿ ನಾಯಕ ಎಂಬ ಹೆಗ್ಗಳಿಕೆ ಪೀಟರ್ ಸಿಡ್ಲ್ ಪಾಲಾಯಿತು.
ಇನ್ನು ಬಿಗ್ ಬ್ಯಾಷ್ ಲೀಗ್‌ನಲ್ಲಿ ಪೀಟರ್ ಸಿಡ್ಲ್ ಎರಡನೇ ಬಾರಿಗೆ ಐದು ವಿಕೆಟ್ ಕಬಳಿಸಿರುವುದು ವಿಶೇಷ. 2020 ರಲ್ಲಿ ಹೋಬಾರ್ಟ್ ಹರಿಕೇನ್ಸ್ ತಂಡದ ವಿರುದ್ಧವೇ 16 ರನ್‌ಗಳಿಗೆ 5 ವಿಕೆಟ್ ಪಡೆದು ಮಿಂಚಿದ್ದರು. ಇದೀಗ ಮತ್ತೊಮ್ಮೆ ನಾಯಕನಾಗಿ 5 ವಿಕೆಟ್ ಉರುಳಿಸಿ ದಾಖಲೆ ಬರೆದಿದ್ದಾರೆ.
Published On - 5:45 pm, Wed, 5 January 22