CWG 2022: ಕಳೆದ ಬಾರಿ 66 ಪದಕ ಗೆದ್ದಿದ್ದ ಭಾರತ; ಯಾವ ಕ್ರೀಡೆಯಲ್ಲಿ ಹೆಚ್ಚು ಪದಕ ಬಂದಿದ್ದು ಗೊತ್ತಾ?
CWG 2022: ಗೋಲ್ಡ್ ಕೋಸ್ಟ್‌ನಲ್ಲಿ ನಡೆದ 2018 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ 26 ಚಿನ್ನ, 20 ಬೆಳ್ಳಿ ಮತ್ತು 20 ಕಂಚಿನ ಪದಕ ಸೇರಿದಂತೆ ಒಟ್ಟು 66 ಪದಕಗಳನ್ನು ಗೆದ್ದುಕೊಂಡಿತು.
Updated on:Jul 21, 2022 | 6:18 PM

ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ ಆರಂಭವಾಗಲಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಪದಕ ಗೆಲ್ಲುವತ್ತ ಭಾರತದ ಕಣ್ಣು ನೆಟ್ಟಿದೆ. ಗೋಲ್ಡ್ ಕೋಸ್ಟ್‌ನಲ್ಲಿ ನಡೆದ 2018 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ 26 ಚಿನ್ನ, 20 ಬೆಳ್ಳಿ ಮತ್ತು 20 ಕಂಚಿನ ಪದಕ ಸೇರಿದಂತೆ ಒಟ್ಟು 66 ಪದಕಗಳನ್ನು ಗೆದ್ದುಕೊಂಡಿತು. ಶೂಟಿಂಗ್‌ನಲ್ಲಿ ಭಾರತ ಗರಿಷ್ಠ 16 ಪದಕಗಳನ್ನು ಗೆದ್ದ ಸಾಧನೆ ಮಾಡಿತ್ತು.

ಕಳೆದ ಕಾಮನ್‌ವೆಲ್ತ್‌ನಲ್ಲಿ ಭಾರತ ಶೂಟಿಂಗ್‌ನಲ್ಲಿ 7 ಚಿನ್ನ, 4 ಬೆಳ್ಳಿ ಮತ್ತು 5 ಕಂಚಿನ ಪದಕ ಸೇರಿದಂತೆ ಒಟ್ಟು 16 ಪದಕಗಳನ್ನು ಗೆದ್ದಿತ್ತು. ಜೀತು ರಾಯ್, ಹಿನಾ ಸಿಧು, ಶ್ರೇಯಸಿ ಸಿಂಗ್, ತೇಜಸ್ವನಿ ಸಾವಂತ್, ಅನೀಶ್ ಭನ್ವಾಲಾ, ಸಂಜೀವ್ ರಜಪೂತ್ ಮತ್ತು ಮನು ಭಾಕರ್ ಚಿನ್ನ ಗೆದ್ದಿದ್ದರು.

ಶೂಟಿಂಗ್ ನಂತರ ಭಾರತವು ಕುಸ್ತಿಯಲ್ಲಿ ಗರಿಷ್ಠ 12 ಪದಕಗಳನ್ನು ಗೆದ್ದಿತ್ತು. ಕುಸ್ತಿಯಲ್ಲಿ 5 ಚಿನ್ನ, 3 ಬೆಳ್ಳಿ ಮತ್ತು 4 ಕಂಚು ಸೇರಿದಂತೆ ಒಟ್ಟು 12 ಪದಕಗಳನ್ನು ಗೆದ್ದಿದ್ದಾರೆ. ರಾಹುಲ್ ಅವಾರೆ, ಸುಶೀಲ್ ಕುಮಾರ್, ಬಜರಂಗ್ ಪುನಿಯಾ, ಸುಮಿತ್ ಮಲಿಕ್ ಮತ್ತು ವಿನೇಶ್ ಫೋಗಟ್ ಚಿನ್ನ ಗೆದ್ದಿದ್ದರು.

ವೇಟ್‌ಲಿಫ್ಟಿಂಗ್‌ನಲ್ಲಿ ಭಾರತ ಕಳೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 5 ಚಿನ್ನ, 2 ಬೆಳ್ಳಿ ಮತ್ತು 2 ಕಂಚು ಸೇರಿದಂತೆ 9 ಪದಕಗಳನ್ನು ಗೆದ್ದುಕೊಂಡಿತ್ತು. ಮೀರಾಬಾಯಿ ಚಾನು, ಸಂಜಿತಾ ಚಾನು, ವೆಂಕಟ್ ರಾಹು, ಸತೀಶ್ ಶಿವಲಿಂಗಂ ಮತ್ತು ಪೂನಂ ಯಾದವ್ ಭಾರತಕ್ಕೆ ಚಿನ್ನದ ಪದಕಗಳನ್ನು ತಂದುಕೊಟ್ಟಿದ್ದರು.

ಬಾಕ್ಸಿಂಗ್‌ನಲ್ಲಿ ಭಾರತ 3 ಚಿನ್ನ, 3 ಬೆಳ್ಳಿ ಮತ್ತು 3 ಕಂಚು ಸೇರಿದಂತೆ ಒಟ್ಟು 9 ಪದಕಗಳನ್ನು ಗೆದ್ದುಕೊಂಡಿದೆ. ಭಾರತದ ಪರ ಮೇರಿ ಕೋಮ್, ಗೌರವ್ ಸೋಲಂಕಿ, ವಿಕಾಸ್ ಕೃಷ್ಣ ಯಾದವ್ ಗೋಲ್ಡನ್ ಪಂಚ್ ಹಾಕಿದ್ದರು.

ಟೇಬಲ್ ಟೆನಿಸ್‌ನಲ್ಲಿ ಭಾರತ 3 ಚಿನ್ನ, 2 ಬೆಳ್ಳಿ ಮತ್ತು 3 ಕಂಚು ಸೇರಿದಂತೆ 8 ಪದಕಗಳನ್ನು ಗೆದ್ದಿದೆ. ಮಹಿಳಾ ತಂಡ, ಪುರುಷರ ತಂಡ ಹೊರತುಪಡಿಸಿ, ಸಿಂಗಲ್ಸ್‌ನಲ್ಲಿ ಮಣಿಕಾ ಬಾತ್ರಾ ಚಿನ್ನ ಗೆದ್ದಿದ್ದರು.

ಕಳೆದ ಕಾಮನ್‌ವೆಲ್ತ್‌ನಲ್ಲಿ ಭಾರತ ಬ್ಯಾಡ್ಮಿಂಟನ್‌ನಲ್ಲಿ 2 ಚಿನ್ನ, 3 ಬೆಳ್ಳಿ ಮತ್ತು ಒಂದು ಕಂಚು ಸೇರಿದಂತೆ ಒಟ್ಟು 6 ಪದಕಗಳನ್ನು ಗೆದ್ದಿತ್ತು. ಒಂದು ಚಿನ್ನವನ್ನು ಮಿಶ್ರ ತಂಡ ಮತ್ತು ಇನ್ನೊಂದು ಚಿನ್ನವನ್ನು ಸೈನಾ ನೆಹ್ವಾಲ್ ಗೆದ್ದಿದ್ದರು.

ಅಥ್ಲೆಟಿಕ್ಸ್‌ನಲ್ಲಿ ಭಾರತ 1 ಚಿನ್ನ, 1 ಬೆಳ್ಳಿ ಮತ್ತು 1 ಕಂಚು ಸೇರಿದಂತೆ 3 ಪದಕಗಳನ್ನು ಗೆದ್ದಿದೆ. ನೀರಜ್ ಚೋಪ್ರಾ ಭಾರತಕ್ಕೆ ಅಥ್ಲೆಟಿಕ್ಸ್‌ನಲ್ಲಿ ಏಕೈಕ ಚಿನ್ನವನ್ನು ನೀಡಿದ್ದರು

ಸ್ಕ್ವಾಷ್‌ನಲ್ಲಿ ಭಾರತ 2 ಬೆಳ್ಳಿ ಪದಕ ಗೆದ್ದಿದೆ. ದೀಪಿಕಾ ಪಳ್ಳಿಕಲ್ ಮತ್ತು ಸೌರವ್ ಘೋಷಾಲ್ ಮಿಶ್ರ ತಂಡದಲ್ಲಿ ಪದಕ ಗೆದ್ದರು ಮತ್ತು ದೀಪಿಕಾ ಮತ್ತು ಜೋಸನ್ನಾ ಚಿನಪ್ಪ ಜೋಡಿಯು ಮಹಿಳೆಯರ ಡಬಲ್ಸ್‌ನಲ್ಲಿ ಭಾರತಕ್ಕೆ ಪದಕವನ್ನು ತಂದುಕೊಟ್ಟಿತು.

ಕಳೆದ ಕಾಮನ್‌ವೆಲ್ತ್‌ನಲ್ಲಿ ಭಾರತ ಪವರ್‌ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದಿತ್ತು. ಇದರಲ್ಲಿ ಸಚಿನ್ ಚೌಧರಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
Published On - 6:18 pm, Thu, 21 July 22



















