ಬೆಳಗ್ಗೆ ಎದ್ದ ತಕ್ಷಣ ತಪ್ಪಿಯೂ ಈ ವಸ್ತುಗಳನ್ನು ನೋಡಬೇಡಿ
ದಿನದ ಆರಂಭ ಚೆನ್ನಾಗಿದ್ದರೆ ದಿನದ ಅಂತ್ಯವೂ ಅಷ್ಟೇ ಚೆನ್ನಾಗಿರುತ್ತದೆ ಎಂದು ಹೇಳ್ತಾರೆ. ದಿನ ತುಂಬಾ ಚೆನ್ನಾಗಿರಬೇಕೆಂದು ಹೆಚ್ಚಿನ ಜನರು ಬೆಳಿಗ್ಗೆ ಬೇಗನೆ ಎದ್ದು ಯೋಗ, ವ್ಯಾಯಾಮ, ಪೂಜೆ ಇತ್ಯಾದಿ ಒಳ್ಳೆ ಕೆಲಸಗಳಿಂದಲೇ ದಿನವನ್ನು ಆರಂಭಿಸುತ್ತಾರೆ. ಹೀಗಿರುವಾಗ ಬೆಳಗ್ಗೆ ಎದ್ದ ತಕ್ಷಣ ಕೆಲವೊಂದು ತಪ್ಪುಗಳನ್ನು ಮಾಡುವುದರಿಂದ ದಿನವೇ ಹಾಳಾಗುತ್ತಂತೆ. ಹೌದು ಅದರಲ್ಲೂ ಬೆಳಗ್ಗೆ ಎದ್ದ ತಕ್ಷಣ ಕೆಲವೊಂದು ವಸ್ತುಗಳನ್ನು ನೋಡುವುದರಿಂದ ಸಂಪೂರ್ಣ ದಿನವೇ ಹಾಳಗುತ್ತಂತೆ. ಶಾಸ್ತ್ರಗಳಲ್ಲಿಯೂ ಈ ಬಗ್ಗೆ ಹೇಳಲಾಗಿದೆ. ಹಾಗಿದ್ರೆ ಬೆಳಗ್ಗೆ ಎದ್ದ ತಕ್ಷಣ ಯಾವೆಲ್ಲಾ ವಸ್ತುಗಳನ್ನು ನೋಡಬಾರದು ಎಂಬುದನ್ನು ನೋಡೋಣ.
Updated on: Jun 29, 2025 | 5:42 PM

ಕನ್ನಡಿ: ನಮ್ಮಲ್ಲಿ ಹಲವರಿಗೆ ಬೆಳಿಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಕನ್ನಡಿ ನೋಡುವ ಅಭ್ಯಾಸವಿದೆ. ಆದರೆ ಶಾಸ್ತ್ರಗಳ ಪ್ರಕಾರ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಕನ್ನಡಿಯಲ್ಲಿ ಮುಖ ನೋಡಬಾರದಂತೆ. ಈ ಅಭ್ಯಾಸವು ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.

ನಿಂತ ಗಡಿಯಾರ: ಬೆಳಿಗ್ಗೆ ಎದ್ದ ತಕ್ಷಣ ನಿಂತ ಗಡಿಯಾರವನ್ನು ನೋಡುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಹೀಗೆ ನಿಂತ ಗಡಿಯಾರವನ್ನು ನೋಡುವುದರಿಂದ ಆಗಬೇಕಿದ್ದ ಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗುವುದು ಮಾತ್ರವಲ್ಲದೆ ಇದು ಜೀವನದಲ್ಲಿ ಒಂದಷ್ಟು ತೊಂದರೆಗಳನ್ನು ಸಹ ಉಂಟು ಮಾಡುತ್ತಂತೆ.

ಆಕ್ರಮಣಕಾರಿ ಪ್ರಾಣಿಗಳ ಚಿತ್ರ: ಬೆಳಿಗ್ಗೆ ಎದ್ದ ತಕ್ಷಣ ಹುಲಿ ಇತ್ಯಾದಿ ಆಕ್ರಮಣಕಾರಿ ಪ್ರಾಣಿಗಳ ಫೋಟೋಗಳನ್ನು ನೋಡಬಾರದಂತೆ. ಏಕೆಂದರೆ ಇದು ದಿನವಿಡೀ ಯಾವುದೋ ಒಂದು ವಿಷಯದ ಬಗ್ಗೆ ವಿವಾದವನ್ನು ಸೃಷ್ಟಿಸುತ್ತದೆ ಮತ್ತು ಮನಸ್ಸಿನಲ್ಲಿ ಗೊಂದಲ ಉಂಟಾಗುತ್ತದೆ ಅಲ್ಲದೆ ಅಂತಹ ಚಿತ್ರಗಳು ಸಂಘರ್ಷ ಮತ್ತು ಜಗಳಗಳನ್ನು ಸೂಚಿಸುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ, ನಿಮ್ಮ ಕೋಣೆಯಲ್ಲಿ ಪ್ರಾಣಿಗಳ ಫೋಟೋಗಳನ್ನು ಇಡುವುದು ಅಶುಭವೆಂದು ಪರಿಗಣಿಸಲಾಗಿದೆ.

ತೊಳೆಯದ ಪಾತ್ರೆ: ಬೆಳಗ್ಗೆ ಎದ್ದ ತಕ್ಷಣ ಅಡುಗೆ ಮನೆಯಲ್ಲಿರುವ ತೊಳೆಯದ ಕೊಳಕು ಪಾತ್ರೆಗಳನ್ನು ನೋಡುವುದು ಕೂಡಾ ಅಶುಭವೆಂದು ಪರಿಗಣಿಸಲಾಗಿದೆ. ಅಲ್ಲದೆ ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿ ಮತ್ತು ಬಡತನವನ್ನು ತರುತ್ತದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ರಾತ್ರಿಯೇ ಪಾತ್ರೆಗಳನ್ನು ಸ್ವಚ್ಛವಾಗಿಡಬೇಕೆಂದು ಹೇಳುವುದು.

ನೆರಳು: ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಅಥವಾ ಇತರರ ನೆರಳನ್ನು ನೋಡುವುದನ್ನು ತಪ್ಪಿಸಬೇಕು, ನೆರಳು ನೋಡುವುದರಿಂದ ದುರದೃಷ್ಟ ಬರುತ್ತದೆ. ನೆರಳು ನೋಡುವುದರಿಂದ ಆ ವ್ಯಕ್ತಿಯಲ್ಲಿ ಭಯ, ಒತ್ತಡ ಮತ್ತು ಗೊಂದಲ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಸೂರ್ಯೋದಯಕ್ಕೂ ಮುಂಚಿತವಾಗಿ ಎದ್ದೇಳಬೇಕು.

ಮೊಬೈಲ್: ಯಾವುದೇ ಕಾರಣಕ್ಕೂ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡಬಾರದು. ಹೌದು ಬೆಳಗ್ಗೆ ಬೆಳಗ್ಗೆ ನಕಾರಾತ್ಮಕ ಅಥವಾ ಕೆಟ್ಟ ಸುದ್ದಿಗಳನ್ನು ಕೇಳುವುದರಿಂದ ಇಡೀ ದಿನವೇ ಹಾಳಾಗುತ್ತದೆ. ಆದ್ದರಿಂದ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುವ ಅಭ್ಯಾಸವನ್ನು ಬಿಟ್ಟುಬಿಡಿ.

ಹೀಗಿರುವಾಗ ಬೆಳಿಗ್ಗೆ ಬೇಗನೆ ಎದ್ದು, ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ಕೈಗಳನ್ನು ನೋಡಿ ದೇವರನ್ನು ಧ್ಯಾನಿಸಿ ಮತ್ತು ಸಂತೋಷದಾಯಕ ದಿನಕ್ಕಾಗಿ ಪ್ರಾರ್ಥಿಸಿ. ಜೊತೆಗೆ ನಿಮ್ಮ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ದೇವರು ಇತ್ಯಾದಿ ಚಿತ್ರಗಳನ್ನು ನೋಡಿ. ಹೀಗೆ ಮಾಡುವುದರಿಂದ ನಿಮ್ಮ ಇಡೀ ದಿನ ಸಕಾರಾತ್ಮಕವಾಗಿರುತ್ತದೆ.




