- Kannada News Photo gallery Ganavi Dies Amid Dowry and Marital Stress in Bengaluru only after 58 Days of Marriage
ಹೊಸ ಜೀವನ ಆರಂಭಕ್ಕೂ ಮುನ್ನವೇ ಅಂತ್ಯ: ಬೆಂಗಳೂರಿನಲ್ಲಿ ನವವಿವಾಹಿತೆ ಸಾವು
ಕೇವಲ 58 ದಿನಗಳ ಹಿಂದೆ ವಿವಾಹವಾಗಿದ್ದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹನಿಮೂನ್ ವೇಳೆ ಜಗಳ ಶುರುವಾಗಿದ್ದು, ಪೋಷಕರ ಮನೆಗೆ ಮರಳಿದ್ದ ಗಾನವಿ, ಬ್ರೈನ್ ಡೆಡ್ ಆಗಿ ಕೊನೆಯುಸಿರೆಳೆದಿದ್ದಾರೆ. ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪತಿ ಸೂರಜ್ ಹಾಗೂ ಕುಟುಂಬಸ್ಥರ ವಿರುದ್ಧ ರಾಮಮೂರ್ತಿನಗರ ಪೊಲೀಸರು ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
Updated on: Dec 26, 2025 | 1:15 PM

ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ನವವಿವಾಹಿತೆ ಗಾನವಿ(26) ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಗಾನವಿ ಕೇವಲ 58 ದಿನಗಳ ಹಿಂದೆ ಸೂರಜ್ ಎಂಬುವರನ್ನು ವಿವಾಹವಾಗಿದ್ದರು. ವಿವಾಹದ ಆರಂಭಿಕ ದಿನಗಳಲ್ಲೇ ದಾಂಪತ್ಯದಲ್ಲಿ ಕಲಹ ಉಂಟಾಗಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಹನಿಮೂನ್‌ಗೆ ತೆರಳಿದ್ದ ದಂಪತಿ ಮಧ್ಯದಲ್ಲೇ ಹಿಂದಿರುಗಿದ್ದರೆಂದೂ ತಿಳಿದುಬಂದಿದೆ.

ದಾಂಪತ್ಯ ಜಗಳ ತೀವ್ರಗೊಂಡ ಹಿನ್ನೆಲೆಯಲ್ಲಿ ಗಾನವಿಯನ್ನು ಪೋಷಕರು ತಮ್ಮ ಮನೆಗೆ ಕರೆತಂದಿದ್ದರು. ರಾಮಮೂರ್ತಿನಗರದ ಬಿ. ಚನ್ನಸಂದ್ರದಲ್ಲಿರುವ ಪೋಷಕರ ನಿವಾಸದಲ್ಲೇ ಗಾನವಿ ವಾಸವಿದ್ದರು. ಈ ಅವಧಿಯಲ್ಲಿ ಆಕೆ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರೆಂದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.

ಬುಧವಾರ (ಡಿ.24) ಗಾನವಿ ಆತ್ಮಹತ್ಯೆಗೆ ಯತ್ನಿದ್ದು, ತನ್ನ ರೋಮ್ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಪೋಷಕರು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ತೀವ್ರ ಚಿಕಿತ್ಸೆ ನೀಡಿದರೂ, ಗಾನವಿ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಜೀವ ಉಳಿಸಲು ಎಲ್ಲಾ ರೀತಿಯಲ್ಲಿ ಪ್ರಯತ್ನಿಸಲಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಚಿಕಿತ್ಸೆ ಮುಂದುವರಿದಿದ್ದರೂ ಗಾನವಿ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿಲ್ಲ. ವೈದ್ಯರು ಆಕೆಯ ಬ್ರೈನ್ ಡೆಡ್ ಆಗಿರುವುದಾಗಿ ದೃಢಪಡಿಸಿದ್ದರು. ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಗಾನವಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಾಗಿದ್ದು, ಪತಿ ಸೂರಜ್ ಹಾಗೂ ಅವರ ಕುಟುಂಬಸ್ಥರ ವಿಚಾರಣೆಗೆ ಪೊಲೀಸರು ಮುಂದಾಗಿದ್ದಾರೆ.




