- Kannada News Photo gallery Gokarna, Murudeshwar included many places Empty: Rain Impact on Uttara Kannada Coastal Tourism
ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಹೊಡೆತ ಕೊಟ್ಟ ಮಳೆ: ಪ್ರವಾಸಿಗರಿಲ್ಲದೆ ಕಡಲತೀರ ಬಿಕೋ, ಇಲ್ಲಿವೆ ಫೋಟೋಸ್
ಈ ವರ್ಷ ನಿರಂತರ ಮಳೆಯಿಂದ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಗೋಕರ್ಣ, ಮುರುಡೇಶ್ವರ ಸೇರಿದಂತೆ ಕಡಲತೀರಗಳು ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿವೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ 4.61 ಲಕ್ಷ ಪ್ರವಾಸಿಗರಿದ್ದರೆ, ಈ ವರ್ಷ ಒಂದೂವರೆ ಲಕ್ಷಕ್ಕಿಂತ ಕಡಿಮೆ ಆಗಿದೆ.
Updated on:Oct 31, 2025 | 6:40 PM

ಈ ವರ್ಷ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಾಜ್ಯದೆಲ್ಲೆಡೆ ಬೆಳೆ ಹಾನಿ ಉಂಟಾಗಿದ್ದರೆ, ಇತ್ತ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ನವೆಂಬರ್ ಆರಂಭವಾದರೂ ಪ್ರವಾಸಿತಾಣಗಳು ಬಿಕೋ ಎನ್ನುತ್ತಿವೆ.

ಗೋಕರ್ಣ, ಮುರುಡೇಶ್ವರ, ಹೊನ್ನಾವರ, ಕಾರವಾರ ಕಡಲ ತೀರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಸಂಪೂರ್ಣ ಇಳಿಕೆಯಾಗಿದ್ದು, ಪ್ರವಾಸಿಗರಿಲ್ಲದೆ ತಾಣಗಳು ಖಾಲಿ ಹೊಡೆಯುತ್ತಿವೆ.

ಪ್ರವಾಸೋದ್ಯಮ ಮತ್ತು ಮೀನುಗಾರಿಕೆಯೇ ಆರ್ಥಿಕ ಮೂಲವಾಗಿರುವ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಕಳೆದ ಒಂದು ತಿಂಗಳಿಂದ ಬದಲಾಗುತ್ತಿರುವ ಹವಮಾನ ದೊಡ್ಡ ಹೊಡೆತ ಕೊಟ್ಟಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ರೆಡ್ ಮತ್ತು ಆರೆಂಜ್ ಅಲರ್ಟ ನೀಡಲಾಗಿದ್ದು, ಮೀನುಗಾರಿಕೆ ಹಾಗೂ ಕಡಲ ಪ್ರವಾಸೋದ್ಯಮವನ್ನು ನಿಷೇಧಿಸಲಾಗಿತ್ತು.

ವೀಕೆಂಡ್ ಸೇರಿದಂತೆ ರಜೆಯ ಮಜಾ ಅನುಭವಿಸಲು ಬಂದ ಜನ ಕಡಲಿಗಿಳಿಯದೇ ಮರಳಿ ಹೋಗುವಂತಾಗಿದ್ದರೆ, ಮೀನುಗಾರರು ತಮ್ಮ ಬೋಟುಗಳನ್ನ ಬಂದರಿನಲ್ಲಿ ಲಂಗುರು ಹಾಕುವಂತಾಗಿದೆ. ಹೀಗಾಗಿ ಜಿಲ್ಲೆಯ ಕರಾವಳಿ ತೀರ ಸೇರಿದಂತೆ ಪ್ರವಾಸಿತಾಣಗಳು ಖಾಲಿ ಹೊಡೆಯುತ್ತಿವೆ.

ಮಳೆಗಾಲದಲ್ಲಿ ಸ್ಥಗಿತಗೊಳ್ಳುವ ಪ್ರವಾಸೋದ್ಯಮ, ಸೆಪ್ಟೆಂಬರ್ ತಿಂಗಳು ಮುಗಿಯುತ್ತಿದ್ದಂತೆ ಪ್ರವಾಸೋದ್ಯಮ ಆರಂಭ ಆಗುತ್ತದೆ. ಆದರೆ ಈ ವರ್ಷ ಪದೇ ಪದೇ ಸುರಿಯುತ್ತಿರುವ ಮಳೆಯಿಂದ, ನವೆಂಬರ್ ಆರಂಭವಾದರೂ ಇದುವರೆಗೂ ಪ್ರವಾಸಿಗರು ಅಷ್ಟಾಗಿ ಬರುತ್ತಿಲ್ಲ. ಕಳೆದ ವರ್ಷ ಅಕ್ಟೋಬರ್ ನಲ್ಲಿ 4.61 ಲಕ್ಷ ಪ್ರವಾಸಿಗರು ಭೇಟಿ ನೀಡಿದರೇ, ಈ ವರ್ಷ ಒಂದೂವರೆ ಲಕ್ಷಕ್ಕಿಂತಲೂ ಕಡಿಮೆ ಇದ್ದು ಸಂಪೂರ್ಣ ಇಳಿಮುಖ ಆಗಿದೆ.

ಹವಾಮಾನ ಬದಲಾವಣೆ, ಮಳೆಯ ಹೊಡೆತ, ಪದೇ ಪದೇ ಕಡಲ ತೀರದ ನಿರ್ಬಂಧಗಳು ಪ್ರವಾಸಿಗರ ಸಂಖ್ಯೆಯಲ್ಲಿ ಇಳುಮುಖಕ್ಕೆ ಕಾರಣವಾಗಿದೆ. ಇನ್ನು ವಿದೇಶಿ ಪ್ರಜೆಗಳ ಸಂಖ್ಯೆ ಬೆರಳೆಣಿಕೆಯಷ್ಟಿದ್ದು, ದೊಡ್ಡ ಮಟ್ಟದ ಇಳಿಕೆ ಕಂಡಿದೆ.
Published On - 6:39 pm, Fri, 31 October 25



