ಫಿಸಿಯೋಥೆರಪಿ ಮಾಡಿಸುವುದರಿಂದ ನಮ್ಮ ದೇಹಕ್ಕೆ ನಾನಾ ರೀತಿಯ ಅನುಕೂಲಗಳಿವೆ. ಇದು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ನಮಗೆ ವಯಸ್ಸಾದಂತೆ ನಾವು ಅಸ್ಥಿರಂಧ್ರತೆ ಅಥವಾ ಸಂಧಿವಾತದಿಂದ ಮಂಡಿ ಚಿಪ್ಪಿನ ಬದಲಾವಣೆ ಮಾಡುವ ಸ್ಥಿತಿಗೆ ತಲುಪುತ್ತೇವೆ. ಈ ಸ್ಥಿತಿಯಲ್ಲಿ ನಮಗೆ ಫಿಸಿಯೋಥೆರಪಿಯ ಅಗತ್ಯವಿರುತ್ತದೆ.
ಫಿಸಿಯೋಥೆರಪಿ ನರರೋಗದ ಸಮಸ್ಯೆಗಳನ್ನು ನಿಯಂತ್ರಣ ಮಟ್ಟದಲ್ಲಿಡುತ್ತದೆ. ಒಬ್ಬ ವ್ಯಕ್ತಿಯು ವಯಸ್ಸಾಗುತ್ತಿದಂತೆ, ನರಗಳ ದೌರ್ಬಲ್ಯಕ್ಕೆ ಮತ್ತು ನರಸಂಬಂಧಿ ರೋಗಗಳಿಗೆ ತುತ್ತಾಗುತ್ತಾನೆ. ಪಾರ್ಕಿನ್ಸನ್ ಕಾಯಿಲೆ, ದೀರ್ಘಾವಧಿಯ ಆಯಾಸ, ಬುದ್ಧಿ ಭ್ರಮಣೆ, ಪಾರ್ಶ್ವವಾಯು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ಈ ರೀತಿಯ ಪ್ರಕರಣಗಳಲ್ಲಿ ಫಿಸಿಯೋಥೆರಪಿ ತನ್ನ ನರಸ್ನಾಯುಗಳ ಮತ್ತು ಸ್ನಾಯುಅಸ್ಥಿಗಳ ಚಿಕಿತ್ಸಾ ವಿಧಾನದಿಂದ ರೋಗ ಇನ್ನಷ್ಟು ಹದಗೆಡುವುದನ್ನು ತಡೆಗಟ್ಟುತ್ತದೆ. ತೊಂದರೆಗೊಳಗಾದ ಅಂಗಗಳ ಫಿಸಿಯೋಥೆರಪಿ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡುವುದರಿಂದ ಆ ಅಂಗಗಳಲ್ಲಿ ಸುಧಾರಣೆ ಕಂಡುಬಂದು ಚಲನೆಗಳನ್ನು ಪುನರಾರಂಭಿಸುತ್ತದೆ.
ಶಸ್ತ್ರಚಿಕಿತ್ಸೆಯ ನಂತರ ತೊಂದರೆ ಉಂಟಾಗುವ ಅಪಾಯವನ್ನು ನಿರ್ಣಯಿಸುವಲ್ಲಿ ಶಸ್ತ್ರಕ್ರಿಯೆಯ ಮುನ್ನ ಮಾಡಿದ ಫಿಸಿಯೋಥೆರಪಿ ಸಹಾಯ ಮಾಡುತ್ತದೆ. ಹಾಗೇ, ಶಸ್ತ್ರಚಿಕಿತ್ಸೆಯ ನಂತರ ನೀವು ವೇಗವಾಗಿ ಚೇತರಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ.
ಹೃದಯ ಮತ್ತು ಎದೆಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು ತಮ್ಮ ಗಾಯದಿಂದ ಹೇಗೆ ಬೇಗ ಚೇತರಿಸಿಕೊಳ್ಳುವುದು ಎಂದು ಹೇಳಿಕೊಡಲಾಗುತ್ತದೆ. ಓರ್ವ ಫಿಸಿಯೋಥೆರಪಿ ತಜ್ಞ ಶಸ್ತ್ರಕ್ರಿಯೆಯ ನಂತರ ತನ್ನ ರೋಗಿಗೆ ಎಲ್ಲ ವ್ಯಾಯಾಮಗಳ ವಿಧಾನಗಳನ್ನು ಹೇಳಿಕೊಡುತ್ತಾರೆ.
ಗರ್ಭಾವಸ್ಥೆಯ ಸಮಯದಲ್ಲಿ ಮತ್ತು ಪ್ರಸೂತಿಯ ನಂತರ ಮಹಿಳೆಯು ತನ್ನ ದೇಹದ ಕಡೆ ಹೆಚ್ಚು ಗಮನವನ್ನು ಕೊಡಬೇಕಾಗುತ್ತದೆ. ಈ ಸಮಯದಲ್ಲಾಗುವ ಎಷ್ಟೋ ಹಾರ್ಮೋನುಗಳ ಏಕಾಏಕಿ ಬದಲಾವಣೆ ಬೆನ್ನುಗಳನ್ನು ಹಿಡಿಯಬೇಕಿದ್ದ ಸ್ನಾಯುಗಳನ್ನು ಮೃದು ಮಾಡಿ ಹಿಗ್ಗಿಸಲು ಶುರುಮಾಡುತ್ತದೆ. ನಿಮ್ಮ ಪಕ್ಕೆಲುಬುಗಳ ಸ್ನಾಯು ಮತ್ತು ಹೊಟ್ಟೆಯ ಸ್ನಾಯುಗಳು ಹಿಗ್ಗಲು ಶುರು ಮಾಡುತ್ತದೆ.
ಆಗ ನಿಮ್ಮ ಫಿಸಿಯೋಥೆರಪಿ ತಜ್ಞರು ನಿಮಗೆ ಕೆಲವು ಸರಿಯಾದ ವಿಧಾನಗಳನ್ನು ಮತ್ತು ವ್ಯಾಯಾಮಗಳಾದ ಕೆಗೆಲ್ ವ್ಯಾಯಾಮಗಳು, ಹಿಗ್ಗುವಿಕೆಯ ವ್ಯಾಯಾಮಗಳು ಇತ್ಯಾದಿಯನ್ನು ಕಲಿಸುವುದರಿಂದ ನಿಮ್ಮ ಸ್ನಾಯುಗಳ ಶಕ್ತಿಯನ್ನು ಹೆಚ್ಚಿಸಿ ನಿಮ್ಮ ದೇಹದಲ್ಲಾಗುವ ಅಥವಾ ಆಗಿರುವ ಬದಲಾವಣೆಗಳಿಂದ ಬೇಗ ಗುಣವಾಗಲು ಸಹಾಯ ಮಾಡುತ್ತದೆ.
ಫಿಸಿಯೋಥೆರಪಿ ಕೇವಲ ಬಾಧಿತ ಅಂಗಾಗಗಳಲ್ಲಿ ಮಾತ್ರ ಕೆಲಸ ಮಾಡದೆ ಪೂರ್ಣ ದೇಹದ ಮೇಲೆ ಗಮನಕೊಡುತ್ತದೆ. ಹಾಗಾಗಿ ಇದು ಉಸಿರಾಟದ ತೊಂದರೆಗಳು, ಹೃದಯ ಮತ್ತು ಶ್ವಾಸಕೋಶದ ತೊಂದರೆಗಳನ್ನು ಪೂರ್ಣವಾಗಿ ಗುಣಪಡಿಸುತ್ತದೆ.
ಫಿಸಿಯೋಥೆರಪಿ ವ್ಯಾಯಾಮಗಳು ದೇಹವನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ. ನಿಮ್ಮ ಫಿಸಿಯೋಥೆರಪಿ ತಜ್ಞ ಶಿಫಾರಸು ಮಾಡಿದ ವ್ಯಾಯಾಮವನ್ನು ಮಾಡುವಾಗ, ಕೆಲವು ಸ್ನಾಯು ಬಲಪಡಿಸುವ ಮತ್ತು ವಿಸ್ತರಿಸುವ ವ್ಯಾಯಾಮಗಳು, ನಿಮ್ಮ ದೇಹದ ಸ್ನಾಯುಗಳನ್ನು ವಿವಿಧ ಕೋನಗಳಲ್ಲಿ ಚಲಿಸುವಂತೆ ಮಾಡಿ ಅದರ ಮೂಲಕ ರಕ್ತ ಚಲಾವಣೆಯನ್ನು ಹೆಚ್ಚು ಮಾಡುತ್ತದೆ. ಇದು ನಿಮಗೆ ಶಸ್ತ್ರಚಿಕಿತ್ಸೆ ನಂತರ ಆದ ಗಾಯದಿಂದ ಚೇತರಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ನಿಮ್ಮ ನೋವು ಮತ್ತು ಗಾಯ ನಿಮ್ಮ ಜೀವನಶೈಲಿಯ ಮೇಲೆ ನಿರ್ಬಂಧ ಹೇರದೆ ಇರುವಂತೆ ನೋಡಿಕೊಳ್ಳಿ. ಸಾಧ್ಯವಾದಷ್ಟು ದೈಹಿಕವಾಗಿ ಸಕ್ರಿಯವಾಗಿರಿ.
Published On - 4:13 pm, Fri, 8 September 23