ಸಿರಿಧಾನ್ಯ ನೂಡಲ್ಸ್ : ಹಲವು ವರ್ಷಗಳ ಪರಿಶ್ರಮದ ಫಲ ಇಂದು ಯಂತ್ರ ಅವಿಷ್ಕಾರ
ಬೆಂಗಳೂರಿನ ಆಹಾರ ತಜ್ಞ, ಸಂಶೋಧಕ ಡಾ. ಚೇತನ್ ಅವರು ಸಿರಿಧಾನ್ಯಗಳಿಂದ ಆರೋಗ್ಯಕರ ನೂಡಲ್ಸ್ ತಯಾರಿಸುವ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಯಂತ್ರವು ಸಾಮಾನ್ಯ ಯಂತ್ರಕ್ಕಿಂತ ಭಿನ್ನವಾಗಿದೆ. ಮನೆ ಮತ್ತು ವಾಣಿಜ್ಯ ಬಳಕೆಗಾಗಿ ಎರಡು ಯಂತ್ರಗಳನ್ನು ಅವರು ಅಭಿವೃದ್ಧಿಪಡಿಸಿದ್ದಾರೆ. ಈ ಯಂತ್ರವನ್ನು ಟಿಬೆಟಿಯನ್ ನಿರಾಶ್ರಿತ ಶಿಬಿರಕ್ಕೆ ದಾನ ಮಾಡಲಾಗಿದೆ.
Updated on:Jul 04, 2025 | 4:51 PM

ನೂಡಲ್ಸ್ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ, ಆರೋಗ್ಯಕ್ಕೆ ಒಳ್ಳೆಯದಾಗಿರುವ, ಅದು ಕೂಡ ಸಿರಿಧಾನ್ಯಗಳಿಂದ ತಯಾರಿಸಿದ ನೂಡಲ್ಸ್ ಇದ್ರೆ ಹೇಗಿರುತ್ತೆ? ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿರುವ ಮಷೀನ್ ಒಂದು ಸಿರಿಧಾನ್ಯದ ಪುಡಿಯಿಂದ ಕ್ಷಣಮಾತ್ರದಲ್ಲಿ ಸತ್ವಯುತವಾದ ನೂಡಲ್ಸ್ ತಯಾರಿಸುತ್ತದೆ.

ಬೆಂಗಳೂರು ಮೂಲದ ಆಹಾರ ತಜ್ಞ, ಸಂಶೋಧಕ ಡಾ. ಚೇತನ್ ಅವರ ಹಲವು ವರ್ಷಗಳ ಪ್ರಯೋಗ ಮತ್ತು ಪರಿಶ್ರಮ ಇದೀಗ ಫಲಕೊಟ್ಟಿದೆ. ಸಿರಿಧಾನಗಳ ಪುಡಿಯಿಂದ ನೂಡಲ್ಸ್ ತಯಾರಾಗುವ ಯಂತ್ರ ಅವಿಷ್ಕಾರಗೊಳಿಸಿದ್ದಾರೆ.

ಸಾಮಾನ್ಯವಾಗಿ ಸಿರಿಧಾನ್ಯಗಳನ್ನು ಸಾಂಪ್ರದಾಯಿಕ ವಿಧಾನದಲ್ಲಿ ಬೇಯಿಸುವಾಗ ಬಹಳಷ್ಟು ಸತ್ವಗಳು ಅದರಿಂದ ನಾಶವಾಗುತ್ತವೆ. ದೇಹಕ್ಕೆ ಯಾವ ಸತ್ವಗಳು ಅಗ್ಯವಿಲ್ಲ ಅವುಗಳು ಉಳಿದು ಬಿಡುತ್ತವೆ. ಇದರಿಂದ ದೇಹಕ್ಕೆ ಬೇಕಾದ ಪ್ರೊಟೀನ್, ವಿಟಮಿನ್, ಝಿಂಕ್, ಫೋಲಿಕ್ ಆಸಿಡ್ನಂತಹ ಸತ್ವಗಳು ದೊರಕುವುದಿಲ್ಲ. ಆದರೆ, ತಾವು ಆವಿಷ್ಕರಿಸಿರುವ ಯಂತ್ರದಿಂದ ತಯಾರಾಗುವ ನೂಡಲ್ಸ್ನಲ್ಲಿ ಈ ಎಲ್ಲ ಅಂಶಗಳು ಹಾಗೇ ಉಳಿಯುವುದರಿಂದ, ಮನುಷ್ಯನ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಸತ್ವಗಳು ಸಿಗುತ್ತವೆ ಎಂದು ಆಹಾರ ಸಂಶೋಧಕ ಡಾ. ಚೇತನ್ ಹೇಳಿದ್ದಾರೆ.

ಮಾರುಕಟ್ಟೆಯಲ್ಲಿ ದೊರಕುವ ಬಹು ಜನಪ್ರಿಯ ನೂಡಲ್ಸ್ಗಳ ತಯಾರಿಕಾ ಪ್ರಕ್ರಿಯೆ ವೈಜ್ಞಾನಿಕವಾಗಿಲ್ಲ. ಆದರೆ, ತಮ್ಮ ಈ ಯಂತ್ರದ ನೂಡಲ್ಸ್ ಮೇಕಿಂಗ್ ಅತ್ಯಂತ ವೈಜ್ಞಾನಿಕವಾಗಿದೆ ಎಂದು ಆಹಾರ ಸಂಶೋಧಕ ಡಾ. ಚೇತನ್ ಹೇಳಿದರು.

Noಇದರಲ್ಲಿ ಎರಡು ಬಗೆಯ ಯಂತ್ರಗಳಿವೆ. ಒಂದು ಮನೆಯಲ್ಲೇ ನೂಡಲ್ಸ್ ಮಾಡಿಕೊಳ್ಳಬಹುದಾದ ಪುಟ್ಟ ಯಂತ್ರ. ಇನ್ನೊಂದು ಹೋಟೆಲ್, ಅಥವಾ ವಸತಿ ನಿಲಯಗಳಲ್ಲಿ ಬೃಹತ್ ಪ್ರಮಾಣದಲ್ಲಿ ಮಾಡಬಹುದಾದ ಯಂತ್ರ. ಇದರಲ್ಲಿ ಉತ್ಪಾದನೆಯಾಗುವ ನೂಡಲ್ಸ್ಗಳನ್ನು ರುಚಿವಾಗಿ ಬೇಯಿಸಿ ತಿನ್ನಬಹುದಾಗಿದೆ.

ಸದ್ಯ ಈ ಎರಡೂ ಯಂತ್ರಗಳನ್ನು ಡಾ.ಚೇತನ್ ಅವರು ಬೈಲುಕೊಪ್ಪದಲ್ಲಿರುವ ಟಿಬೆಟಿಯನ್ ನಿರಾಶ್ರಿತರ ಶಿಬಿರಕ್ಕೆ ನೀಡಿದ್ದಾರೆ. ಇಲ್ಲಿ ಕಲಿಯುವ ಮಕ್ಕಳಿಗೆ ಇದರಿಂದ ಸತ್ವಯುತ ಆಹಾರ ಸಿಗಲಿ ಎಂಬುದು ಇವರ ಉದ್ದೇಶವಾಗಿದೆ. ಈ ಯಂತ್ರದಿಂದ ತಮ್ಮ ಶಿಬಿರದಲ್ಲಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆರೋಗ್ಯಕರ ಆಹಾರ ತಯಾರಿಸಲು ಅನುಕೂಲವಾಗಿದೆ ಎಂದು ಟಿಬೆಟಿಯನ್ ಧರ್ಮ ಗುರುಗಳು ಹೇಳಿದರು.

ಹಲವು ವರ್ಷಗಳ ಪರಿಶ್ರಮದ ಬಳಿಕ ನೂಡಲ್ಸ್ ತಯಾರಿಸುವ ಯಂತ್ರ ಅವಿಷ್ಕಾರವಾಗಿದ್ದು, ಆರೋಗ್ಯ ಹಾಳು ಮಾಡುವ ನೂಡಲ್ಸ್ ತಿನ್ನುವ ಬದಲು, ಸಿರಿಧಾನ್ಯಗಳಿಂದ ತಯಾರಿಸಿದ ನೂಡಲ್ಸ್ ಸೇವಿಸಿ ಆರೋಗ್ಯವಂತರಾಗಿರಿ ಎಂದು ಮನವಿ ಮಾಡಿದರು.
Published On - 4:41 pm, Fri, 4 July 25









