- Kannada News Photo gallery Investing in Gold, know about various taxes and charges that dent the profit, details in Kannada
ಚಿನ್ನ ಖರೀದಿಸುವಾಗ ಜಿಎಸ್ಟಿ, ಮಾರುವಾಗ ಜಿಎಸ್ಟಿ ಜೊತೆಗೆ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್; ಹಳದಿ ಲೋಹಕ್ಕೆ ಏನೆಲ್ಲಾ ಇವೆ ತೆರಿಗೆಗಳು ನೋಡಿ…
Gold investments and taxes: ಚಿನ್ನದ ಮೇಲೆ ಹೂಡಿಕೆ ಮಾಡಿ ದಂಡಿಯಾಗಿ ಲಾಭ ಮಾಡಬಹುದು ಎಂದು ಹಲವರು ತಪ್ಪಾಗಿ ಭಾವಿಸಿದ್ದಾರೆ. ದೀರ್ಘಾವಧಿ ಹೂಡಿಕೆ ಮೂಲಕ ಚಿನ್ನದಿಂದ ಉತ್ತಮ ಲಾಭ ಮಾಡಬಹುದು. ಜಿಎಸ್ಟಿ ತೆರಿಗೆಗಳು, ಲಾಭ ಹೆಚ್ಚಳ ತೆರಿಗೆಗಳು ಲಾಭದ ಪ್ರಮಾಣವನ್ನು ಒಂದಷ್ಟು ಭಾಗ ಕಿತ್ತುಕೊಳ್ಳುತ್ತವೆ. ಚಿನ್ನದ ಮೇಲೆ ಹೂಡಿಕೆಗೆ ಮುನ್ನ ಈ ಅಂಶಗಳನ್ನು ತಿಳಿಯುವುದು ಒಳ್ಳೆಯದು.
Updated on: Aug 28, 2024 | 12:22 PM

ಚಿನ್ನ, ಬೆಳ್ಳಿ ಇತ್ಯಾದಿ ಅಮೂಲ್ಯ ಲೋಹಗಳ ಮೇಲೆ ಹಣ ಹೂಡಿಕೆ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಆಪತ್ಕಾಲಕ್ಕೆ ಆಗುತ್ತದೆಂದು ಜನರು ಈ ಮೊದಲು ಆಭರಣಗಳನ್ನು ಕೊಳ್ಳುವುದು ಹೆಚ್ಚಿತ್ತು. ಈಗ ಅಪರಂಜಿ ಚಿನ್ನದ ಗಟ್ಟಿಗಳನ್ನು ಖರೀದಿಸುತ್ತಿದ್ದಾರೆ. ಡಿಜಿಟಲ್ ಗೋಲ್ಡ್ ಮೂಲಕ ಹೂಡಿಕೆ ಮಾಡುತ್ತಿದ್ದಾರೆ. ಡಿಜಿಟಲ್ ಗೋಲ್ಡ್, ಗೋಲ್ಡ್ ಮ್ಯೂಚುವಲ್ ಫಂಡ್, ಗೋಲ್ಡ್ ಇಟಿಎಫ್, ಎಸ್ಜಿಬಿಗಳು ಜನಪ್ರಿಯವಾಗುತ್ತಿವೆ. ಅಂತೆಯೇ ಸಿಲ್ವರ್ ಮೇಲಿನ ಹೂಡಿಕೆಗಳೂ ಕೂಡ ಜನಪ್ರಿಯತೆ ಪಡೆಯುತ್ತಿವೆ.

2024ರ ಏಪ್ರಿಲ್ನಿಂದ ಜೂನ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಚಿನ್ನದ ಬೆಲೆ ವಾರ್ಷಿಕವಾಗಿ ಶೇ. 18ರಷ್ಟು ಹೆಚ್ಚಾಗಿದೆ. ಇಷ್ಟು ಬೆಲೆ ಹೆಚ್ಚುತ್ತದೆ, ಹೂಡಿಕೆ ಮಾಡಿದರೆ ಸಿಕ್ಕಾಪಟ್ಟೆ ಲಾಭ ಮಾಡಬಹುದು ಎಂದನಿಸಿದರೆ ಸ್ವಲ್ಪ ಜಾಗ್ರತೆ. ಚಿನ್ನವನ್ನು ಹಾಗೆಯೇ ಆಗಲಿ, ಡಿಜಿಟಲ್ ಮೂಲಕವೇ ಆಗಲಿ ಸುಮ್ಮನೆ ಖರೀದಿಸಲು ಆಗುವುದಿಲ್ಲ, ಮಾರಲು ಆಗುವುದಿಲ್ಲ. ತೆರಿಗೆಗಳು ಅನ್ವಯ ಆಗುತ್ತವೆ.

ನೀವು ಚಿನ್ನ ಖರೀದಿಸುವಾಗ ಶೇ. 3ರಷ್ಟು ಜಿಎಸ್ಟಿ ಪಾವತಿಸಬೇಕು. ಮಾರುವಾಗಲೂ ಜಿಎಸ್ಟಿ ಕಟ್ಟಬೇಕು. ಜೊತೆಗೆ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ಅನ್ನೂ ಕಟ್ಟಬೇಕು. ಹೀಗಾಗಿ, ಕಿರು ಅವಧಿಯ ಹೂಡಿಕೆದಾರರಿಗೆ ಚಿನ್ನ ಹೇಳಿ ಮಾಡಿಸಿದ್ದಲ್ಲ ಎನ್ನುವುದು ತಜ್ಞರ ಅನಿಸಿಕೆ.

ನೀವು ಡಿಜಿಟಲ್ ಮೂಲಕ ಹೂಡಿಕೆ ಮಾಡಿ, ಚಿನ್ನದ ಗಟ್ಟಿಗಳನ್ನು ಪಡೆಯುತ್ತಿದ್ದರೆ ಅದಕ್ಕೆ ಮೇಕಿಂಗ್ ಚಾರ್ಜಸ್ ಪಾವತಿಸಬೇಕು. ಸರ್ಕಾರದಿಂದ ನೀಡಲಾಗುವ ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ನಲ್ಲಿ ಮಾಡಲಾಗುವ ನಿಮ್ಮ ಹೂಡಿಕೆಗೆ ಮಾತ್ರವೇ ಯಾವ ತೆರಿಗೆ ಅನ್ವಯ ಆಗದು. ಹೀಗಾಗಿ, ಎಸ್ಜಿಬಿ ಮೂಲಕ ನೀವು ಚಿನ್ನದಿಂದ ಗರಿಷ್ಠ ಲಾಭ ಪಡೆಯಲು ಸಾಧ್ಯವಾಗುತ್ತದೆ.

ಎರಡು ರೀತಿಯ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ಗಳಿವೆ. ಒಂದು, ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇಯ್ನ್. ಮತ್ತೊಂದು, ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್. ಒಂದು ಹೂಡಿಕೆ ವಸ್ತುವನ್ನು ಮಾರಿ ಗಳಿಸುವ ಲಾಭಕ್ಕೆ ನೀವು ಕಟ್ಟಬೇಕಿರುವ ತೆರಿಗೆಯೇ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್.

ಈ ಬಾರಿಯ ಬಜೆಟ್ನಲ್ಲಿ ಲಾಭ ಹೆಚ್ಚಳ ತೆರಿಗೆಯಲ್ಲಿ ಕೆಲ ಮಾರ್ಪಾಡು ಮಾಡಲಾಗಿದೆ. ಈ ತೆರಿಗೆಗಳ ವರ್ಗೀಕರಣದಲ್ಲೂ ಬದಲಾವಣೆ ಆಗಿದೆ. ಈ ಮುಂಚೆ ಚಿನ್ನ ಖರೀದಿಸಿ ಮೂರು ವರ್ಷದೊಳಗೆ ಮಾರಿ ಲಾಭ ಗಳಿಸಿದರೆ ಅದಕ್ಕೆ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ಅನ್ವಯ ಆಗುತ್ತಿತ್ತು. ಈಗ ಅದನ್ನು ಎರಡು ವರ್ಷಕ್ಕೆ ಇಳಿಸಲಾಗಿದೆ. ಎರಡು ವರ್ಷದ ಬಳಿಕ ಮಾರಿ ಗಳಿಸುವ ಲಾಭಕ್ಕೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ಅನ್ವಯ ಆಗುತ್ತದೆ.

ಕಿರು ಅವಧಿ ಹೂಡಿಕೆಯಲ್ಲಿ ಗಳಿಸಿದ ಲಾಭವನ್ನು ನಿಮ್ಮ ಟ್ಯಾಕ್ಸಬಲ್ ಇನ್ಕಮ್ಗೆ ಸೇರಿಸಲಾಗುತ್ತದೆ. ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ ದರಗಳ ಪ್ರಕಾರ ತೆರಿಗೆ ಕಟ್ಟಬೇಕಾಗುತ್ತದೆ. ಎರಡು ವರ್ಷ ಮೇಲ್ಪಟ್ಟ ಹೂಡಿಕೆಯಿಂದ ಗಳಿಸಿದ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಗೆ ವಿಧಿಸಲಾಗುವ ತೆರಿಗೆಯನ್ನು ಶೇ. 20ರಿಂದ ಶೇ. 12.5ಕ್ಕೆ ಇಳಿಸಲಾಗಿದೆ. ಆದರೆ, ಇಂಡೆಕ್ಸೇಶನ್ ಬೆನಿಫಿಟ್ ಇರುವುದಿಲ್ಲ.

ಉದಾಹರಣೆಗೆ, ನೀವು 2021ರಲ್ಲಿ 1,00,000 ರೂ ಮೊತ್ತದ ಚಿನ್ನವನ್ನು ಖರೀದಿಸುತ್ತೀರಿ. ಈಗ ಅದರ ಬೆಲೆ 1,50,000 ರೂ ಆಗಿದೆ ಎಂದಿಟ್ಟುಕೊಳ್ಳಿ. ನಿಮ್ಮ ಹೂಡಿಕೆ ಮೌಲ್ಯ 50,000 ರೂ ಹೆಚ್ಚಾಗುತ್ತದೆ. ಹಳೆಯ ನಿಯಮದಲ್ಲಿ ಶೇ. 20 ತೆರಿಗೆ ಎಂದರೆ 10,000 ರೂ ಆಗುತ್ತದೆ. ಇಂಡೆಕ್ಸೇಶನ್ ಬೆನಿಫಿಟ್, ಅಂದರೆ ಹಣದುಬ್ಬರ ಏರಿಕೆ ಅಂಶ ಪರಿಗಣಿಸಿ ಹೂಡಿಕೆ ಮೌಲ್ಯವನ್ನು ಕಡಿಮೆ ಮಾಡಲಾಗುತ್ತದೆ. ಹೀಗಾಗಿ, ಪಾವತಿಸಬೇಕಾದ ತೆರಿಗೆ ಬಹಳ ಕಡಿಮೆ ಆಗುತ್ತಿತ್ತು. ಹೊಸ ನಿಯಮ ಪ್ರಕಾರ ಶೇ. 12.5 ತೆರಿಗೆ ಕಟ್ಟಬೇಕು. ಅಂದರೆ, 50,000 ರೂ ಲಾಭಕ್ಕೆ 6,250 ರೂ ತೆರಿಗೆ ಪಾವತಿಸಬೇಕಾಗುತ್ತದೆ. ಇದು ನೀವು ಖರೀದಿಸುವಾಗ ಮತ್ತು ಮಾರುವಾಗ ಕಟ್ಟುವ ಜಿಎಸ್ಟಿಗೆ ಹೊರತಾದುದು.




