ಹಿಮದ ಮುಸುಕು ಹೊದ್ದು ಪ್ರವಾಸಿಗರನ್ನು ಸೆಳೆಯುತ್ತಿದೆ ಕಾಶ್ಮೀರದ ಗುಲ್ಮಾರ್ಗ್
ಗುಲ್ಮಾರ್ಗ್ ತನ್ನ ಅದ್ಭುತವಾದ ಸೌಂದರ್ಯದ ಜೊತೆಗೆ, ಚಳಿಗಾಲದ ಕ್ರೀಡೆಗಳಿಗೂ ಹೆಸರುವಾಸಿಯಾಗಿದೆ. ಇದು ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿರುವುದರ ಜೊತೆಗೆ ಸ್ಕೀಯಿಂಗ್ ತಾಣವೂ ಆಗಿದೆ. ಚಳಿಗಾಲಕ್ಕೆ ಹಿಮದ ಮುಸುಕು ಹೊದ್ದು ಕುಳಿತಿರುವ ಗುಲ್ಮಾರ್ಗ್ಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ.
Updated on: Dec 18, 2023 | 2:05 PM

ಜಮ್ಮು ಮತ್ತು ಕಾಶ್ಮೀರದ ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ಗುಲ್ಮಾರ್ಗ್ ಹಿಮಪಾತದಿಂದ ಹೊಸ ಕಳೆ ಪಡೆದಿದೆ. ಚಳಿಗಾಲಕ್ಕೆ ಹಿಮದ ಮುಸುಕು ಹೊದ್ದು ಕುಳಿತಿರುವ ಗುಲ್ಮಾರ್ಗ್ಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ.

ಎಕ್ಸ್ (ಟ್ವಿಟ್ಟರ್ನಲ್ಲಿ) ಗುಲ್ಮಾರ್ಗ್‌ನ ಫೋಟೋ, ವಿಡಿಯೋಗಳು ವೈರಲ್ ಆಗಿವೆ. ಭಾನುವಾರ ಇಲ್ಲಿ ಹಿಮಪಾತವಾಗಿದ್ದು, ವೀಕೆಂಡ್ ಆದ್ದರಿಂದ ಪ್ರವಾಸಿಗರ ಸಂಖ್ಯೆಯೂ ಜಾಸ್ತಿಯಾಗಿತ್ತು.

ಹಿಮಪಾತದಿಂದ ಹೆದ್ದಾರಿಗಳಲ್ಲಿ ವಾಹನ ಸಂಚಾರಕ್ಕೂ ಅಡೆತಡೆ ಉಂಟಾಗಿ ಪ್ರವಾಸಿಗರು ಕೊಂಚ ತೊಂದರೆ ಅನುಭವಿಸಿದರು.

ಜಮ್ಮು ಕಾಶ್ಮೀರದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಗುಲ್ಮಾರ್ಗ್ ಹಿಮಪಾತ ಮತ್ತು ಲುಪಿನ್ ಹೂವುಗಳ ಋತುವಿನಲ್ಲಿ ಕಣ್ಮನ ಸೆಳೆಯುವ ನೋಟಕ್ಕೆ ಹೆಸರುವಾಸಿಯಾಗಿದೆ.

ಗುಲ್ಮಾರ್ಗ್ ತನ್ನ ಅದ್ಭುತವಾದ ಸೌಂದರ್ಯದ ಜೊತೆಗೆ, ಚಳಿಗಾಲದ ಕ್ರೀಡೆಗಳಿಗೂ ಹೆಸರುವಾಸಿಯಾಗಿದೆ. ಇದು ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿರುವುದರ ಜೊತೆಗೆ ಸ್ಕೀಯಿಂಗ್ ತಾಣವೂ ಆಗಿದೆ.

ಸುಂದರವಾದ ನೋಟವನ್ನು ಹೊಂದಿರುವ ಈ ಸ್ಥಳವು ಸೇಂಟ್ ಮೇರಿ ಚರ್ಚ್, ಮಹಾರಾಜ ಅರಮನೆ, ಮಹಾರಾಣಿ ದೇವಸ್ಥಾನ, ಗುಲ್ಮಾರ್ಗ್ ಗೊಂಡೋಲಾ ಇತ್ಯಾದಿಗಳಿಗೆ ಪ್ರಸಿದ್ಧವಾಗಿದೆ.

ಭಾರತೀಯ ಹವಾಮಾನ ಇಲಾಖೆ ಶ್ರೀನಗರದ ಪ್ರಕಾರ, ಭಾನುವಾರ ಬೆಳಿಗ್ಗೆ 8:30ಕ್ಕೆ ಗುಲ್ಮಾರ್ಗ್‌ನಲ್ಲಿ -5.8 ಡಿಗ್ರಿ ಸೆಲ್ಸಿಯಸ್, ಪಹಲ್ಗಾಮ್‌ನಲ್ಲಿ 0.2 ಡಿಗ್ರಿ ಸೆಲ್ಸಿಯಸ್, ಬನಿಹಾಲ್‌ನಲ್ಲಿ 0.6 ಡಿಗ್ರಿ ಸೆಲ್ಸಿಯಸ್ ಮತ್ತು ಜಮ್ಮುವಿನಲ್ಲಿ 8.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.

ಶ್ರೀನಗರದಲ್ಲಿ ಭಾನುವಾರ 1.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಈ ಚಳಿಗಾಲದ ಋತುವಿನ ಮೊದಲ ಹಿಮಪಾತವು ಭೂಮಿಯನ್ನು ಅಲಂಕರಿಸಿದಂತೆ ಗುಲ್ಮಾರ್ಗ್‌ನ ನೈಸರ್ಗಿಕ ಸೌಂದರ್ಯವು ಮತ್ತಷ್ಟು ಹೆಚ್ಚಾಗಿದೆ.

ಅಮರನಾಥ ಯಾತ್ರೆಯ ಮೂಲ ಶಿಬಿರಗಳಲ್ಲಿ ಒಂದಾಗಿರುವ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಕನಿಷ್ಠ ತಾಪಮಾನ ಮೈನಸ್ 5.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಬಾರಾಮುಲ್ಲಾ ಜಿಲ್ಲೆಯ ಪ್ರಸಿದ್ಧ ಸ್ಕೀ ರೆಸಾರ್ಟ್ ಗುಲ್ಮಾರ್ಗ್‌ನಲ್ಲಿ ಕನಿಷ್ಠ ಮೈನಸ್ 2.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಖಾಜಿಗುಂಡ್‌ನಲ್ಲಿ ಕನಿಷ್ಠ ಮೈನಸ್ 3.8 ಡಿಗ್ರಿ ಸೆಲ್ಸಿಯಸ್, ಕೊಕರ್ನಾಗ್ ಪಟ್ಟಣದಲ್ಲಿ ಮೈನಸ್ 3.6 ಡಿಗ್ರಿ ಸೆಲ್ಸಿಯಸ್ ಮತ್ತು ಕುಪ್ವಾರದಲ್ಲಿ ಮೈನಸ್ 1.0 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಭಾನುವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಜನರು ಹಿಮದಿಂದ ಆವೃತವಾದ ರಸ್ತೆಗಳಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ವಿಡಿಯೋ, ಫೋಟೋಗಳಲ್ಲಿ ನೋಡಬಹುದು.

ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗುಲ್ಮಾರ್ಗ್‌ನಲ್ಲಿ ಸುಮಾರು 6 ಇಂಚುಗಳಷ್ಟು ಹೊಸ ಹಿಮಪಾತ ಉಂಟಾಗಿದೆ.

ಗುಲ್ಮಾರ್ಗ್, ಕರ್ನಾಹ್, ಮಚಿಲ್, ಗುರೆಜ್ ಮತ್ತು ಕುಪ್ವಾರದ ಬಹುತೇಕ ಎಲ್ಲಾ ಮೇಲ್ಭಾಗಗಳು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ತಾಜಾ ಹಿಮಪಾತ ಉಂಟಾಗಿದೆ.

ಕಾಶ್ಮೀರದ ಮೇಲಿನ ಪ್ರದೇಶಗಳು ಇತ್ತೀಚೆಗೆ ಹಿಮಪಾತಕ್ಕೆ ಸಾಕ್ಷಿಯಾಗಿದ್ದು, ಬಯಲು ಪ್ರದೇಶಗಳಲ್ಲಿ ಶನಿವಾರ ಮಳೆಯಾಗಿದೆ.

ಗುಲ್ಮಾರ್ಗ್ ಸ್ಕೀ ರೆಸಾರ್ಟ್ ಸೇರಿದಂತೆ ಕಾಶ್ಮೀರ ಪರ್ವತಗಳಲ್ಲಿ ಲಘು ಹಿಮಪಾತದಿಂದಾಗಿ ಮೊಘಲ್ ರಸ್ತೆಯನ್ನು ಶನಿವಾರ ಸಂಚಾರಕ್ಕೆ ಮುಚ್ಚಲಾಗಿತ್ತು.



















