ನಾಡಿನಾದ್ಯಂತ ಗಣೇಶ ಹಬ್ಬ ಸಂಭ್ರಮ: ಭಕ್ತಿ-ಭಾವದಿಂದ ಗಣಪತಿ ಪ್ರತಿಷ್ಠಾಪನೆ, ಜೈ ಘೋಷಣೆ
ಕರ್ನಾಟಕದಾದ್ಯಂತ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ದಾವಣಗೆರೆ, ಚಿತ್ರದುರ್ಗ, ಕೋಲಾರ, ಬಾಗಲಕೋಟೆ, ಹುಬ್ಬಳ್ಳಿ, ಗದಗ ಮುಂತಾದೆಡೆ ಸಾರ್ವಜನಿಕರು ಗಣೇಶನನ್ನು ಭಕ್ತಿಯಿಂದ ಆರಾಧಿಸುತ್ತಿದ್ದಾರೆ. ವಿವಿಧ ಗಾತ್ರದ ಮಣ್ಣಿನ ಮತ್ತು ಇತರ ಗಣೇಶ ವಿಗ್ರಹಗಳಿಗೆ ಬಹುಮಟ್ಟಿಗೆ ಬೇಡಿಕೆಯಿದೆ. ಹಬ್ಬದ ಸಂಭ್ರಮದಲ್ಲಿ ಮಕ್ಕಳು ಹೊಸ ಉಡುಪುಗಳನ್ನು ಧರಿಸಿ ಸಂತೋಷಪಡುತ್ತಿದ್ದಾರೆ.
Updated on: Aug 27, 2025 | 12:54 PM

ಕರ್ನಾಟಕದೆಲ್ಲಡೆ ಗಣೇಶ ಹಬ್ಬವನ್ನು ಶ್ರಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಮನೆ, ಬೀದಿಗಳಲ್ಲಿ ವಿಘ್ನನಿವಾರಕನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಗಣಪತಿಯ ಆರಾಧನೆ ಶ್ರದ್ಧೆ, ಭಕ್ತಿಯಿಂದ ನಡೆಯುತ್ತಿದೆ. ಗಣೇಶನ ಮೂರ್ತಿ ನೋಡಿ ಫುಲ್ ಖುಷಿಯಲ್ಲಿರುವ ಮಕ್ಕಳು ಹೊಸ ಉಡುಪುಗಳಲ್ಲಿ ಕಂಗೊಳಿಸುತ್ತಿದ್ದಾರೆ.

ದಾವಣಗೆರೆಯಲ್ಲಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ. ಭಕ್ತರು ಸಂಭ್ರಮದಿಂದ ವಿಘ್ನೇಶ್ವರನನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಶತಮಾನಗಳಿಂದ ಗಣೇಶ ವಿಗ್ರಹ ಮಾರಾಟ ಮಾಡತ್ತಿರುವ ಮನೆಗಳ ಮುಂದೆ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ 2361 ಕಡೆ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಪೊಲೀಸ್ ಇಲಾಖೆ ಅನುಮತಿ ನೀಡಿದೆ. ದಾವಣಗೆರೆ ನಗರದಲ್ಲಿ 28 ಸೂಕ್ಷ್ಮ, 5 ಅತಿ ಸೂಕ್ಷ್ಮ ಪ್ರದೇಶಗಳು ಸೇರಿದಂತೆ 660 ಕಡೆ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ.

ಕೋಟೆನಾಡು ಚಿತ್ರದುರ್ಗ ನಗರದಲ್ಲಿ ಗಣೇಶ ಚತುರ್ಥಿ ಆಚರಣೆ ವಿಜೃಂಭಣೆಯಿಂದ ಕೂಡಿದೆ. ಹೂವು, ಹಣ್ಣು, ಪೂಜಾ ಸಾಮಗ್ರಿ ಖರೀದಿ ಜೋರಾಗಿದ್ದು, ವ್ಯಾಪಾರಸ್ಥರು ಫುಲ್ ಬ್ಯುಸಿಯಾಗಿದ್ದಾರೆ. ಹಾಗೇ, ಗಣೇಶ ವಿಗ್ರಹ ಖರೀದಿ ಕೂಡ ಜೋರಾಗಿಯೇ ಇದ್ದು, ಮಣ್ಣಿನ ಗಣಪನಿಗೆ ಭಾರಿ ಬೇಡಿಕೆ ಬಂದಿದೆ. ಈ ನಡುವೆ ಹೂವು, ಹಣ್ಣಿನ ದರ ದುಬಾರಿಯಾಗಿದೆ.

ಕೋಲಾರದ ಲೋಕಮಾನ್ಯ ತಿಲಕ ವಿನಾಯಕ ವಿಸರ್ಜನ ಸಮಿತಿ ಮತ್ತು ಭಜರಂಗದಳ ವತಿಯಿಂದ ದರ್ಮಸ್ಥಳ ಗಣೇಶ ವಿಗ್ರಹ ತಯಾರಿಸಾಲಾಗಿದೆ. ಈ ಗಣೇಶನನ್ನು ಕೋಲಾರದ ಎಂ.ಜಿ. ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಉಳಿಸಿ ಅನ್ನೋ ಅಭಿಯಾನಕ್ಕಾಗಿ ಧರ್ಮಸ್ಥಳ ಗಣೇಶ ವಿಗ್ರಹ ನಿರ್ಮಾಣ ಮಾಡಲಾಗಿದೆ. ಒಳಭಾಗದಲ್ಲಿ ಸುಮಾರು 22 ಅಡಿಯ ಬೃಹತ್ ಕಾಳಿ ಗಣೇಶ ವಿಗ್ರಹ ಪ್ರತಿಷ್ಠಾಪಿಸಲಾಗುತ್ತದೆ.

ಬಾಗಲಕೋಟೆಯ ಬಿವಿವಿ ಸಂಘದ ಮೆಡಿಕಲ್ ಕಾಲೇಜಿನಲ್ಲಿ ಗಣಪ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಅದ್ದೂರಿಯಾಗಿ ಮೆರವಣಿಗೆ ಮಾಡಿದರು. ಗಣೇಶನ ಮೆರವಣಿಗೆ ವೇಳೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿದರು.

ಹುಬ್ಬಳ್ಳಿ ನಗರದ ಬಮ್ಮಾಪುರ ಓಣಿಯಲ್ಲಿ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಬಪ್ಪರೆ ಬಪ್ಪ ಗಣಪತಿ ಬಪ್ಪ ಅಂತ ಜೈಕಾರ ಹಾಕುತ್ತಾ ಜನರು ಗಣೇಶ ಮೂರ್ತಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಭಕ್ತರು ನಮ್ಮೆಲ್ಲ ವಿಘ್ನಗಳನ್ನು ನಿವಾರಣೆ ಮಾಡು ಅಂತ ವಿನಾಯಕನಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

ಗದಗ ಜಿಲ್ಲೆಯಲ್ಲಿ ಗಣೇಶ ಹಬ್ಬದ ಸಡಗರ ಸಂಭ್ರಮ ಜೋರಾಗಿದೆ. ಗದಗ ನಗರದ APMC ಯಾರ್ಡ್ ನಲ್ಲಿರುವ ವಿವೇಕಾನಂದ ಸಭಾಭವನದಲ್ಲಿ ಗಣೇಶ ವಿಗ್ರಹ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಕುಟುಂಬ ಸಮೇತ ಆಗಮಿಸಿ ಗಣೇಶ ಮೂರ್ತಿಗೆ ಪೂಜೆ ಮಾಡಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಹಾವೇರಿ, ಧಾರವಾಡ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಯಿಂದ ಗಣೇಶ ಮೂರ್ತಿ ಮಾರಾಟಗಾರರು ಆಗಮಿಸಿದ್ದಾರೆ. 1 ಅಡಿಯಿಂದ 5 ಅಡಿಯವರಿಗೆ ಗಣಪತಿ ಮೂರ್ತಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.




