- Kannada News Photo gallery Love Letter Found in Kolar Chikkatirupati Temple Hundi: 49 Lakh Rupees Collected
ನನ್ನ ಫೀಲಿಂಗ್ಗಿಂತ ಅವನಿಗೆ ನನ್ನ ಮೇಲೆ ಫೀಲಿಂಗ್ ಶೇ 7 ರಷ್ಟು ಹೆಚ್ಚರಲಿ: ತಿಮ್ಮಪ್ಪನಲ್ಲಿ ಯುವತಿಯ ಪ್ರೇಮ ನಿವೇದನೆ
ಮಾಲೂರು ತಾಲೂಕಿನ ಚಿಕ್ಕತಿರುಪತಿ ದೇವಾಲಯದ ಹುಂಡಿ ಎಣಿಕೆಯಲ್ಲಿ ೪೯ ಲಕ್ಷ ರೂಪಾಯಿಗಳಿಗೂ ಅಧಿಕ ಕಾಣಿಕೆ ಪತ್ತೆಯಾಗಿದೆ. ಹುಂಡಿ ಎಣಿಕೆಯ ಸಮಯದಲ್ಲಿ ಒಬ್ಬ ಯುವತಿ ಬರೆದ ಪ್ರೇಮ ಪತ್ರವೂ ಸಿಕ್ಕಿದೆ. ಈ ಪತ್ರದಲ್ಲಿ ತನ್ನ ಪ್ರೇಮಿಯ ಜೊತೆ ಒಂದಾಗುವಂತೆ ದೇವರನ್ನು ಬೇಡಿಕೊಂಡಿದ್ದಾಳೆ. ಮೂರು ತಿಂಗಳಲ್ಲಿ 49,09,660 ರೂ. ನಗದು, ಚಿನ್ನ, ಬೆಳ್ಳಿ ಮತ್ತು ವಿದೇಶಿ ಕರೆನ್ಸಿಗಳು ಸಂಗ್ರಹವಾಗಿವೆ.
Updated on: Mar 05, 2025 | 7:49 AM

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕತಿರುಪತಿ ದೇವಾಲಯದ ಹುಂಡಿ ಎಣಿಕೆ ಮಂಗಳವಾರ (ಮಾರ್ಚ್. 04) ರಂದು ನಡೆಯಿತು. ಹುಂಡಿ ಎಣಿಕೆ ವೇಳೆ ದೇವಸ್ಥಾನದ ಆಡಳಿತ ಮಂಡಳಿ ಸಿಬ್ಬಂದಿಗೆ ಯುವತಿಯೊಬ್ಬಳು ಬರೆದಿರುವ ಪ್ರೇಮ ಕೋರಿಕೆ ಪತ್ರ ಸಿಕ್ಕಿದೆ.

ಯುವತಿ ಪತ್ರದಲ್ಲಿ "ನಾನು ಮತ್ತು ನನ್ನ ಪ್ರಿಯಕರ ಒಂದಾಗುವಂತೆ ಮಾಡು. ಅವನು ನನ್ನ ಬಿಟ್ಟು ಇರಲು ಆಗದಂತೆ ಮಾಡು, ನನ್ನ ಆಸೆ ಈಡೇರಿದರೇ ನಿನ್ನ ಸನ್ನಿಧಿಯಲ್ಲಿ ಮುಡಿ ಕೊಡುತ್ತೇನೆ" ಅಂತ ಪತ್ರದಲ್ಲಿ ಬರೆದು ಹುಂಡಿಯಲ್ಲಿ ಹಾಕಿದ್ದಾರೆ.

"ವೆಂಕಟರಮಣ ಸ್ವಾಮಿ, ತಿರುಪತಿ ತಿಮ್ಮಪ್ಪ, ನಾನು ನಿನ್ನ ಸನ್ನಿಧಿಗೆ ಬಂದು ಮುಡಿ ಕೊಡುತ್ತೇನೆ. ದಯವಿಟ್ಟು ಪ್ರದೀಪ್ ಮತ್ತು ನಾನು ಬೇಗ ಒಂದಾಗ ಬೇಕು. ಅವನು ನನ್ನನ್ನು ತುಂಬಾ ಇಷ್ಟ ಪಡಬೇಕು. ನನ್ನ ಬಿಟ್ಟು ಇರಲು ಆಗದಂತೆ ಮಾಡು. ಆಫೀಸ್ನಲ್ಲಿ ಮತ್ತು ಹೊರಗಡೆ ಎಲ್ಲರಿಗಿಂತ ನನ್ನ ಜಾಸ್ತಿ ಪ್ರೀತಿಸಬೇಕು.

ಆದಷ್ಟು ಬೇಗ ನಾವಿಬ್ಬರೂ ಒಂದಾಗಬೇಕು. ಆಗ ಇಡೀ ಆಫೀಸ್ ನನ್ನ ಜೊತೆ ಆ ಬಗ್ಗೆ ಮಾತನಾಡಬೇಕು. ಆದಷ್ಟು ಬೇಗ ನನಗೆ ಏನು ಅವನ ಮೇಲೆ ಏನು ಫೀಲಿಂಗ್ ಇದಿಯೋ, ಅವನಿಗೂ ಅದಕ್ಕಿಂತ ಶೇ 7 ರಷ್ಟು ಜಾಸ್ತಿ ಪೀಲಿಂಗ್ಸ್ ಬರಬೇಕು" ಹೀಗೆ ಯುವತಿ ಪತ್ರ ಬರೆದು ಹುಂಡಿಯಲ್ಲಿ ಹಾಕಿದ್ದಾರೆ. ತನ್ನ ಪ್ರೇಮ ನಿವೇದನೆಯನ್ನು ದೇವರ ಮುಂದಿಟ್ಟಿದ್ದಾರೆ.

ಚಿಕ್ಕತಿರುಪತಿ ದೇವಸ್ಥಾನದ ಹುಂಡಿಯಲ್ಲಿ ಕಳೆದ ಮೂರು ತಿಂಗಳಲ್ಲಿ ಭಕ್ತರಿಂದ 49 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿದೆ. 49,09,660 ನಗದು, 35 ಗ್ರಾಂ ಚಿನ್ನ, 184 ಗ್ರಾಂ ಬೆಳ್ಳಿ, ವಿದೇಶಿ ಕರೆನ್ಸಿಗಳು ಸಂಗ್ರಹವಾಗಿವೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೆಲ್ವಮಣಿ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.




