- Kannada News Photo gallery Sigandur Cable Bridge work almost complete: Decades dream of people of Sharavati backwater area is coming true
ಸಿಗಂದೂರು ಸೇತುವೆ ಕಾಮಗಾರಿ ಬಹುತೇಕ ಮುಕ್ತಾಯ: ನನಸಾಗುತ್ತಿದೆ ಶರಾವತಿ ಹಿನ್ನೀರು ಭಾಗದ ಜನರ ದಶಕಗಳ ಕನಸು
ಶಿವಮೊಗ್ಗ, ಜನವರಿ 31: ಕರ್ನಾಟಕದ ಕೊಲ್ಲೂರು ಮತ್ತು ಸಿಗಂದೂರು ದೇಗುಲಗಳ ಸಂಪರ್ಕ ಸರಳಗೊಳಿಸುವ ಮತ್ತು ಶರಾವತಿ ಹಿನ್ನೀರು ಭಾಗದ ಜನರಿಗೆ ನೆರವಾಗಲಿರುವ ಸಿಗಂದೂರು ಸೇತುವೆ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ಸೇತುವೆ ಲೋಕಾರ್ಪಣೆಯಾಗಲಿದೆ. ಸಿಗಂದೂರು ಸೇತುವೆ ಕಾಮಗಾರಿ ಪೂರ್ಣಹಂತಕ್ಕೆ ತಲುಪಿದ್ದು, ಇನ್ನು ಕಲವೇ ತಿಂಗಳುಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ.ಇದು ದೇಶದ ಕೇಬಲ್ ಆಧಾರಿತ ಸೇತುವೆಗಳಲ್ಲಿ 7ನೇ ಅತಿದೊಡ್ಡ ಸೇತುವೆ ಎಂಗ ಹೆಗ್ಗಳಿಕೆಗೂ ಪಾತ್ರವಾಗಲಿದೆ.
Updated on:Jan 31, 2025 | 11:16 AM

ಶಿವಮೊಗ್ಗ ಜಿಲ್ಲೆಯ ರಾಜಕೀಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರ ಇಚ್ಛಾಶಕ್ತಿಯ ಪ್ರಯತ್ನದ ಫಲವಾಗಿ 2019ರಲ್ಲಿ ಬೃಹತ್ ಸೇತುವೆ ಕಾಮಗಾರಿ ಪ್ರಾರಂಭವಾಗಿತ್ತು. ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು 464.23 ಕೋಟಿ ರೂ. ವೆಚ್ಚದ ಕಾಮಗಾರಿಯ ಉದ್ಘಾಟನೆ ನೆರವೇರಿಸಿದ್ದರು.

ಈ ಸೇತುವೆ ಸುಮಾರು 2.14ಕಿ.ಮೀ. ಉದ್ದ ಹಾಗೂ 16 ಮೀಟರ್ ಅಗಲ ಇರಲಿದೆ. 423.15 ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿಯು 2020ರ ಡಿಸೆಂಬರ್‌ನಲ್ಲಿ ಪ್ರಾರಂಭವಾಗಿತ್ತು. ಕೊರೊನಾ ಹಾಗೂ ಹೆಚ್ಚಿನ ಪ್ರಮಾಣದ ಹಿನ್ನೀರಿನ ಕಾರಣ ಆರಂಭದ ಎರಡು ವರ್ಷ ನಿಧಾನವಾಗಿ ಸಾಗಿದ ಕಾಮಗಾರಿ ಕೆಲಸ ನಂತರ ವೇಗ ಪಡೆಯಿತು. ಪ್ರಸ್ತುತ ಆಳವಾದ ಹಿನ್ನೀರಿನಲ್ಲಿ 17 ಪಿಲ್ಲರ್ ನಿರ್ಮಿಸಲಾಗಿದ್ದು, ಪಿಲ್ಲರ್ಗಳ ನಡುವೆ ಪ್ರೀಕಾಸ್ಟ್ ಕಾಂಕ್ರೀಟ್ ಬ್ಲಾಕ್ಗಳನ್ನು ಜೋಡಿಸುವ ಕೆಲಸ ಭರದಿಂದ ನಡೆಯುತ್ತಿದೆ.

ಈ ಸೇತುವೆ ಹಿನ್ನೀರು ಭಾಗದ ಜನರ ಸಂಪರ್ಕಕ್ಕೆ ಬಹುದೊಡ್ಡ ಕೂಡುಗೆ ಆಗಲಿದೆ ಎಂದು ಸೇತುವೆ ಉಸ್ತುವಾರಿ ಅಧಿಕಾರಿ ಫೀರ್ ಪಾಷಾ ಅಭಿಪ್ರಾಯಪಟ್ಟಿದ್ದಾರೆ.

ಸಿಗಂದೂರು ಸೇತುವೆಯ ವಿಶೇಷವೇನು?: ಸಿಗಂದೂರು ಕೇಬಲ್ ಆಧಾರಿತ ಸೇತುವೆ ಮುಂದಿನ ನಾಲ್ಕು ತಿಂಗಳಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸಿಗಂದೂರು ಸೇತುವೆಯು ಭಾರತದ ಕೇಬಲ್ ಆಧಾರಿತ ಸೇತುವೆಗಳಲ್ಲಿ 7ನೇ ಅತೊದೊಡ್ಡ ಸೇತುವೆ ಎಂಬ ಖ್ಯಾತಿ ಪಡೆಯಲಿದೆ. ಇದೀಗ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದ್ದು ಇನ್ನು ಕೆಲವೇ ಗರ್ಡರ್ ಬಾಕ್ಸ್‌ಗಳನ್ನು ಅಳವಡಿಕೆ ಮಾಡುವುದು ಮಾತ್ರ ಬಾಕಿಯಿದ್ದು, ಒಂದೆರಡು ತಿಂಗಳಲ್ಲಿ ಈ ಕಾಮಗಾರಿ ಮುಕ್ತಾಯಗೊಳ್ಳಲಿದೆ.

ಸುರಕ್ಷತಾ ತಪಾಸಣೆ ಮಾಡಿದ ನಂತರ ಈ ಸೇತುವೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ. ಸದ್ಯ ನಿರ್ಮಾಣ ಕಾಮಗಾರಿಯ ವಿಡಿಯೋ ವೈರಲ್ ಆಗಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ. ಸೇತುವೆ ಪ್ರವಾಸೋದ್ಯಮದ ಶಕ್ತಿಯಾಗಲಿದೆ ಎಂದು ಸಿಗಂದೂರು ಚೌಡೇಶ್ವರಿ ದೇವಸ್ಥಾನ ಧರ್ಮದರ್ಶಿ ರಾಮಪ್ಪ ಹೇಳಿದ್ದಾರೆ.

ಒಟ್ಟಾರೆ ಸಿಗಂದೂರು ಸೇತುವೆ ನಿರ್ಮಾಣದಿಂದಾಗಿ ಶರಾವತಿ ಹಿನ್ನೀರು ಭಾಗದ ಜನರ ಕನಸು ಒಂದೆಡೆ ನನಸಾದ್ರೆ ಮತ್ತೊಂದೆಡೆ ಶಿವಮೊಗ್ಗ ಪ್ರವಾಸೋದ್ಯಮಕ್ಕೆ ದೊಡ್ಡ ಶಕ್ತಿಯಾಗಲಿದೆ.
Published On - 11:16 am, Fri, 31 January 25



















