- Kannada News Photo gallery The Koppal farmers celebrated the seege hunnime despite the rain, Karnataka news in kannada
ಕೊಪ್ಪಳದಲ್ಲಿ ಸೀಗೆ ಹುಣ್ಣಿಮೆ ಸಂಭ್ರಮಕ್ಕೆ ವರುಣ ಅಡ್ಡಿ: ಮಳೆ ನಡುವೆ ಹಬ್ಬ ಆಚರಿಸಿದ ರೈತರು
Seege Hunnime: ಕರ್ನಾಟಕದಲ್ಲಿ ಎಲ್ಲೆಡೆ ಮಳೆ ಆರ್ಭಟ ಜೋರಾಗಿದೆ. ಈ ಮಧ್ಯ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಇಂದು ಸೀಗೆ ಹುಣ್ಣಿಮೆ ಹಬ್ಬವನ್ನು ರೈತರು ಆಚರಿಸಿ ಖುಷಿಪಟ್ಟಿದ್ದಾರೆ. ಅದರಲ್ಲೂ ಕೊಪ್ಪಳದಲ್ಲಿ ಮಳೆಯ ನಡುವೆಯೇ ರೈತರು ಹಬ್ಬ ಆಚರಿಸಿ, ಸಂಭ್ರಮ ಪಟ್ಟದು ಹೀಗೆ.
Updated on: Oct 17, 2024 | 5:22 PM

ಭೂಮಿ ತಾಯಿಗೂ ಮತ್ತು ಅನ್ನ ಬೆಳೆಯುವ ರೈತನಿಗೆ ತಾಯಿ-ಮಗನ ಸಂಬಂಧವಿದೆ. ಜೀವಕ್ಕೆ ಆಧಾರವಾಗಿರುವ ಭೂತಾಯಿಗೆ ನಮಿಸುವ ಉದ್ದೇಶದಿಂದಲೇ ರೈತರು ಅನೇಕ ಹಬ್ಬಗಳನ್ನು ಆಚರಿಸುತ್ತಾರೆ. ಅದರಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಆಚರಿಸುವ ಸೀಗೆ ಹುಣ್ಣಿಮೆ ಪ್ರಮುಖ ಹಬ್ಬವಾಗಿದೆ.

ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಇಂದು ಸೀಗೆ ಹುಣ್ಣಿಮೆಯನ್ನು ರೈತರು ಮಳೆಯ ನಡುವೆಯೇ ಆಚರಿಸಿ, ಸಂಭ್ರಮ ಪಟ್ಟರು. ಭೂಮಿತಾಯಿಗೆ ನಮಸಿ, ಸಾಮೂಹಿಕ ಬೋಜನವನ್ನು ಸವಿಸಿ ಆನಂದಿಸಿದ್ದಾರೆ.

ಹೌದು ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಇಂದು ಸೀಗೆ ಹುಣ್ಣಿಮೆ ಸಂಭ್ರಮದಿಂದ ಆಚರಿಸಲಾಯಿತು. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅನೇಕ ರೈತರು ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಆದರೂ ಕೂಡ ಭೂಮಿತಾಯಿಗೆ ನಮಿಸುವ ಕೆಲಸವನ್ನು ಬಿಡದೇ, ಭಕ್ತಿಯಿಂದ ಸೀಗೆ ಹುಣ್ಣಿಮೆಯನ್ನು ಆಚರಿಸಿದ್ದಾರೆ.

ಸೀಗೆ ಹುಣ್ಣಿಮೆಯ ದಿನ ರೈತರು, ತಮ್ಮ ಜಮೀನಿಗೆ ಹೋಗಿ, ಬನ್ನಿ ಗಿಡದ ಬಳಿ ಐದು ಕಲ್ಲುಗಳನ್ನು ಇಟ್ಟು, ಅವು ಪಾಂಡವರು ಅಂತ ಹೇಳಿ, ಪೂಜೆ ಮಾಡುತ್ತಾರೆ. ನಂತರ ಊಟಕ್ಕಾಗಿ ಮಾಡಿದ್ದ ಆಹಾರ ಪದಾರ್ಥಗಳನ್ನು ನೈವದ್ಯ ಮಾಡಿ, ಚರಗ ಅಂತ ಹೇಳಿ ಹೊಲದ ತುಂಬೆಲ್ಲಾ ಚೆಲ್ಲುತ್ತಾರೆ. ಭೂತಾಯಿ, ನಮ್ಮ ಮೇಲೆ ನಿಮ್ಮ ಕೃಪೆಯಿರಲಿ ಅಂತ ಭಕ್ತಿಯಿಂದ ಭೂಮಿ ತಾಯಿಗೆ ನಮಿಸುತ್ತಾರೆ.

ಇನ್ನು ಸೀಗೆ ಹುಣ್ಣಿಮೆಯ ಸಂಭ್ರಮ ಹೆಚ್ಚಿಸುವುದು ಭಕ್ಷ್ಯ ಭೋಜನಗಳು. ಭೂಮಿ ತಾಯಿಗೆ ನೈವೆದ್ಯ ಸೇರಿದಂತೆ ಊಟಕ್ಕೆ ತರೇಹವಾರಿ ಬೋಜನಗಳನ್ನು ತಯಾರಿಸುತ್ತಾರೆ. ಕಡುಬು, ಶೇಂಗಾ ಹೋಳಿಗೆ, ಹುರಕ್ಕಿ ಹೋಳಿಗೆ, ಹೋಳಿಗೆ, ಅನ್ನ, ಸಾರು, ರೊಟ್ಟಿ, ತರೇಹವಾರಿ ಚಟ್ನಿಗಳು, ಮಿರ್ಚಿ, ಬಜ್ಜಿಯನ್ನು ತಯಾರು ಮಾಡುತ್ತಾರೆ.

ಜಮೀನಿನಲ್ಲಿ ಪೂಜೆ ಮಾಡಿದ ನಂತರ ಸಾಮೂಹಿಕ ಭೋಜನ ಸವಿದು ಆನಂದಿಸುತ್ತಾರೆ. ಈ ಹಬ್ಬವನ್ನು ಮಾಡಲಿಕ್ಕೆಂದೆ ರೈತರು ವಾರದ ತಯಾರಿ ಮಾಡಿಕೊಳ್ಳುತ್ತಾರೆ. ಕೃಷಿ ಭೂಮಿಯಿದ್ದವರು, ಭೂಮಿ ಇಲ್ಲದೇ ಇರೋರರನ್ನು ತಮ್ಮ ಜಮೀನಿಗೆ ಆಮಂತ್ರಿಸಿ, ಭರ್ಜರಿ ಊಟ ಮಾಡಿಸಿ ಕಳುಹಿಸುತ್ತಾರೆ.

ಸೀಗೆ ಹುಣ್ಣಿಮೆಯ ಸಂಭ್ರಮಕ್ಕೆ ಈ ಭಾರಿ ಮಳೆ ಅಡ್ಡಿ ಮಾಡಿದೆ. ಒಂದೆಡೆ ಮಳೆಯಿಂದ ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಇನ್ನೊಂದೆಡೆ ನಿರಂತರ ಮಳೆಯಿಂದ ಹಬ್ಬದ ಸಂಭ್ರಮಕ್ಕೆ ಸ್ವಲ್ಪ ತೊದರೆಯಾಗಿದೆ. ಆದರೂ ಕೂಡ ರೈತರು ಮಳೆಯಲ್ಲಿಯೇ ಹಬ್ಬವನ್ನು ಆಚರಿಸಿ ಸಂಭ್ರಮಸಿದ್ದಾರೆ. ಭೂಮಿ ತಾಯಿಗೆ ನಮಿಸಿ, ಭೂತಾಯಿ ನಮ್ಮನ್ನು ಕೈಬಿಡದಂತೆ ಪ್ರಾರ್ಥಿಸಿದ್ದಾರೆ.



