- Kannada News Photo gallery Tradition comes alive: Bagalkote’s unique Sankranti celebration at Gadageri Cross
Bagalkote: ‘ಸುಗ್ಗಿಹುಗ್ಗಿ’ ಹೆಸರಲ್ಲಿ ಸಂಕ್ರಾಂತಿ ಸಂಭ್ರಮ; ಇಲ್ಲಿವೆ ಅಂದದ ಚಿತ್ರಗಳು
ಬಾಗಲಕೋಟೆಯ ಗದ್ದನಕೇರಿ ಕ್ರಾಸ್‌ನಲ್ಲಿ ನಡೆದ ಸುಗ್ಗಿ ಹುಗ್ಗಿ ಸಂಕ್ರಾಂತಿ ಆಚರಣೆ ಕಣ್ಮನ ಸೆಳೆಯಿತು. ಇಳಕಲ್ ಸೀರೆ ತೊಟ್ಟ ನೀರೆಯರು ಜನಪದ ನೃತ್ಯ, ಎತ್ತಿನಬಂಡಿ ಸವಾರಿ, ಉತ್ತರ ಕರ್ನಾಟಕದ ಭೋಜನದೊಂದಿಗೆ ರೈತರಿಗೆ ಧನ್ಯವಾದ ಸಲ್ಲಿಸಿರೋದು ಕಾರ್ಯಕ್ರಮದ ವಿಶೇಷತೆಯಾಗಿತ್ತು. ನೂರಾರು ಮಹಿಳೆಯರು ಸಾಂಪ್ರದಾಯಿಕವಾಗಿ ಪಾಲ್ಗೊಂಡು ಸಂಸ್ಕೃತಿ ಉಳಿಸುವ ಸಂದೇಶ ಸಾರಿದರು.
Updated on: Jan 12, 2026 | 6:17 PM

ಎತ್ತ ನೋಡಿದರೂ ಇಳಕಲ್ ಸೀರೆಯಲ್ಲಿ ಕಂಗೊಳಿಸುತ್ತಿರುವ ನೀರೆಯರು, ಜನಪದ ಶೈಲಿಯಲ್ಲಿ ಭರ್ಜರಿ ನೃತ್ಯ, ಪುರುಷರ ವೇಷ ತೊಟ್ಟ ಮಹಿಳೆಯರಿಂದ ಬಳೆಗಾರನ ಕುಣಿತ, ಎತ್ತಿನಬಂಡಿಯಲ್ಲಿ ಓಡಾಟ, ಉತ್ತರಕರ್ನಾಟಕ ಜವಾರಿ ಭೋಜನ. ಈ ಎಲ್ಲ ಸಾಂಪ್ರದಾಯಿಕ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಕ್ರಾಸ್.

ಗದ್ದನಕೇರಿ ಕ್ರಾಸ್ ಮಾರುತೇಶ್ವರ ದೇವಸ್ಥಾನದ ವ್ಯಾಪ್ತಿಯಲ್ಲಿ ವಿಶೇಷವಾಗಿ ಸಂಕ್ರಾಂತಿ ಆಚರಣೆ ನಡೆದಿದ್ದು, ಸುಗ್ಗಿಹುಗ್ಗಿ ಹೆಸರಲ್ಲಿ ನಡೆದ ಕಾರ್ಯಕ್ರಮ ನೋಡುಗರ ಕಣ್ಮನ ಸೆಳೆದಿದೆ. ಇಳಕಲ್ ಸೀರೆಯಲ್ಲಿ ಮಿಂಚುತ್ತಿದ್ದ ನೀರೆಯರು ಎತ್ತಿನ ಗಾಡಿಯಲ್ಲಿ ದೇವಸ್ಥಾನಕ್ಕೆ ಬಂದು ಮಾರುತೇಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ. ದೇವರಿಗೆ ಉಡಿ ತುಂಬಿ ಭಕ್ತಿ ಸಮರ್ಪಣೆ ಮಾಡಿದ್ದಾರೆ. ಮಕ್ಕಳ ತಲೆ ಮೇಲೆ ಚುರುಮುರಿ ಸುರಿದು ಸಂಕ್ರಾಂತಿ ಸ್ನಾನವೂ ಜೋರಾಗಿಯೇ ನಡೆದಿದೆ.

ರೈತರಿಗೆ ಧನ್ಯವಾದ ಹೇಳುವುದರ ಜೊತೆಗೆ ನಮ್ಮ ಹಬ್ಬ, ಆಚರಣೆ, ಸಂಸ್ಕೃತಿ, ಪದ್ಧತಿ ಉಳಿಸಿ ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಗ್ಗಿಹುಗ್ಗಿ ಹೆಸರಲ್ಲಿ ಪ್ರತಿ ವರ್ಷ ನೂರಾರು ಮಹಿಳೆಯರನ್ನೊಳಗೊಂಡ ತಂಡ ಸೇರಿ ಇದೇ ರೀತಿ ವಿಭಿನ್ನವಾಗಿ ಸಂಕ್ರಾಂತಿಯನ್ನು ಆಚರಿಸಿಕೊಂಡು ಬಂದಿರೋದು ಇಲ್ಲಿನ ವಿಶೇಷ.

ಮನೆಯಿಂದ ಮಹಿಳೆಯರು ಉತ್ತರ ಕರ್ನಾಟಕ ಶೈಲಿಯ ಅಡುಗೆ ಮಾಡಿಕೊಂಡು ಬಂದಿದ್ದರು. ಸಜ್ಜೆ ರೊಟ್ಟಿ, ಎಳ್ಳು ರೊಟ್ಟಿ, ಎಣಗಾಯಿ ಪಲ್ಯ, ಅವರೆಕಾಯಿ, ಶೇಂಗಾ ಹೋಳಿಗೆ, ಶೇಂಗಾ ಚಟ್ನಿ, ಚಪಾತಿ, ಸಲಾಡ್ ಸೇರಿದಂತೆ ಬಗೆ ಬಗೆಯ ಭಕ್ಷ್ಯ ಭೋಜನಗಳು ಬಾಯಲ್ಲಿ ನೀರು ತರಿಸುವಂತಿತ್ತು. ಉಳಿದೆಲ್ಲ ಕಾರ್ಯಕ್ರಮಗಳು ಮುಗಿದ ಬಳಿಕ ಎಲ್ಲರೂ ಸೇರಿ ಸಹಭೋಜನ ಮಾಡಿ ಖುಷಿ ಪಟ್ಟರು.

ಆಧುನಿಕ ಯುಗದಲ್ಲಿ ಜನ ತಮ್ಮ ಆಚರಣೆಗಳನ್ನೇ ಮರೆತಿರುವ ನಡುವೆಯೂ ನೂರಾರು ಮಂದಿ ಸೇರಿ ಹಳೆ ಪದ್ಧತಿಯಲ್ಲಿ ಸಾಂಪ್ರದಾಯಿಕವಾಗಿ ಸಂಕ್ರಾಂತಿ ಆಚರಿಸಿರೋದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ಆಚರಣೆಗಳು ನಿಜಕ್ಕೂ ಸಮಾಜಕ್ಕೆ ಮಾದರಿ ಎಂಬ ಮಾತುಗಳು ಸಹ ಕೇಳಿಬಂದಿವೆ.
