ಏನಿದು ತುಳು ಜನರ ಮುಳ್ಳಮುಟ್ಟೆ ಆಚರಣೆ? ದೀಪಾವಳಿಗೂ ಇದಕ್ಕೂ ಇರುವ ನಂಟು ತಿಳಿಯಿರಿ
ಕರಾವಳಿ ತುಳುನಾಡಿನ ದೀಪಾವಳಿ ಆಚರಣೆಗಳು ಅನನ್ಯ. ಸ್ವಚ್ಛತೆಯನ್ನು ಮುಖ್ಯವಾಗಿಟ್ಟುಕೊಂಡು ಆಚರಿಸುವ ಮುಳ್ಳಮುಟ್ಟೆ ಮತ್ತು ಕೃಷಿ ಸಂಸ್ಕೃತಿಯೊಂದಿಗೆ ಬೆಸೆದಿರುವ ಬಲಿ ಪೂಜೆ ಪ್ರಮುಖ ಆಕರ್ಷಣೆಗಳು. ಭೂಮಿ ಮತ್ತು ಬಲಿ ಚಕ್ರವರ್ತಿಯ ಪೂಜೆಯೊಂದಿಗೆ, ಜನಪದ ನೃತ್ಯ ಮತ್ತು ದೀಪಗಳ ಅಲಂಕಾರವು ಹಬ್ಬವನ್ನು ವಿಶೇಷವಾಗಿದೆ.
1 / 5
ಕರಾವಳಿಯ ತುಳು ಜನರಿಗೆ ದೀಪಾವಳಿ ಅತೀದೊಡ್ಡ ಹಬ್ಬ. ಇಲ್ಲಿನ ಕೃಷಿ ಸಂಸ್ಕೃತಿಯೊಂದಿಗೆ ಬೆಸೆದು ಹೋಗಿರುವ ಜನಪದ ದೀಪಾವಳಿಯನ್ನು ನೋಡೋದೇ ಒಂದು ಸೊಬಗು. ಸ್ವಚ್ಛ ಭಾರತ ಅಭಿಯಾನ ಶತಮಾನಗಳ ಹಿಂದೆಯೇ ತುಳುನಾಡಲ್ಲಿ ಚಾಲ್ತಿಯಲ್ಲಿತ್ತು ಅಂದ್ರೂ ತಪ್ಪಲ್ಲ.
2 / 5
ಸರ್ಕಾರದ ಜನಪ್ರಿಯ ಕಾರ್ಯಕ್ರಮ ಸ್ವಚ್ಛ ಭಾರತ ತುಳು ಜನಪದದಲ್ಲಿ ಎಂದಿನಿಂದಲೋ ಚಾಲ್ತಿಯಲ್ಲಿದೆ ಗೊತ್ತಾ? ಹೌದು ದೀಪಾವಳಿ ಬಂದ್ರೆ ಹಳೇ ಸಂಪ್ರದಾಯಗಳಿಗೆ ಮತ್ತೆ ಜೀವ ಬರುತ್ತೆ. ಅಂತಾದ್ದೇ ಒಂದು ಆಚರಣೆ ಮುಳ್ಳಮುಟ್ಟೆ. ಉಡುಪಿಯಲ್ಲಿ ಇಂದಿಗೂ ಈ ಆಚರಣೆ ಚಾಲ್ತಿಯಲ್ಲಿದೆ. ಕಸವೆಂಬ ನರಕವನ್ನು ರಾಶಿ ಹಾಕಿ ಸುಟ್ಟ ನಂತರ ತುಳು ಜನಪದ ನೃತ್ಯ ಮಾಡಿ ಹಬ್ಬವನ್ನು ಸಂಭ್ರಮಿಸಲಾಗುತ್ತೆ.
3 / 5
ಕೃಷಿಯೇ ಬದುಕು ಅಂತ ನಂಬಿದವರು ಕರಾವಳಿಯ ಜನ, ಕೃಷಿಕರು ಮಣ್ಣಿನ ಮಕ್ಕಳು, ಹಿಂದೆಲ್ಲಾ ಯಾರೂ ಚಪ್ಪಲಿ ಧರಿಸುತ್ತಿರಲಿಲ್ಲ. ಹಾಗಾಗಿ ಕೃಷಿ ಅಂತ ಗದ್ದೆಗಳಲ್ಲಿ ಓಡಾಡೋವಾಗ ಮುಳ್ಳು ಚುಚ್ಚಿ ಘಾಸಿಯಾಗುತ್ತಿತ್ತು. ಅದನ್ನು ತಪ್ಪಿಸಲೆಂದೇ ಒಂದು ಸುಂದರ ಆಚರಣೆ ಚಾಲ್ತಿಗೆ ತಂದರು. ಕಾಲಿಗೆ ಘಾಸಿಯಾಬಲ್ಲ ಮುಳ್ಳನ್ನೆಲ್ಲಾ ಹೆಕ್ಕಿ ಒಂದೆಡೆ ರಾಶಿ ಹಾಕಿ, ಗುಡ್ಡೆ ಮಾಡಿ ಬೆಂಕಿ ಕೊಡೋದು ಸಂಪ್ರದಾಯ. ಅದನ್ನೇ ಮುಳ್ಳಮುಟ್ಟೆ ಅಂತ ಕರೆಯುತ್ತಾರೆ.
4 / 5
ಈ ಭಾಗದಲ್ಲಿ ದೀಪಾವಳಿ ಪ್ರಕೃತಿ ಆರಾಧನೆಯೂ ಹೌದು. ಈ ಸಂದರ್ಭದಲ್ಲಿ ಕರಾವಳಿಯ ಭೂಭಾಗವನ್ನು ಆಳಿದ ಬಲಿ ಚಕ್ರವರ್ತಿಯನ್ನು ಬರಮಾಡಿಕೊಂಡು, ಗೌರವಿಸಿ, ಬೀಳ್ಕೋಡುವ ಸಂಪ್ರದಾಯ ಅತ್ಯಂತ ವಿಶಿಷ್ಟವಾಗಿ ನಡೆಯುತ್ತೆ. ಕೃಷಿ ಸಂಸ್ಕೃತಿಯ ಪ್ರತೀಕವಾಗಿ ಇಲ್ಲಿ ಬಲೀಂದ್ರ ಪೂಜೆ ನಡೆಸಲಾಗುತ್ತೆ. ತುಳು ನಾಡನ್ನು ರಾಜಾ ಬಲೀಂದ್ರ ಆಳುತ್ತಿದ್ದನು ಅನ್ನೋದು ಇಲ್ಲಿನ ಜನರ ನಂಬಿಕೆ, ದೀಪಾವಳಿಯ ಸಂದರ್ಭದಲ್ಲಿ ಭತ್ತದ ಗದ್ದೆಗೆ ದೀಪಗಳ ಕೋಲಿಟ್ಟು, ಬಲೀಂದ್ರನನ್ನು ಕೂಗಿ ಕರೆಯಲಾಗುತ್ತೆ. ಆಳಿದ ಅರಸನನ್ನು ಕರೆದು ಗೌರವಿಸಿ ಬೀಳ್ಕೋಡುವ ಈ ಅಪರೂಪದ ಆಚರಣಾ ವಿಧಾನ ನಿಜಕ್ಕೂ ಆಕರ್ಷಕ.
5 / 5
ಕೃಷಿಯನ್ನೇ ಅವಲಂಭಿಸಿ ಇಲ್ಲಿನ ಜನ ಜೀವನ ನಡೆಸುತ್ತಿದ್ದರು. ಹಾಗಾಗಿ ಬಲೀಂದ್ರನ ಜೊತೆಗೆ ಭೂಮಿಯ ಪೂಜೆಯೂ ನಡೆಯುತ್ತೆ, ಕಾಡು ಹೂವುಗಳು, ವೀಳ್ಯದೆಲೆ, ಅಡಿಕೆ, ತೆಂಗಿನ ಹೋಳುಗಳನ್ನು ಜೋಡಿಸಿ, ದೀಪ ಬೆಳಗಿಸಿ ಇಳಿಹೊತ್ತಲ್ಲಿ ಜನಪದೀಯವಾಗಿ ಆಚರಣೆ ನಡೆಯುತ್ತೆ. ವರ್ಷಕ್ಕೊಮ್ಮೆ ಭೇಟಿ ನೀಡುವ ತಮ್ಮ ಹೆಮ್ಮೆಯ ಅರಸನ ಆತಿಥ್ಯ ಮಾಡುವ ಸಡಗರ ಇಲ್ಲಿನ ಜನರಲ್ಲಿ ಕಾಣಬಹುದು. ವಿಶಿಷ್ಟ ಜನಪದ ಸಂಸ್ಕೃತಿಯ ಪ್ರತೀಕ ಈ ಬಲಿಂದ್ರ ಪೂಜೆ.
Published On - 8:40 pm, Fri, 1 November 24