- Kannada News Photo gallery udupi paryaya 2024: Puttige Mutt Sugunendra Theertha Swamiji Darbar, UT Khader, BSY, Shobha and other dignitories participated
ಉಡುಪಿ: ಪರ್ಯಾಯ ಪುತ್ತಿಗೆ ಶ್ರೀ ಸಾರ್ವಜನಿಕ ದರ್ಬಾರ್ನಲ್ಲಿ ಖಾದರ್, ಯಡಿಯೂರಪ್ಪ ಇತರ ಗಣ್ಯರು
ಉಡುಪಿ, ಜನವರಿ 18: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪುತ್ತಿಗೆ ಶ್ರೀಗಳಿಂದ ಗುರುವಾರ ರಾಜಾಂಗಣದಲ್ಲಿ ಸಾರ್ವಜನಿಕ ದರ್ಬಾರ್ ನೆರವೇರಿತು. ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ಅನೇಕ ಗಣ್ಯರು ಸಾರ್ವಜನಿಕ ದರ್ಬಾರ್ಗೆ ಹಾಜರಾದರು.
Updated on: Jan 18, 2024 | 9:09 AM

ಸಂಪ್ರದಾಯದಂತೆ ಮೊದಲು ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಕೃಷ್ಣ ಮಠದಲ್ಲಿ ಖಾಸಗಿ ದರ್ಬಾರ್ ನಡೆಸಿದರು. ನಂತರ ಸಾರ್ವಜನಿಕ ದರ್ಬಾರ್ನಲ್ಲಿ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಭಾಗಿಯಾದರು.

ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರ ಸಾರ್ವಜನಿಕ ಪರ್ಯಾಯ ದರ್ಬಾರ್ನಲ್ಲಿ ಅನೇಕ ರಾಜಕೀಯ ಮುಖಂಡರೂ ಭಾಗವಹಿಸಿದರು. ಇದಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿ ಅಯೋಧ್ಯೆಯ ರಾಮಮಂದಿರ ನಿರ್ಮಾಣವನ್ನು ಸಂಕೇತಿಸುವ ಟ್ಯಾಬ್ಲೋ ಸೇರಿದಂತೆ ಹತ್ತಾರು ಟ್ಯಾಬ್ಲೋಗಳು ಗಮನ ಸೆಳೆದವು.

ಸ್ಪೀಕರ್ ಯು.ಟಿ ಖಾದರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ರಾಜಕೀಯ ನಾಯಕರ ಜತೆ ಸ್ಥಳೀಯ ಶಾಸಕರೂ ಭಾಗಿಯಾದರು.

ಪುತ್ತಿಗೆ ಶ್ರೀಗಳ ಪರ್ಯಾಯ ಪೀಠಾರೋಹಣಕ್ಕೆ ಇತರ ಮಠಗಳ ಶ್ರೀಗಳು ಗೈರಾಗುತ್ತಿದ್ದಾರೆ. ಇದರೊಂದಿಗೆ 2008ರ ಇತಿಹಾಸ ಪುನರಾವರ್ತನೆಯಾದಂತಾಗಿದೆ.

2008 ರಲ್ಲಿ ಕೂಡ ಪುತ್ತಿಗೆ ಶ್ರೀಗಳ ಪರ್ಯಾಯ ಪೀಠಾರೋಹಣಕ್ಕೆ ವಿರೋಧ ವ್ಯಕ್ತವಾಗಿತ್ತು. ಆ ಸಂದರ್ಭ ಅಂದಿನ ಶೀರೂರು ಶ್ರೀಗಳು ಅವರ ಜೊತೆ ನಿಂತಿದ್ದರು. ಉಳಿದ 6 ಮಠಗಳ ಶ್ರೀಗಳು ಪರ್ಯಾಯದಿಂದ ದೂರ ಉಳಿದಿದ್ದರು.

ಯಾಕಾಗಿ ವಿರೋಧ?: ಉಡುಪಿ ಅಷ್ಟ ಮಠಗಳ ಪರಂಪರೆಯಂತೆ ಅಲ್ಲಿನ ಯಾವುದೇ ಶ್ರೀಗಳು ಸಮುದ್ರೋಲ್ಲಂಘನೆ ಮಾಡುವಂತಿಲ್ಲ. ಆದರೆ, ಪುತ್ತಿಗೆ ಶ್ರೀಗಳು ಸಮುದ್ರೋಲ್ಲಂಘನೆ ಮಾಡಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಸುಮಾರು 16 ದೇಶಗಳ ಪ್ರವಾಸ ಮಾಡಿದ್ದಾರೆ. ಹೀಗಾಗಿ ಅವರ ಪರ್ಯಾಯ ಪೀಠಾರೋಹಣಕ್ಕೆ ಇತರ ಮಠಾಧೀಶರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಏನಿದು ಉಡುಪಿ ಪರ್ಯಾಯ?: ಉಡುಪಿಯ ಕೃಷ್ಣ ದೇಗುಲದಲ್ಲಿ 8 ಮಠಗಳು ಇದ್ದು, ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಮಹೋತ್ಸವದ ವೇಳೆ ಎರಡು ವರ್ಷಗಳ ಕಾಲ ಕೃಷ್ಣನ ಸೇವೆ ಮಾಡುವ ಜವಾಬ್ದಾರಿಯನ್ನು ಮತ್ತೊಂದು ಮಠಕ್ಕೆ ಬಿಟ್ಟುಕೊಡಲಾಗುತ್ತದೆ. ಸರದಿಯಂತೆ ಅಷ್ಟ ಮಠಗಳ ಯತಿಗಳು ಎರಡು ವರ್ಷ ಕಾಲ ಶ್ರೀಕೃಷ್ಣನ ಪೂಜೆ, ಸೇವೆ ಮಾಡುತ್ತಾ ಬರುತ್ತಾರೆ.



