- Kannada News Photo gallery Union Budget, expectations and challenges for Railways, budget news in Kannada
ರೈಲ್ವೆ ಬಜೆಟ್: ಹತ್ತು ವರ್ಷದ ಹಿಂದಿನದಕ್ಕಿಂತ ನಾಲ್ಕು ಪಟ್ಟು ಹೆಚ್ಚಾದ ಬಜೆಟ್ ಗಾತ್ರ; ಈ ಬಾರಿಯ ನಿರೀಕ್ಷೆಗಳಿವು…
ನವದೆಹಲಿ, ಜುಲೈ 21: ಕೇಂದ್ರ ಬಜೆಟ್ ಜುಲೈ 23, ಮಂಗಳವಾರದಂದು ಮಂಡನೆ ಆಗಲಿದೆ. 2016ಕ್ಕೆ ಮುನ್ನ ಪ್ರತ್ಯೇಕವಾಗಿ ರೈಲ್ವೆ ಬಜೆಟ್ ಮಂಡನೆ ಆಗುತ್ತಿತ್ತು. ಈಗ ಕೇಂದ್ರ ಬಜೆಟ್ನಲ್ಲೇ ರೈಲ್ವೆ ಬಜೆಟ್ ಅನ್ನು ಒಳಗೊಳ್ಳಲಾಗಿದೆ. ಹತ್ತು ವರ್ಷದ ಹಿಂದೆ ರೈಲ್ವೆ ಬಜೆಟ್ಗೆ ವಿನಿಯೋಗಿಸುತ್ತಿದ್ದ ಹಣ ಈಗ ಮೂರ್ನಾಲ್ಕು ಪಟ್ಟು ಹೆಚ್ಚಾಗಿದೆ. ಭಾರತೀಯ ರೈಲ್ವೆ ನಷ್ಟದ ಪೊರೆ ಕಳಚಿ ಲಾಭ ಗಳಿಸಲು ಮಾರ್ಗೋಪಾಯಗಳಿಗೆ ಹೆಣಗಾಡುತ್ತಿದೆ. ಇಲಾಖೆಯಲ್ಲಿ ಸುಧಾರಣೆ ತರುವ ಪ್ರಯತ್ನ ನಿರೀಕ್ಷಿತ ರೀತಿಯಲ್ಲಿ ಫಲ ಕೊಡುತ್ತಿಲ್ಲ. ಟ್ರೈನುಗಳ ಆಧುನೀಕರಣ, ಹಳಿಗಳನ್ನು ಮೇಲ್ದರ್ಜೆಗೇರಿಸುವುದು, ರೈಲ್ವೆ ಸೇವೆಯನ್ನು ಉತ್ತಮಗೊಳಿಸುವುದು ಇವೇ ಮುಂತಾದ ಗುರಿಗಳು ಸಾಕಾರಗೊಳ್ಳಬೇಕಿದೆ. ಈ ಬಗ್ಗೆ ಒಂದು ವರದಿ...
Updated on: Jul 21, 2024 | 2:28 PM

ಮೋದಿ 3.0 ಸರ್ಕಾರದ ಮೊದಲ ಬಜೆಟ್ ಜುಲೈ 23ರಂದು ಮಂಡನೆ ಆಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ ಬಜೆಟ್ನಲ್ಲೇ ರೈಲ್ವೆ ಬಜೆಟ್ ಕೂಡ ಒಳಗೊಂಡಿರುತ್ತದೆ. ಪ್ರಸಕ್ತ ಉದ್ಯಮ ವಲಯದ ಬೆಳವಣಿಗೆ, ಜನಸಂಖ್ಯೆ ಹೆಚ್ಚಳ, ವಿವಿಧ ಸಾರಿಗೆ ವ್ಯವಸ್ಥೆಗಳಿಂದ ಪೈಪೋಟಿ ಇತ್ಯಾದಿ ಕಾರಣಗಳಿಂದ ಭಾರತೀಯ ರೈಲ್ವೆಯಿಂದ ನಿರೀಕ್ಷೆಗಳು ಹಲವಿವೆ. ಸವಾಲುಗಳೂ ಜಾಸ್ತಿ ಇವೆ.

ಈ ಬಾರಿಯ ರೈಲ್ವೆ ಬಜೆಟ್ನಲ್ಲಿ ಎಷ್ಟು ಹಣ ನಿಯೋಜಿಸಲಾಗುವುದು ಎಂಬುದು ಕುತೂಹಲ ಮೂಡಿಸಿದೆ. 2023ರ ಫೆಬ್ರುವರಿಯಲ್ಲಿ ಮಂಡನೆಯಾದ ಬಜೆಟ್ನಲ್ಲಿ ರೈಲ್ವೆಗೆ 2.40 ಲಕ್ಷ ಕೋಟಿ ರೂ ಕೊಡಲಾಗಿತ್ತು. 2013ರಲ್ಲಿ ಪ್ರತ್ಯೇಕವಾಗಿ ಮಂಡನೆಯಾಗಿದ್ದ ರೈಲ್ವೆ ಬಜೆಟ್ 63,363 ಕೋಟಿ ರೂ ಗಾತ್ರದ್ದಾಗಿತ್ತು. ಹತ್ತು ವರ್ಷದಲ್ಲಿ ಹೆಚ್ಚೂಕಡಿಮೆ ನಾಲ್ಕು ಪಟ್ಟು ಹೆಚ್ಚಾಗಿದೆ ಬಜೆಟ್ ಗಾತ್ರ.

2016ರವರೆಗೂ ಪ್ರತ್ಯೇಕವಾಗಿ ರೈಲ್ವೆ ಬಜೆಟ್ ಮಂಡನೆ ಆಗುತ್ತಿತ್ತು. ಕೊನೆಯ ಬಾರಿ ರೈಲ್ವೆ ಬಜೆಟ್ ಮಂಡಿಸಿದ್ದು ಮಾಜಿ ರೈಲ್ವೆ ಸಚಿವ ಸುರೇಶ್ ಪ್ರಭು. 2017ರ ಬಜೆಟ್ನಲ್ಲಿ ಸಾಮಾನ್ಯ ಬಜೆಟ್ ಜೊತೆಗೆಯೇ ರೈಲ್ವೆ ಬಜೆಟ್ ಅನ್ನು ವಿಲೀನಗೊಳಿಸಲಾಯಿತು.

ಸರ್ಕಾರ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತುಕೊಡುತ್ತಿದೆ. ಈ ನಿಟ್ಟಿನಲ್ಲಿ ರೈಲ್ವೆ ಪಾತ್ರ ಮಹತ್ತರವಾದುದು. ಪ್ರಯಾಣಿಕರಿಗೆ ವೇಗದ ಮತ್ತು ಸುರಕ್ಷಿತ ಸೇವೆ ಒದಗಿಸಲು ಸಾಧ್ಯವಾಗುವ ರೀತಿಯಲ್ಲಿ ರೈಲ್ವೆಯಲ್ಲಿ ಸುಧಾರಣೆಗಳು ಮತ್ತು ಪರಿವರ್ತನೆಗಳನ್ನು ತರಲು ಸರ್ಕಾರ ಶ್ರಮಿಸುತ್ತಿದೆ.

ಉತ್ತಮ ಗುಣಮಟ್ಟದ ವಂದೇ ಭಾರತ್ ರೈಲುಗಳ ಸಂಖ್ಯೆ ಹೆಚ್ಚುತ್ತಿದೆ. ಬುಲೆಟ್ ರೈಲುಗಳು ಆಗಮನವಾಗುತ್ತಿವೆ. ರೈಲು ಹಳಿಗಳನ್ನು ಅಪ್ಗ್ರೇಡ್ ಮಾಡುವ ಬಹುದೊಡ್ಡ ಸವಾಲು ಇಲಾಖೆ ಮುಂದಿದೆ. ಇದಾದರೆ ವಂದೇ ಭಾರತ್ ರೈಲುಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ಒದಗಿಸಲು ಸಾಧ್ಯವಾಗುತ್ತದೆ.

ರೈಲ್ವೆ ನಿಲ್ದಾಣಗಳ ಆಧುನೀಕರಣ ಮಾಡಬೇಕಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಪ್ರಕಾರ ರೈಲು ಸೇವೆಗಳನ್ನು ಅಪ್ಗ್ರೇಡ್ ಮಾಡುವುದು ಅವಶ್ಯಕ. ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಆರಾಮ ಪ್ರಯಾಣದ ಸೇವೆ ಒದಗಿಸುವುದು ಮುಖ್ಯ.

ದೇಶದಲ್ಲಿ ವೈಮಾನಿಕ ಸೇವೆ ವಿಸ್ತರಿತವಾಗುತ್ತಿದೆ. ಸಣ್ಣ ನಗರಗಳಲ್ಲೂ ಇಂದು ವಿಮಾನ ನಿಲ್ದಾಣಗಳು ಸ್ಥಾಪನೆ ಆಗುತ್ತಿವೆ. ವಿಮಾನ ಪ್ರಯಾಣ ಕೂಡ ತೀರಾ ದುಬಾರಿ ಇಲ್ಲ. ಜನರಿಗೆ ಈಗ ಬಹುಸಾರಿಗೆ ಆಯ್ಕೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಗೆ ಕಠಿಣ ಸ್ಪರ್ಧೆಯಂತೂ ಇದೆ.

ದೇಶದ ಆರ್ಥಿಕ ಬೆಳವಣಿಗೆಗೆ ರೈಲ್ವೆ ಇಲಾಖೆ ಪಾತ್ರ ಪ್ರಮುಖವಾಗಿದೆ. ವಿವಿಧೆಡೆ ನೆಲೆಗೊಂಡಿರುವ ಉದ್ದಿಮೆಗಳ ಉತ್ಪನ್ನಗಳ ಸಾಗಾಟಕ್ಕೆ ರೈಲ್ವೆ ನೆರವು ಅಗತ್ಯ. ಪ್ಯಾಸೆಂಜರ್ ರೈಲುಗಳ ಜೊತೆಗೆ ಸರಕು ಸಾಗಣೆ ರೈಲುಗಳ ಸಂಖ್ಯೆ ಹೆಚ್ಚಳವಾಗಬೇಕು. ಪ್ಯಾಸಂಜರ್ ರೈಲುಗಳಿಗಿಂತ ಈ ಸರಕು ಸಾಗಣೆ ರೈಲುಗಳು ಹೆಚ್ಚು ಆದಾಯ ತಂದುಕೊಡುತ್ತಿವೆ. ಉದ್ಯಮ ವಲಯಕ್ಕೂ ಇದು ಹೆಚ್ಚು ಅನುಕೂಲವಾಗಿದೆ.




