- Kannada News Photo gallery Uttaradhane is held at Mantralaya Math, MP Yadhuveer gets rayara anugraha award, Kannada News
ಮಂತ್ರಾಲಯ ಮಠದಲ್ಲಿಂದು ರಾಯರ ಉತ್ತರಾಧನೆ ಸಡಗರ! ಸಂಸದ ಯಧುವೀರ್ಗೆ ರಾಯರ ಅನುಗ್ರಹ ಪ್ರಶಸ್ತಿ ಪ್ರಧಾನ!
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವದ ನಿಮಿತ್ತ ಇಂದು ಉತ್ತರಾಧನೆ ನಡೀತು. ಶ್ರೀಗಳು, ಅರ್ಚಕರು ಬಣ್ಣದೋಕುಳಿಯಲ್ಲಿ ಮಿಂದೆದ್ದು ವಸಂತೋತ್ಸವ ಆಚರಿಸಿದರು. ಅಷ್ಟೇ ಅಲ್ಲ, ಮಹಾರಥೋತ್ಸವಕ್ಕೆ ಶ್ರೀಗಳು ಚಾಲನೆ ನೀಡಿ ಭಕ್ತರಿಗೆ ಆಶೀರ್ವಚನ ನೀಡಿದರು.
Updated on: Aug 22, 2024 | 4:00 PM

ಕಲಿಯುಗ ಕಾಮಧೇನು ಗುರು ರಾಘವೇಂದ್ರ ಸಾರ್ವಭೌಮರು ವೃಂದಾವನಸ್ಥರಾದ ಮರುದಿನವನ್ನ ಮಂತ್ರಾಲಯದಲ್ಲಿ ಉತ್ತರರಾಧನೆಯಾಗಿ ಆಚರಿಸಲಾಗುತ್ತದೆ. ಅದೇ ರೀತಿ ಇಂದು ರಾಯರ ಸನ್ನಿಧಿಯಲ್ಲಿ ಸಂಭ್ರಮದಿಂದ ಉತ್ತರಾಧನೆ ಆಚರಿಸಲಾಯ್ತು.

ಇಂದು ಉತ್ತರಾಧನೆ ಹಿನ್ನೆಲೆ ರಾಯರು ಪ್ರಹ್ಲಾದ್ ರಾಜರ ಉತ್ಸವ ಮೂರ್ತಿ ರೂಪದಿಂದ ಹೊರ ಪ್ರಕಾರದಲ್ಲಿ ಬಂದು ಭಕ್ತರಿಗೆ ರಾಜ ಬೀದಿಯಲ್ಲಿ ದರ್ಶನ ಕೊಡುತ್ತಾರೆ ಎನ್ನುವ ಪ್ರತೀತಿಯಿದೆ. ಹೀಗಾಗಿ ಇದರ ಭಾಗವಾಗಿ ಗುರುರಾಯರನ್ನ ಪ್ರಹ್ಲಾದ್ ರಾಜರ ರೂಪದಲ್ಲಿ ಸಂಸ್ಕೃತ ಪಾಠಶಾಲೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.

ನಂತರ ಮಠದ ಮದ್ವದ್ವಾರ ಮೂಲಕ ರಾಜಬೀದಿಯಲ್ಲಿ ಮಹಾರಥೋತ್ಸದತ್ತ ಶ್ರೀಗಳು ಆಗಮಿಸಿ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು. ಇದೇ ವೇಳೆ ಶ್ರೀಗಳು ಭಕ್ತರಿಗೆ ಆಶಿರ್ವಚನ ಮಾಡಿ, ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರೊ ದೌರ್ಜನ್ಯವನ್ನ ಶ್ರೀಗಳು ಖಂಡಿಸಿ, ವಿಶ್ವದಲ್ಲಿ ಶಾಂತಿ ನೆಲೆಸಲಿ. ಭಾರತ ವಿಶ್ವ ಗುರುವಾಗಲಿ ಅಂತ ಹಾರೈಸಿದರು.

ಕಾಪ್ಟರ್ ಮೂಲಕ ಪ್ರತಿ ವರ್ಷ ಶ್ರೀಗಳು ಮಹಾ ರಥೋತ್ಸವಕ್ಕೆ ಪುಷ್ಪಾರ್ಚನೆ ಮಾಡುತ್ತಿದ್ದರು. ಆದ್ರೆ, ಈ ಬಾರಿ ಹೆಲಿಕಾಪ್ಟರ್ ಬಂದಿತ್ತಾದರೂ ಕಾರಣಾಂತರಗಳಿಂದ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಿಲ್ಲ. ಆಗ ರಥೋತ್ಸವದ ವೇಳೆ ರಥದ ಮೇಲ್ಬಾಗದ ಕಳಸ, ಕೇಬಲ್ವೊಂದಕ್ಕೆ ಸಿಲುಕಿದ ಘಟನೆಯೂ ನಡೀತು. ಕೆಲಹೊತ್ತಿನ ಬಳಿಕ ಕೇಬಲ್ ಸರಿಪಡಿಸಿ ರಥೋತ್ಸವಕ್ಕೆ ಅನುವು ಮಾಡಿಕೊಡಲಾಯ್ತು.

ಇದಕ್ಕೂ ಮುನ್ನ ಇಂದು ಉತ್ತರಾಧನೆ ಹಿನ್ನೆಲೆ ಶ್ರೀ ಮಠದಲ್ಲಿ ಪಾರಾಯಣ, ನೈರ್ಮಲ್ಯ ವಿಸರ್ಜನೆ, ಮೂಲರಾಮದೇವರ ಪೂಜೆಗಳನ್ನ ನೆರವೇರಿಸಲಾಯ್ತು. ಉತ್ತರಾಧನೆ ವೇಳೆ ಆಚರಿಸಲಾಗುವ ವಸಂತೋತ್ಸವದ ಅಂಗವಾಗಿ ಶ್ರೀಗಳು ರಾಯರಿಗೆ ಬಣ್ಣವನ್ನ ಅರ್ಪಿಸಿದ್ರು. ನಂತರ ಶ್ರೀಗಳು ಭಕ್ತರಿಗೆ, ಅರ್ಚಕರಿಗೆ ಬಣ್ಣವನ್ನ ಎರಸಿ ಬಣ್ಣದೋಕುಳಿ ಆಡೋ ಮೂಲಕ ವಸಂತೋತ್ಸವ ಆಚರಣೆ ಮಾಡಿದರು.

ಸಂಸದ ಹಾಗೂ ಮೈಸೂರು ರಾಜ ಮನೆತನದ ಯಧುವೀರ್ ಅವರು ಇಂದು ರಾಯರ ಆರಾಧನಾ ಮಹೋತ್ಸವದಲ್ಲಿ ಭಾಗಿಯಾದರು. ಇದೇ ವೇಳೆ ಶ್ರೀ ಮಠದ ಅತ್ಯುನ್ನತ ಪ್ರಶಸ್ತಿಯಾದ ರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನ ಸುಬುಧೇಂದ್ರ ತೀರ್ಥರು ಯಧುವೀರ್ ಅವರಿಗೆ ನೀಡಿ ಗೌರವಿಸಿದರು.

ಒಟ್ಟಿನಲ್ಲಿ ಮಹಾರಥೋತ್ಸವ ವೇಳೆ ವಿವಿಧೆಡೆಯಿಂದ ಆಗಮಿಸಿದ್ದ ಭಜನಾ ಮಂಡಳಿಗಳು, ಕಲಾತಂಡಗಳು ರಾಜಬೀದಿಯಲ್ಲಿ ರಥೋತ್ಸವಕ್ಕೆ ಮೆರಗು ನೀಡಿದವು. ಉತ್ತರಾಧನೆ ಸಂಭ್ರಮಕ್ಕೆ ಸಾಕ್ಷಿಯಾದ ಲಕ್ಷಾಂತರ ಭಕ್ತರು ಸಂತಸ ಇಮ್ಮಡಿಗೊಂಡಿದ್ದಂತು ಸುಳ್ಳಳ್ಳ.



