- Kannada News Photo gallery What caused the Kurnool bus fire that killed 20 in Andhra Pradesh? here Is Fire Incident details
ಕರ್ನೂಲ್ ಬಸ್ ದುರಂತ: ಅದೊಂದೇ ಕಾರಣದಿಂದ ದೀಪಾವಳಿ ಮುಗಿಸಿ ಬೆಂಗಳೂರಿಗೆ ಬರುತ್ತಿದ್ದ 20 ಜನ ಸುಟ್ಟು ಕರಕಲು
ಆಂಧ್ರ ಪ್ರದೇಶದ ಕರ್ನೂಲ್ ಚಿನ್ನಟೆಕೋರು ಗ್ರಾಮದ ಬಳಿ ಖಾಸಗಿ ಕಾವೇರಿ ಸ್ವೀಪರ್ ಬಸ್ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತಿತ್ತು. ಈ ವೇಳೆ ಏಕಾಏಕಿ ಬಸ್‌ನಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡು ಧಗ ಧಗ ಹೊತ್ತಿ ಉರಿದಿದೆ. ಚಿಕ್ಕ ಚಿಕ್ಕ ಮಕ್ಕಳು, ಯುವಕರು ಹಾಗೂ ವಯಸ್ಸಾದವರು ಸೇರಿದಂತೆ ಒಟ್ಟು 20 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಘಟನೆಗೆ ಇಡೀ ದೇಶವೇ ಮಮ್ಮಲ ಮರುಗಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿಯಾಗಿ ಇತರೆ ರಾಜಕೀಯ ನಾಯಕರ ಸಂತಾಪ ಸೂಚಿಸಿದ್ದಾರೆ. ಆ ಒಂದು ಸಣ್ಣ ಎಡವಟ್ಟಿಗೆ 20 ಜನರು ಸುಟ್ಟು ಕರಕಲಾಗಿದ್ದಾರೆ. ಹಾಗಾದ್ರೆ, ಘಟನೆಗೆ ಕಾರಣವೇನು? ಬಸ್ಸಿನಲ್ಲಿ ಎಷ್ಟು ಪ್ರಯಾಣಿಕರಿದ್ದರು? ಅವರು ಯಾರು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
Updated on: Oct 24, 2025 | 7:20 PM

ಆಂಧ್ರಪ್ರದೇಶದ ಕರ್ನೂಲು ಬಳಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಭೀಕರ ಅಪಘಾತಕ್ಕೀಡಾಗಿದೆ. ಬೈಕ್ ಡಿಕ್ಕಿಯಾದ ಪರಿಣಾಮ ಬಸ್‌ನ ಡೀಸೆಲ್ ಟ್ಯಾಂಕ್‌ಗೆ ಬೆಂಕಿ ಹೊತ್ತಿಕೊಂಡು, 20 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಬೈಕ್ ಸವಾರನ ಒಂದೇ ಒಂದು ಎಡವಟ್ಟಿಗೆ ಈ ದುರಂತ ಸಂಭವಿಸಿದ್ದು, 20 ಜನರು ಸುಟ್ಟು ಕರಕಲಾಗಿದ್ದಾರೆ.

ಆಂಧ್ರ ಪ್ರದೇಶದ ಖಾಸಗಿ ಬಸ್ ದುರಂತ ಬೆಳ್ಳಂ ಬೆಳಗ್ಗೆ ಆಘಾತವನ್ನುಂಟು ಮಾಡಿದೆ. ಸುಮಾರು 20ಕ್ಕೂ ಅಧಿಕ ಪ್ರಯಾಣಿಕರು ಸಜೀವ ದಹನವಾಗಿರೋದು ತಿಳಿದು ಬಂದಿದೆ. ಇಂದು ಬೆಳಗಿನ ಜಾವ ಸುಮಾರು 3.30ರ ಆಸುಪಾಸಿನಲ್ಲಿ ದುರಂತ ಸಂಭವಿಸಿದೆ. ವೇಮುರಿ ಕಾವೇರಿ ಟ್ರಾವೆಲ್ಸ್‌ನ DD01N 9490 ಸಂಖ್ಯೆಯ ಬಸ್ ಹೈದರಾಬಾದ್‌ನಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿತ್ತು.

ಕರ್ನೂಲು ಮಂಡಲದ ಚಿನ್ನಟೆಕೋರಿನ ಬಳಿ ಬಸ್ ಮಾರ್ಗದಲ್ಲಿಯೇ ಬೈಕ್ ಹೋಗುತ್ತಿತ್ತು. ಈ ವೇಳೆ ನಿಯಂತ್ರಣ ಕಳೆದುಕೊಂಡ ಸವಾರ ಬೈಕ್ ಸಮೇತ ಬಸ್‌ನ ಮುಂಭಾಗದ ಚಕ್ರದಡಿ ಸಿಲುಕಿದ್ದಾನೆ. ಇನ್ನು ವೇಗದಲ್ಲಿ ಬಸ್ ಬೈಕ್ ಅನ್ನು 300 ಮೀಟರ್ ದೂರ ಎಳೆದುಕೊಂಡು ಹೋಗಿದ್ದು, ಈ ವೇಳೆ ಉಂಟಾದ ಸಣ್ಣ ಕಿಡಿ ಕ್ಷಣಮಾರ್ಧದಲ್ಲೇ ಇಡೀ ಬಸ್ ಗೆ ಬೆಂಕಿ ಹತ್ತಿಕೊಂಡಿದೆ ಎಂದು ಕರ್ನೂಲ್ ಎಸ್‌ಪಿ ಮಾಹಿತಿ ನೀಡಿದ್ದಾರೆ.

ಮುಂಭಾಗ ಬೈಕ್ ಡಿಕ್ಕಿಯಾಗುತ್ತಿದ್ದಂತೆ ಚಾಲಕ ಬ್ರೇಕ್ ಹಾಕಿ ಬಸ್‌ನ್ನು ಹೆದ್ದಾರಿ ಪಕ್ಕ ನಿಲ್ಲಿಸಿದ್ದಾನೆ. ನಿದ್ದೆಯಲ್ಲಿದ್ದ ಸಹ ಚಾಲಕನನ್ನು ಎಚ್ಚರಗೊಳಿಸಿದ್ದಾನೆ. ಆರಂಭದಲ್ಲಿ ಸಣ್ಣ ಬೆಂಕಿ ಎಂದು ತಿಳಿದು ತಾವೇ ನಂದಿಸಲು ಪ್ರಯತ್ನಿಸಿದ್ದಾರೆ. ಬೆಂಕಿ ತೀವ್ರತೆ ಹೆಚ್ಚಾಗುತ್ತಿದ್ದಂತೆ ನಿದ್ದೆಯಲ್ಲಿದ್ದ ಪ್ರಯಾಣಿಕರನ್ನು ಎಚ್ಚರಗೊಳಿಸಲು ಪ್ರಯತ್ನಿಸಿದ್ದಾರೆ. ಈ ವೇಳೆಗಾಗಲೇ ಚಾಲಕನ ಸೀಟ್‌ವರೆಗೂ ಬೆಂಕಿ ಆವರಿಸಿಕೊಂಡಿತ್ತು.

ತುರ್ತು ಕಿಟಕಿ ಬಳಿಯಲ್ಲಿದ್ದ ಪ್ರಯಾಣಿಕರು ಜೀವ ಉಳಿಸಿಕೊಂಡಿದ್ದಾರೆ. ಬಸ್ ಹಿಂಭಾಗದ ಸೀಟುಗಳಲ್ಲಿದ್ದ ಪ್ರಯಾಣಿಕರು ಹೊರ ಬರಲಾಗದೇ ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿ ಕಿರುಚುತ್ತಾ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಬಸ್ ನಿಲ್ಲಿಸುತ್ತಿದ್ದಂತೆ ಚಾಲಕರಿಬ್ಬರು ಎಲ್ಲಾ ಪ್ರಯಾಣಿಕರನ್ನು ಎಚ್ಚರಗೊಳಿಸಿದ್ರೆ ಇಷ್ಟು ದೊಡ್ಡಮಟ್ಟದ ಪ್ರಾಣಹಾನಿ ಸಂಭವಿಸುತ್ತಿರಲಿಲ್ಲ.

ಎಸಿ ಬಸ್ ಆಗಿದ್ದರಿಂದ ಎಲ್ಲಾ ಕಿಟಕಿಗಳು ಕ್ಲೋಸ್ ಆಗಿತ್ತು. ಹಾಗಾಗಿ ಪ್ರಯಾಣಿಕರಿಗೆ ಹೊರ ಬರಲು ಸಾಧ್ಯವಾಗಲಿಲ್ಲ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ವರದಿಯಾಗಿದೆ. ಇನ್ನು ಘಟನೆಗೆ ಕಾರಣನಾದ ಬೈಕ್ ಸವಾರ ಸಹ ಅಗ್ನಿಕೆನ್ನಾಲಿಗೆ ಸಿಲುಕಿ ಸತ್ತಿದ್ದಾನೆ.

ವೇಮುರಿ ಕಾವೇರಿ ಟ್ರಾವೆಲ್ಸ್ ಎಲ್ಲಾ ಪ್ರಯಾಣಿಕರ ಮಾಹಿತಿಯನ್ನು ಬಿಡುಗಡೆಗೊಳಿಸಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರ ಕುಟುಂಬಸ್ಥರಿಗೆ ಅಪಘಾತದ ಮಾಹಿತಿಯನ್ನು ನೀಡಲಾಗಿದೆ. ಮೃತದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಸದ್ಯ ಮೃತಪರ ಗುರುತು ಪತ್ತೆ ಮಾಡಲಾಗಿದೆ.

ಅವಘಡಕ್ಕೆ ತುತ್ತಾದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದವರ ಅಧಿಕೃತ ಮಾಹಿತಿ ಲಭ್ಯವಾಗಿದೆ. ಒಟ್ಟು ಪ್ರಯಾಣಿಕರ ಸಂಖ್ಯೆ 46. ಅವರಲ್ಲಿ 39 ಜನ ಹಿರಿಯ ಪ್ರಯಾಣಿಕರು, 4 ಜನ ಮಕ್ಕಳು, 2 ಚಾಲಕರು ಸೇರಿ 45 ಜನರು ಬಸ್ನಲ್ಲಿದ್ದರು. ಆದರೆ, ಮಾರ್ಗ ಮಧ್ಯೆ ಓರ್ವ ಅಪರಿಚಿತ ಪ್ರಯಾಣಿಕ ಬಸ್ ಹತ್ತಿಕೊಂಡಿದ್ದ. ಹೀಗಾಗಿ, ಬಸ್ನಲ್ಲಿದ್ದ 45 ಜನರ ಗುರುತು ಪತ್ತೆಯಾಗಿದೆ. ಆದರೆ, ಉಳಿದ ಓರ್ವನ ಮಾಹಿತಿ ಸಿಕ್ಕಿಲ್ಲ. ಈ ಪೈಕಿ 18 ಹಿರಿಯ ಪ್ರಯಾಣಿಕರು, 2 ಮಕ್ಕಳು ಸೇರಿ 20 ಜನ ಸಾವನ್ನಪ್ಪಿದ್ದಾರೆ.

ಬಸ್ ದುರಂತದಲ್ಲಿ ಮೃತಪಟ್ಟ 19 ಪ್ರಯಾಣಿಕರ ಮಾಹಿತಿ ಲಭ್ಯವಾಗಿದ್ದು, ಇನ್ನೊಬ್ಬರ ಮಾಹಿತಿ ಸಿಕ್ಕಿಲ್ಲ. ಜೆ.ಫಿಲೋಮಿನ್ ಬೇಬಿ(64), ಕಿಶೋರ್(64), ಪ್ರಶಾಂತ್(32), ಅರ್ಗಾ ಬಂದೋಪಾಧ್ಯಾಯ(23), ಯುವನ್ ಶಂಕರ್ ರಾಜಾ(22), ಮೇಘನಾಥ್(25), ಧಾತ್ರಿ(27), ಅಮೃತ್ ಕುಮಾರ್(18), ಚಂದನ ಮಂಗಾ(23), ಅನುಷಾ(22), ಗಿರಿ ರಾವ್(48), ಕೆನುಗು ದೀಪಕ್ ಕುಮಾರ್, ಜಿ.ರಮೇಶ್, ಜಿ.ಅನುಷಾ, ಮನಿತಾ, ಕೇಶನಾಥ, ಸಂಧ್ಯಾರಾಣಿ, ಕರಿ ಶ್ರೀನಿವಾಸ ರೆಡ್ಡಿ ಮೃತರು.

ಮೃತದೇಹಗಳನ್ನು ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದ್ದು, ಡಿಎನ್‌ಎ ಪರೀಕ್ಷೆ ಬಳಿಕ ಶವಗಳನ್ನು ಹಸ್ತಾಂತರಿಸಲಾಗುತ್ತದೆ. ಇನ್ನು ಎಮೆರ್ಜೆನ್ಸಿ ಕಿಟಕಿಯಿಂದ ಹೊರ ಬಂದಿರುವ ಪ್ರಯಾಣಿಕರು ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ವೆಮೂರಿ ವಿನೋದ್ ಕುಮಾರ್ ಮಾಲೀಕತ್ವದ ವೆಮೂರಿ ಕಾವೇರಿ ಟ್ರಾವೆಲ್ಸ್ ಗೆ ಸೇರಿದ ಬಸ್ ಮಾಹಿತಿ ನೋಡುವುದಾರೆ, ಬಸ್ ಖರೀದಿ ಮಾಡಿದ್ದು ತೆಲಂಗಾಣ(TS) ರಾಜ್ಯದಲ್ಲಿ. 8-ಆಗಸ್ಟ್- 2018 ರಲ್ಲಿ ಮೆಡ್ಚಲ್ ಆರ್ಟಿಓದಲ್ಲಿ ಬಸ್ ರಿಜಿಸ್ಟ್ರೇಷನ್ ಆಗಿದೆ ಬಸ್ ನಂ- TS-08 UF2342. ನಂತರ ಅಲ್ಲಿಂದ ದಮನ್ ಮತ್ತು ದಿಯು ಕೇಂದ್ರಾಡಳಿ ಪ್ರದೇಶಕ್ಕೆ ಹೋಗಿದ್ದು, ನಂಬರ್ ಅನ್ನು ರಿ-ನಂಬರ್ ಮಾಡಿಸಲಾಗಿದೆ. DD-01N9490 ದಮನ್ ಮತ್ತು ದಿಯು ಶಿಲ್ವಾಸ ಆರ್ಟಿಓದಲ್ಲಿ ನಂಬರ್ ಬದಲಾಯಿಸಿಕೊಳ್ಳಲಾಗಿದೆ. ನಂತರ ಒಡಿಶಾದಲ್ಲಿ 29 ಏಪ್ರಿಲ್ 2025 ರಲ್ಲಿ ರಾಯಘಡ ಆರ್ಟಿಓಗೆ ಟ್ರಾನ್ಫರ್ ಆಗಿದೆ. ಸದ್ಯ ಈ ಬಸ್ ಒಡಿಶಾದ ರಾಯಘಡ ಆರ್ಟಿಓಗೆ ಸೇರಿದೆ.

ಆಂಧ್ರಪ್ರದೇಶದ ಸಾರಿಗೆ ಸಚಿವ ರಾಮಪ್ರಸಾದ್ ರೆಡ್ಡಿ ಕೂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಈ ಅಪಘಾತವು ಬೆಳಗಿನ ಜಾವ 3ರಿಂದ 3.15ರ ನಡುವೆ ಸಂಭವಿಸಿದೆ. ಬೈಕ್ ಅನ್ನು ಬಸ್ 15ರಿಂದ 20 ಮೀಟರ್‌ಗಳಷ್ಟು ದೂರಕ್ಕೆ ಎಳೆದೊಯ್ದಿದೆ. ಇದು ಕಿಡಿ ಹೊತ್ತಿಕೊಳ್ಳಲು ಕಾರಣವಾಯಿತು. ಈ ಅಪಘಾತಕ್ಕೆ ಪ್ರಾಥಮಿಕವಾಗಿ ಬೆಂಕಿ ಕಿಡಿಯೇ ಕಾರಣ. 2 ಮಕ್ಕಳು ಸೇರಿದಂತೆ ಒಟ್ಟು 20 ಜನರು ಸಾವನ್ನಪ್ಪಿದ್ದಾರೆ. ಪ್ರಯಾಣಿಕರಲ್ಲಿ 39 ವಯಸ್ಕರು, 4 ಮಕ್ಕಳು ಮತ್ತು ಇಬ್ಬರು ಚಾಲಕರು ಬಸ್ ನಲ್ಲಿದ್ದರು. 27 ಜನರು ಅಪಘಾತದಿಂದ ಸುರಕ್ಷಿತವಾಗಿ ಪಾರಾಗಿದ್ದಾರೆ. 27 ಜನರ ಪೈಕಿ 9 ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ 6 ಮಂದಿ ಆಂಧ್ರಪ್ರದೇಶದವರು. 6 ಮಂದಿ ತೆಲಂಗಾಣದವರು ಮತ್ತು ಇನ್ನೂ ಕೆಲವರು ಇತರ ರಾಜ್ಯಗಳವರಿದ್ದಾರೆ.




