ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದ ನಂತರ 2024ರ ಲೋಕಸಭಾ ಪ್ರಚಾರ ನಿರ್ವಹಿಸಲಿದ್ದಾರೆ ಸುನಿಲ್ ಕನುಗುಲು

ಕಾಂಗ್ರೆಸ್ ಪಾಳಯಕ್ಕೆ ಬರುವ ಮುನ್ನ ಚುನಾವಣಾ ತಂತ್ರಜ್ಞ ಸುನಿಲ್ ಕನುಗುಲು ಅವರು ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಪಕ್ಷದೊಂದಿಗೆ ಪ್ರಚಾರ ಮಾಡುವ ಕುರಿತು ಹಲವು ಸುತ್ತಿನ ಸಭೆಗಳನ್ನು ನಡೆಸಿದರು. ಆದರೆ ಕನುಗುಲು ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದು, ಕಾಂಗ್ರೆಸ್ ಪಕ್ಷದ ಚುನಾವಣಾ ಕಾರ್ಯತಂತ್ರ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದ ನಂತರ 2024ರ ಲೋಕಸಭಾ ಪ್ರಚಾರ ನಿರ್ವಹಿಸಲಿದ್ದಾರೆ ಸುನಿಲ್ ಕನುಗುಲು
ಸುನಿಲ್ ಕನುಗುಲು
Follow us
ರಶ್ಮಿ ಕಲ್ಲಕಟ್ಟ
|

Updated on: Dec 22, 2023 | 4:02 PM

ದೆಹಲಿ ಡಿಸೆಂಬರ್ 22:  ತೆಲಂಗಾಣ (Telangana) ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ (Congress) ಗೆಲ್ಲುವಂತೆ ಮಾಡಿದ್ದು ಚುನಾವಣಾ ತಂತ್ರಗಾರ ಸುನಿಲ್ ಕನುಗುಲು (Sunil Kanugolu). ಎದುರಾಳಿಗಳನ್ನು ಪರಾಭವಗೊಳಿಸುವ ತಂತ್ರಗಾರಿಕೆಯಲ್ಲಿ ಸುನೀಲ್ ತಮ್ಮ ಆಪ್ತ ಪ್ರಶಾಂತ್ ಕಿಶೋರ್ ಅವರನ್ನು ಮೀರಿಸಿದ್ದಾರೆ ಎನ್ನುತ್ತಿದ್ದಾರೆ ರಾಜಕೀಯ ಪಂಡಿತರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕತ್ವ ಮಹತ್ವದ ಹೊಣೆಗಾರಿಕೆ ನೀಡಲು ಸಿದ್ಧತೆ ನಡೆಸಿದೆ. ಲೋಕಸಭೆ ಚುನಾವಣೆಗೆ ಮುನ್ನ, ಕಾಂಗ್ರೆಸ್‌ನ ತಂತ್ರಗಾರ ಸುನಿಲ್ ಕನುಗುಲು ಅವರಿಗೆ ಪಕ್ಷದ ಪ್ರಚಾರ ಕಾರ್ಯತಂತ್ರವನ್ನು ನಿರ್ವಹಿಸುವ ಮತ್ತು ಸಾಮಾಜಿಕ ಮಾಧ್ಯಮ ಪ್ರಚಾರಗಳ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ತೆಲುಗು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರಗಾರ ಸುನಿಲ್ ಕನುಗುಲು ಹೆಸರು ಸದ್ದು ಮಾಡುತ್ತಿದೆ. ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಲು ಬಳಸಿದ ತಂತ್ರಗಳನ್ನೇ ಸುನೀಲ್ ಕೂಡ ಜಾರಿಗೆ ತಂದರು. ಕರ್ನಾಟಕದಲ್ಲಿ ಐದು ಗ್ಯಾರಂಟಿ ಪ್ರಚಾರ ಮಾಡುವಲ್ಲಿ ಯಶಸ್ವಿಯಾಗಿದ್ದ ಸುನೀಲ್ ಟೀಮ್ ಮುಖ್ಯವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ನ ಆರು ಗ್ಯಾರಂಟಿ ಪ್ರಚಾರ ಮಾಡಿದೆ. ಕಾಂಗ್ರೆಸ್ ಗ್ಯಾರಂಟಿಗಳನ್ನು ಪ್ರತಿಯೊಬ್ಬ ಸಾಮಾನ್ಯರಿಗೂ ವಿವರಿಸುವಲ್ಲಿ ಸುನೀಲ್ ತಂಡ ಯಶಸ್ವಿಯಾಗಿದೆ. ಅದರಲ್ಲೂ ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದಂತಹ ಆಶ್ವಾಸನೆಗಳು ಜನರ ಮನಸೂರೆಗೊಂಡವು. ಕಾಂಗ್ರೆಸ್ ಪರ ಭರ್ಜರಿ ಪ್ರಚಾರ ನಡೆಸುವುದು ಸುನೀಲ್ ತಂತ್ರ ಎನ್ನುತ್ತಿದ್ದಾರೆ ವಿಶ್ಲೇಷಕರು.

ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಪಕ್ಷದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಕನುಗುಲು ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ಪ್ರಚಾರ ಕಾರ್ಯತಂತ್ರವನ್ನು ಪರಿಶೀಲಿಸುವಂತೆ ಕೇಳಲಾಗಿದೆ ಎಂದು ವರದಿಯಾಗಿದೆ. 2024ರ ಲೋಕಸಭೆ ಚುನಾವಣೆಗೆ ಪಕ್ಷದ ಪ್ರಚಾರ ಕಾರ್ಯತಂತ್ರವನ್ನು ಪರಿಶೀಲಿಸಲು ವಾರ್ ರೂಂ ಅನ್ನು ಸ್ಥಾಪಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಲೋಕಸಭೆ ಕಾರ್ಯದ ಜೊತೆಗೆ ಹರ್ಯಾಣದಲ್ಲಿಲ್ಲಿ ಪಕ್ಷದ ಪ್ರಚಾರ ಕಾರ್ಯತಂತ್ರವನ್ನೂ ಅವರಿಗೆ ವಹಿಸಲಾಗಿತ್ತು.

ಇತ್ತೀಚೆಗಷ್ಟೇ ಕನುಗೋಲು ಕಾಂಗ್ರೆಸ್ ಉಸ್ತುವಾರಿ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಪಕ್ಷದ ಸಂಪರ್ಕ ತಂಡದ ಸದಸ್ಯರು ಕೂಡ ಭಾಗವಹಿಸಿದ್ದರು. ಅವರು ಎರಡು ಬಾರಿ ಕಾಂಗ್ರೆಸ್ ವಾರ್‌ರೂಮ್‌ಗೆ ಭೇಟಿ ನೀಡಿ ವೇಣುಗೋಪಾಲ್, ಸಂವಹನ ಉಸ್ತುವಾರಿ ಜೈರಾಮ್ ರಮೇಶ್, ಪವನ್ ಖೇರಾ ಮತ್ತು ಸುಪ್ರಿಯಾ ಶ್ರೀನಾಥ್ ಅವರನ್ನು ಭೇಟಿ ಮಾಡಿದರು.

ಕಾಂಗ್ರೆಸ್ ಪಾಳಯಕ್ಕೆ ಬರುವ ಮುನ್ನ ಕನುಗುಲು ಅವರು ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಪಕ್ಷದೊಂದಿಗೆ ಪ್ರಚಾರ ಮಾಡುವ ಕುರಿತು ಹಲವು ಸುತ್ತಿನ ಸಭೆಗಳನ್ನು ನಡೆಸಿದರು. ಆದರೆ ಕನುಗುಲು ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದು, ಕಾಂಗ್ರೆಸ್ ಪಕ್ಷದ ಚುನಾವಣಾ ಕಾರ್ಯತಂತ್ರ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಕಳೆದ ವರ್ಷ ಮೇನಲ್ಲಿ ಕನುಗುಲು ಅವರನ್ನು ಕಾಂಗ್ರೆಸ್‌ಗೆ ಕರೆತರಲಾಗಿತ್ತು. ಅಂದಿನಿಂದ ಅವರು ಪಕ್ಷದ ಕಾರ್ಯತಂತ್ರಗಾರರಾಗಿ ಕೆಲಸ ಮಾಡಿದ್ದಾರೆ. ತೆಲಂಗಾಣದಲ್ಲಿ ಸುನೀಲ್ ಅವರು ಸಮೀಕ್ಷೆ, ಪ್ರಚಾರ, ಅಭ್ಯರ್ಥಿಗಳನ್ನು ನಿರ್ಧರಿಸುವುದು ಮತ್ತು ಗೆಲುವಿನ ತಂತ್ರವನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಬದಲಾವಣೆ ಬೇಕು ಎಂಬ ಘೋಷವಾಕ್ಯವನ್ನು ಬಲವಾಗಿ ಜನರ ಬಳಿಗೆ ಕೊಂಡೊಯ್ದದ್ದು ಸುನೀಲ್ ಬಳಗ. ರಾಹುಲ್ ಮತ್ತು ಪ್ರಿಯಾಂಕಾ ಕೂಡಾ ಸಭೆಗಳಲ್ಲಿ ತೆಲುಗಿನಲ್ಲಿ ಮಾತನಾಡಿ ಎಲ್ಲರ ಗಮನ ಸೆಳೆದರು. ಸಿರಿವಂತರ ತೆಲಂಗಾಣ ಹೋಗಬೇಕು, ಜನರ ತೆಲಂಗಾಣ ಬರಬೇಕು ಎಂಬ ಘೋಷಣೆಯನ್ನೂ ಎತ್ತಿ ಹಿಡಿದರು. ಚುನಾವಣೆ ಸಂದರ್ಭದಲ್ಲಿ ಯಾವ ದಿನ ಯಾವ ಜಾಹೀರಾತು ಬರಬೇಕು ಎಂದು ನಿರ್ಧರಿಸಿ ಒಂದು ವಿಧಾನದ ಪ್ರಕಾರ ಜಾಹೀರಾತುಗಳು ಬರುವಂತೆ ಮಾಡಿದ್ದು ಸುನೀಲ್ ತಂಡ. ಅವರು ಆಕರ್ಷಕ ಟಿವಿ ಮತ್ತು ಪೇಪರ್ ಜಾಹೀರಾತುಗಳನ್ನು ನೀಡಿದರು. ಸಾಮಾಜಿಕ ಮಾಧ್ಯಮದಲ್ಲಿ ಯಾವ ವಿಷಯವನ್ನು ಯಾವಾಗ ಹೈಲೈಟ್ ಮಾಡಬೇಕು ಎಂಬುದರ ಕುರಿತು ತಂಡಕ್ಕೆ ನಿರ್ದೇಶನಗಳನ್ನು ನೀಡಲಾಯಿತು. ಇದಲ್ಲದೇ ನಾಯಕರ ಪ್ರವಾಸ ಯೋಜನೆ, ಸಭೆ, ಹೇಳಬೇಕಾದ ಅಂಶಗಳು, ಜನರ ಬಳಿಗೆ ಗಟ್ಟಿಯಾಗಿ ಕೊಂಡೊಯ್ಯಬೇಕಾದ ಅಂಶಗಳನ್ನು ಸುನೀಲ್ ತಂಡ ನಿರ್ಧರಿಸಿದೆ.

ಇದನ್ನೂ ಓದಿತೆಲಂಗಾಣ: ತಬ್ಲಿಘಿ ಜಮಾತ್ ಸಮಾವೇಶಕ್ಕೆ ಸರ್ಕಾರದ ಹಣ; ಸಭೆ ನಿಲ್ಲಿಸಲು ವಿಎಚ್‌ಪಿ, ಬಜರಂಗದಳ ಕರೆ

ಬಿಜೆಪಿ ಪ್ರಚಾರದ ಭಾಗವಾಗಿ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೆಲಸ ಮಾಡಿದ್ದ ಕನುಗುಲು, 2014 ರಲ್ಲಿ ಪಕ್ಷವನ್ನು ತೊರೆಯುವ ಮೊದಲು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರೊಂದಿಗೆ ಕೆಲಸ ಮಾಡಿದರು. ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸಿದ್ದೂ ಇವರೇ. 2017 ರಲ್ಲಿ, ಯೋಗಿ ಆದಿತ್ಯನಾಥ್ ಅದ್ಭುತ ಯಶಸ್ಸಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ನಂತರದ ದಿನಗಳಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸುವ ಜವಾಬ್ದಾರಿಯನ್ನು ಕನುಗುಲು ಹೊತ್ತಿದ್ದರು. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯ ಜವಾಬ್ದಾರಿಯನ್ನು ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡಂತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ