ಉಪ ಚುನಾವಣೆ: ಬಿಹಾರದಲ್ಲಿ ಜೆಡಿಯು, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವು
ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಿಹಾರಕ್ಕೆ ಮರಳಿದ್ದ ಆರ್ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಚುನಾವಣಾ ಪ್ರಚಾರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು
ದೆಹಲಿ: ದೇಶದ ವಿವಿಧೆಡೆ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಬಿಹಾರದ ಕುಶ್ವೇಶ್ವರ ಮತ್ತು ತಾರಾಪುರ ಕ್ಷೇತ್ರಗಳಲ್ಲಿ ಜೆಡಿಯು ಗೆಲುವು ಸಾಧಿಸಿದೆ. ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಿಹಾರಕ್ಕೆ ಮರಳಿದ್ದ ಆರ್ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಚುನಾವಣಾ ಪ್ರಚಾರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ತಾರಾಪುರ ಕ್ಷೇತ್ರದಲ್ಲಿ ಆರ್ಜೆಡಿ ಪ್ರಬಲ ಪ್ರತಿರೋಧ ತೋರಿದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.
ಕುಶ್ವೇಶ್ವರ ಅಸ್ತನಾ ವಿಧಾನಸಭಾ ಕ್ಷೇತ್ರದಲ್ಲಿ 12,695 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರೆ, ತಾರಾಪುರ ಕ್ಷೇತ್ರದಲ್ಲಿ ಗೆಲುವಿನ ಅಂತರ ಕೇವಲ 3852. ತಾರಾಪುರ ಕ್ಷೇತ್ರದಲ್ಲಿ ಕೊನೆಯ ಹಂತದವರೆಗೂ ಗೆಲುವು ತೂಗುಯ್ಯಾಲೆಯಾಡುತ್ತಿತ್ತು.
ಪಶ್ಚಿಮ ಬಂಗಾಳದ 4 ಕ್ಷೇತ್ರಗಳಲ್ಲೂ ಟಿಎಂಸಿ ಪಕ್ಷಕ್ಕೆ ಜಯ ದೊರತಿದೆ. ಮೇಘಾಲಯ ರಾಜ್ಯದಲ್ಲಿ ಎನ್ಪಿಪಿ ಪಕ್ಷ ಎರಡು ಸ್ಥಾನಗಳಲ್ಲಿ ಜಯಗಳಿಸಿದೆ. ಯುಡಿಪಿ ಪಕ್ಷ ಒಂದು ಸ್ಥಾನದಲ್ಲಿ ಜಯಗಳಿಸಿದೆ. ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ಗೆ ಒಂದು ಸ್ಥಾನ ಸಿಕ್ಕಿದೆ.
ಹಿಮಾಚಲಪ್ರದೇಶದ ಎಲ್ಲ 3 ಕ್ಷೇತ್ರಗಳಲ್ಲೂ ಕಾಂಗ್ರೆಸ್ಗೆ ಜಯ ಸಿಕ್ಕಿದೆ. ಹಿಮಾಚಲ ಪ್ರದೇಶ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ. ಮಂಡಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲು ಅನುಭವಿಸಿದ್ದು, ಕಾಂಗ್ರೆಸ್ಗೆ ಗೆಲುವು ಸಿಕ್ಕಿದೆ. ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿಯೂ ಬಿಜೆಪಿಗೆ ಸೋಲು ಅನುಭವಿಸಿದೆ. ಈ ಫಲಿತಾಂಶವನ್ನು ಮುಖ್ಯಮಂತ್ರಿ ಜಯರಾಮ್ ಠಾಕೂರ್ ಸರ್ಕಾರದ ವಿರುದ್ಧದ ಜನಾಭಿಪ್ರಾಯ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ರಾಜಸ್ಥಾನದ ವಲ್ಲಭನಗರ ಮತ್ತು ಧಾರಿಯಾವಾಡ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ.
ಅಸ್ಸಾಂನ ಐದು, ಬಂಗಾಳದ ನಾಲ್ಕು, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ಮೇಘಾಲಯಗಳ ತಲಾ ಮೂರು, ಬಿಹಾರ, ಕರ್ನಾಟಕ ಮತ್ತು ರಾಜಸ್ಥಾನಗಳ ತಲಾ ಎರಡು, ಆಂಧ್ರ ಪ್ರದೇಶ, ಹರ್ಯಾಣ, ಮಹಾರಾಷ್ಟ್ರ, ಮಿಝೋರಾಂ ಮತ್ತು ತೆಲಂಗಾಣ ಕ್ಷೇತ್ರಗಳ ತಲಾ ಒಂದು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ದಾದ್ರಾ ಮತ್ತು ನಗರ್ ಹವೇಲಿ, ಹಿಮಾಚಲ ಪ್ರದೇಶದ ಮಂಡಿ ಮತ್ತು ಮಧ್ಯ ಪ್ರದೇಶದ ಖಾಂಡ್ವಾ ಲೋಕಸಭಾ ಕ್ಷೇತ್ರಗಳಲ್ಲಿಯೂ ಉಪಚುನಾವಣೆ ನಡೆದಿತ್ತು.
ಇದನ್ನೂ ಓದಿ: ಹಾನಗಲ್, ಸಿಂದಗಿ ಉಪಚುನಾವಣೆ ಅಂತಿಮ ಫಲಿತಾಂಶ: ಯಾರಿಗೆ ಎಷ್ಟು ಅಂತರದ ಗೆಲುವು? ಇಲ್ಲಿದೆ ವಿವರ ಇದನ್ನೂ ಓದಿ: ಪಶ್ಚಿಮ ಬಂಗಾಳ: ಉಪಚುನಾವಣೆಯಲ್ಲಿ ಎಲ್ಲ 4 ಸ್ಥಾನ ಗೆದ್ದ ತೃಣಮೂಲ ಕಾಂಗ್ರೆಸ್, 3 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡ ಬಿಜೆಪಿ