ತಾನು ಕಳ್ಳ ಪರರ ನಂಬಾ ಎನ್ನುವಂತಿದೆ ಕಾಂಗ್ರೆಸ್ ವರ್ತನೆ – ಕಾಂಗ್ರೆಸ್ನಿಂದ ‘ಪೇ ಸಿಎಂ’ ಅಭಿಯಾನಕ್ಕೆ ಬಿಎಸ್ ಯಡಿಯೂರಪ್ಪಆಕ್ರೋಶ
ಜನರ ತೆರಿಗೆ ಹಣವನ್ಮು ಹೇಗೆ ಲೂಟಿ ಮಾಡಿದ್ರು ಎಂದು ವಿಧಾನಸಭೆ ಅಧ್ಯಕ್ಷರಾಗಿದ್ದವರೇ ಹೇಳಿದ್ದಾರೆ. ಕಾಂಗ್ರೆಸ್ ನಾಯಕರು ಗೌರವದಿಂದ ಇರೋದನ್ನ ಕಲಿಯಬೇಕು. ನಿಮ್ಮ ಅತಿರೇಕದ ವರ್ತನೆ ಹೀಗೆಯೇ ಮುಂದುವರೆದರೆ ನಿಮ್ಮದೇ ಭಾಷೆಯಲ್ಲಿ ಉತ್ತರ ಕೊಡಲು ಬರುತ್ತೆ -ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ
ಹಾಸನ: ಹಾಸನ ಜಿಲ್ಲೆ ಬೇಲೂರಿನಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಸಭೆಯೊಂದರಲ್ಲಿ ಮಾತನಾಡಿದ್ದಾರೆ. ಈ ವೇಳೆ ಕಾಂಗ್ರೆಸ್ ಪಕ್ಷದ ನಾಯಕರು ನೀಡುತ್ತಿರುವ ವಿಭಿನ್ನ ಹೇಳಿಕೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಸ್ಪೀಕರ್ ಆಗಿದ್ದ ಕೆ ರಮೇಶ್ ಕುಮಾರ್ ಅವರು ನೀಡಿದ್ದ ಹೇಳಿಕೆಯನ್ನು ಪ್ರಸ್ತಾಪಿಸಿ ತಾನು ಕಳ್ಳ ಪರರ ನಂಬಾ ಎನ್ನುವಂತಿದೆ ಕಾಂಗ್ರೆಸ್ ವರ್ತನೆ ಎಂದು ಕಾಂಗ್ರೆಸ್ನಿಂದ ನಡೆಯುತ್ತಿರುವ ‘ಪೇ ಸಿಎಂ’ ಅಭಿಯಾನಕ್ಕೆ (PayCM) ಬಿಎಸ್ವೈ ತಮ್ಮ ಆಕ್ರೋಶ ಹೊರಹಾಕಿದರು. ರಂಭಾಪುರಿ ಮಠದ ಶರನ್ನವರಾತ್ರಿ ದಸರಾ ದರ್ಬಾರ್ ಉದ್ಘಾಟನಾ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಇಲ್ಲಿಗೆ ಆಗಮಿಸಿದ್ದಾರೆ.
ರಮೇಶ್ ಕುಮಾರ್ ಹೇಳಿಕೆ ಬಗ್ಗೆ ಜನ ಚರ್ಚೆ ಮಾಡಬೇಕು
ನಾಲ್ಕು ತಲೆಮಾರು ಆಗುವಷ್ಟು ಮಾಡಿಕೊಂಡಿದ್ದೇವೆ ಎಂದು ಕಾಂಗ್ರೆಸ್ ಪಕ್ಷದ ರಮೇಶ್ ಕುಮಾರ್ ಕೆಲ ದಿನಗಳ ಹಿಂದೆ ಗಂಭೀರ ಮಾತನ್ನಾಡಿದ್ರು. ಸ್ವಾತಂತ್ರ್ಯ ಬಂದ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅಭಿವೃದ್ಧಿ ಮಾಡಿಲ್ಲ. ಜನರ ತೆರಿಗೆ ಹಣ ಹೇಗೆ ಲೂಟಿ ಮಾಡಿದ್ರು ಅಂತ ಅವರೇ ಹೇಳಿದ್ದಾರೆ. ರಮೇಶ್ ಕುಮಾರ್ ಹೇಳಿಕೆ ಬಗ್ಗೆ ರಾಜ್ಯದ ಜನ ಚರ್ಚೆ ಮಾಡಬೇಕು ಎಂದು ಬಿಎಸ್ವೈ ಆಶಿಸಿದರು.
ಜನರ ತೆರಿಗೆ ಹಣವನ್ಮು ಹೇಗೆ ಲೂಟಿ ಮಾಡಿದ್ರು ಎಂದು ವಿಧಾನಸಭೆ ಅಧ್ಯಕ್ಷರಾಗಿದ್ದವರೇ ಹೇಳಿದ್ದಾರೆ. ಕಾಂಗ್ರೆಸ್ ನಾಯಕರು ಗೌರವದಿಂದ ಇರೋದನ್ನ ಕಲಿಯಬೇಕು. ನಿಮ್ಮ ಅತಿರೇಕದ ವರ್ತನೆ ಹೀಗೆಯೇ ಮುಂದುವರೆದರೆ ನಿಮ್ಮದೇ ಭಾಷೆಯಲ್ಲಿ ಉತ್ತರ ಕೊಡಲು ಬರುತ್ತೆ. ಆದರೆ ಆ ಕೀಳುಮಟ್ಟಕ್ಕೆ ನಾವು ಇಳಿಯಲ್ಲ. ಸಂಘ ಪರಿವಾರದ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕ ಹಕ್ಕಿದೆ? ಸಂಘ ಪರಿವಾರದ ಬಗ್ಗೆ ಮಾತನಾಡೊ ಕೆಳಮಟ್ಟಕ್ಕೆ ಇಳಿಬಾರದಿತ್ತು. ಬೊಮ್ಮಾಯಿ ಅವರ ನೇತೃತ್ವದಲ್ಲಿ ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸೊ ಪ್ರಾಮಾಣಿಕ ಪ್ರಯತ್ನ ಆಗುತ್ತಿದೆ. ಇದನ್ನ ಸಹಿಸದೆ ಹೀಗೆ ಅಪಪ್ರಚಾರ ಮಾಡೊದು ಶೋಭೆ ತರಲ್ಲ ಎಂದು ಯಡಿಯೂರಪ್ಪ ಗುಡುಗಿದರು.
ಇನ್ನು, ಬಿಜೆಪಿ ಸರ್ಕಾರ ಕೇವಲ ಲೂಟಿ ಮಾಡುತ್ತಿದೆ, ಅವರಿಂದ ಒಂದೇ ಒಂದು ಮನೆ ಕಟ್ಟೋಕೆ ಆಗಿಲ್ಲ ಎಂಬ ಸಿದ್ದು ಟೀಕೆಗೆ ಸಹ ಬಿಎಸ್ವೈ ತಿರುಗೇಟು ನೀಡಿದರು. ಆ ಮನುಷ್ಯ ಇತ್ತೀಚೆಗೆ ಸಂಯಮ ಕಳೆದುಕೊಂಡಿದ್ದಾರೆ. ಸೋಲಿನ ಭಯದಿಂದ ಮನ ಬಂದಂತೆ ಮಾತನಾಡೋಕೆ ಶುರುಮಾಡಿದ್ದಾರೆ. ನಾವು ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಮನೆ ಕಟ್ಟೋಕೆ ಶುರು ಮಾಡಿದ್ದೇವೆ. ಕೇಂದ್ರ ಸರ್ಕಾರದ ನೆರವಿನಿಂದ ಆಗುತ್ತಿರೊ ಕೆಲಸವನ್ನು ಹೇಳಿದ ಮೇಲೂ ಅವರು ಹೀಗೆ ಮಾತನಾಡುತ್ತಿದ್ದಾರೆ.
ಸಿದ್ದರಾಮಯ್ಯ ಅವರನ್ನ ನಾನು ಕೇಳುತ್ತೇನೆ – ಅವರಿಗೆ ಮೈಸೂರಿನಲ್ಲಿ ಅಡ್ರಸ್ಸೇ ಇಲ್ಲ. ಮೈಸೂರಿನಲ್ಲಿ ನೀವು ನಿಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿದ್ದೀರಾ! ಬದಾಮಿಯಲ್ಲಿ ನಾನು ಏನಾದರೂ ಒಂದೆರಡು ಗಂಟೆ ಹೋಗಿದ್ದರೆ ಕುಸಿದು ಹೋಗುತ್ರಿದ್ದಿರಿ. ಈಗ ನಿಮ್ಮ ಕ್ಷೇತ್ರ ಎಲ್ಲಿ ಎಂದು ಹುಡುಕೋದ್ರಲ್ಲಿ ಇದೀರಿ! ಮೊದಲು ನಿಮ್ಮ ಕ್ಷೇತ್ರ ಹುಡುಕಿಕೊಂಡಿ ಗೆಲ್ಲೋ ಕಡೆ ಗಮನ ಕೊಡಿ ಎಂದು ಸಿದ್ದು ವಿರುದ್ದ ಬಿಎಸ್ ವೈ ವಾಗ್ದಾಳಿ ನಡೆಸಿದರು.
ನೀವು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ. ವಿರೋದ ಪಕ್ಷದ ನಾಯಕರಾಗಿ ಹಗುರವಾಗಿ ಮಾತನಾಡೋದನ್ನ ಬಿಡಲಿ ಎಂದು ಸಂಘ ಪರಿವಾರ ಬಿಜೆಪಿಯಿಂದ ಡರ್ಟಿ ಪಾಲಿಟಿಕ್ಸ್ ಎಂಬ ಸಿದ್ದು ಹೇಳಿಕೆಗೆ ಬಿಎಸ್ ವೈ ಕಿಡಿಕಾರಿದರು.
ಕಾಂಗ್ರೆಸ್ನವರಿಗೆ ಅಧಿಕಾರ ಹಿಡಿಯುವ ಭ್ರಮೆ ಬೇಡ. ನರೇಂದ್ರ ಮೋದಿ ನಾಯಕತ್ವದಲ್ಲಿ ಜನರಿಗೆ ನಂಬಿಕೆ, ವಿಶ್ವಾಸವಿದೆ. ಬಿಜೆಪಿ ನೂರಕ್ಕೆ ನೂರರಷ್ಟು ಮತ್ತೆ ಅಧಿಕಾರ ಹಿಡಿಯುವುದು ನಿಶ್ಚಿತ. ರಾಜ್ಯದಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನ ಗೆಲ್ಲೋದು ಖಚಿತ. ಹಾಸನ ಜಿಲ್ಲೆಯಲ್ಲೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದು ಬೇಲೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪರಿಂದ ದಸರಾ ದರ್ಬಾರ್ ಉದ್ಘಾಟನೆ
ಶ್ರೀಮದ್ ರಂಬಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶ್ರೀಗಳ ನೇತೃತ್ವದಲ್ಲಿ ಹಾಸನ ಜಿಲ್ಲೆ ಬೇಲೂರಿನಲ್ಲಿ ಶರನ್ನವರಾತ್ರಿ ದಸರಾ ದರ್ಬಾರ್ ಗೆ ಒಂದು ಚಾಲನೆ ದೊರೆಯಿತು. ಇಂದಿನಿಂದ ಒಂಬತ್ತು ದಿನಗಳು ಶರನ್ನವರಾತ್ರಿ ದಸರ ದರ್ಬಾರ್ ಧರ್ಮ ಸಮ್ಮೇಳನ ನಡೆಯಲಿದೆ. ಮಾಜಿ ಸಿಎಂ ಯಡಿಯೂರಪ್ಪ ದಸರಾ ದರ್ಬಾರ್ ಉದ್ಘಾಟನೆ ಮಾಡಿದರು. ಕಾರ್ಯಕ್ರಮ ದಲ್ಲಿ ಅಬಕಾರಿ ಸಚಿವ ಗೋಪಾಲಯ್ಯ, ಬೇಲೂರು ಶಾಸಕ ಕೆ.ಎಸ್. ಲಿಂಗೇಶ್, ಕಡೂರು ಶಾಸಕ ಬೆಳ್ಳಿ ಪ್ರಕಾಶ್, ತರಿಕೆರೆ ಶಾಸಕ ಸುರೇಶ್ ಸೇರಿ ಹಲವರು ಭಾಗಿಯಾಗಿದ್ದರು. ವಿವಿಧ ಮಠಗಳ ಶ್ರೀಗಳ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿರೊ ಸಹಸ್ರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬೇಲೂರು ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
Published On - 7:13 pm, Mon, 26 September 22