ಎಐಸಿಸಿ ಅಧ್ಯಕ್ಷ ಗಾದಿ ಸ್ಪರ್ಧೆಯಿಂದ ಅಶೋಕ್ ಗೆಹ್ಲೋಟ್ ಹೊರಗೆ: ಮಲ್ಲಿಕಾರ್ಜನ ಖರ್ಗೆ, ದಿಗ್ವಿಜಯ ಸಿಂಗ್ಗೆ ಅವಕಾಶ ಸಾಧ್ಯತೆ
‘ಒಬ್ಬ ವ್ಯಕ್ತಿಗೆ ಒಂದು ಹುದ್ದೆ’ ಎನ್ನುವ ನಿಯಮಕ್ಕೆ ರಾಜಸ್ಥಾನದ ಮಟ್ಟಿಗೆ ವಿನಾಯ್ತಿ ನೀಡಬೇಕು ಎಂದು ಶಾಸಕರು ಒತ್ತಾಯಿಸಿದ್ದರು.
ದೆಹಲಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿ (All India Congress Committee – AICC) ಅಧ್ಯಕ್ಷ ಗಾದಿಯ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದ ಅಶೋಕ್ ಗೆಹ್ಲೋಟ್ ಇದೀಗ ಸ್ಪರ್ಧೆಯಿಂದ ಹಿಂದೆ ಸರಿಯುವುದು ಬಹುತೇಕ ಖಚಿತವಾಗಿದೆ. ಎನ್ಡಿಟಿವಿ ಸೇರಿದಂತೆ ಹಲವು ರಾಷ್ಟ್ರೀಯ ಮಾಧ್ಯಮಗಳು ಈ ಕುರಿತು ವರದಿ ಪ್ರಕಟಿಸಿವೆ. ಗೆಹ್ಲೋಟ್ ಸ್ಥಾನಕ್ಕೆ ಸಚಿನ್ ಪೈಲಟ್ ಅವರನ್ನು ನಿಯೋಜಿಸುವ ಹೈಕಮಾಂಡ್ ನಿರ್ಧಾರವನ್ನು ವಿರೋಧಿಸಿ ರಾಜಸ್ಥಾನದ 90ಕ್ಕೂ ಹೆಚ್ಚು ಶಾಸಕರು ಬಂಡಾಯವೆದ್ದಿದ್ದರು. ‘ಒಬ್ಬ ವ್ಯಕ್ತಿಗೆ ಒಂದು ಹುದ್ದೆ’ ಎನ್ನುವ ನಿಯಮಕ್ಕೆ ರಾಜಸ್ಥಾನದ ಮಟ್ಟಿಗೆ ವಿನಾಯ್ತಿ ನೀಡಬೇಕು ಎಂದು ಶಾಸಕರು ಒತ್ತಾಯಿಸಿದ್ದರು. ರಾಜಸ್ಥಾನದ ರಾಜಕೀಯ ಬೆಳವಣಿಗೆಗಳ ಬಗ್ಗೆ ವರದಿ ನೀಡವಂತೆ ಸೂಚಿಸಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕನ್ ಅವರನ್ನು ಎಐಸಿಸಿ ರಾಜಸ್ಥಾನಕ್ಕೆ ಕಳಿಸಿತ್ತು. ಪ್ರಸ್ತುತ ಎಐಸಿಸಿ ಅಧ್ಯಕ್ಷ ಗಾದಿಗೆ ಕರ್ನಾಟಕದ ಹಿರಿಯ ನಾಯಕ ಹಾಗೂ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.
ರಾಜಸ್ಥಾನ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿದ 10 ಪ್ರಮುಖ ಅಂಶಗಳಿವು…
- ರಾಹುಲ್ ಗಾಂಧಿ ಅವರ ‘ಭಾರತ್ ಜೋಡೋ ಯಾತ್ರೆ’ ನಡೆಯುತ್ತಿರುವ ಸಂದರ್ಭದಲ್ಲಿ ಪಕ್ಷವನ್ನು ಮುಜುಗರಕ್ಕೀಡು ಮಾಡುವಂತೆ ಬಂಡಾಯಕ್ಕೆ ಸಂಚು ರೂಪಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕತ್ವವು ಅಶೋಕ್ ಗೆಹ್ಲೋಟ್ ವಿರುದ್ಧ ಕೋಪಗೊಂಡಿದೆ ಎಂದು ಮೂಲಗಳು ತಿಳಿಸಿವೆ. 71 ವರ್ಷದ ಗೆಹ್ಲೋಟ್ ಗಾಂಧಿ ಕುಟುಂಬದ ಆಪ್ತರು. ಅವರು ರಾಜಸ್ಥಾನ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡಲು ನಿರಾಕರಿಸಿರುವುದು ಉನ್ನತ ನಾಯಕತ್ವಕ್ಕೆ ಇಷ್ಟವಾಗಿಲ್ಲ.
- ಈ ಹಿಂದಿನ ಮಾತುಕತೆಗಳ ವೇಳೆ ಗೆಹ್ಲೋಟ್ ಅವರು ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಒಪ್ಪಿಕೊಂಡಿದ್ದರು. ಕಾಂಗ್ರೆಸ್ನಲ್ಲಿ ಜಾರಿಯಲ್ಲಿರುವ ‘ಒಬ್ಬ ವ್ಯಕ್ತಿ, ಒಂದು ಹುದ್ದೆ’ ನೀತಿಯ ಅನ್ವಯ ಗೆಹ್ಲೋಟ್ ಅವರಿಗೆ ಎರಡು ಜವಾಬ್ದಾರಿ ಕೊಡಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದರು.
- ಗೆಹ್ಲೋಟ್ ಅವರ ಮನೆಯಲ್ಲಿ ನಡೆದ ಶಾಸಕರ ಸಭೆಯಲ್ಲಿ ರಾಜಸ್ಥಾನದ ನಾಯಕತ್ವ ಬದಲಾವಣೆಯನ್ನು ಔಪಚಾರಿಕವಾಗಿ ಘೋಷಿಸಬೇಕಾಗಿತ್ತು. ಈ ಸಭೆಯ ಸಮಯ ಮತ್ತು ಸ್ಥಳವನ್ನು ಮುಖ್ಯಮಂತ್ರಿಗಳೇ ನಿರ್ಧರಿಸಿದ್ದರು ಎಂದು ಕೇಂದ್ರ ವೀಕ್ಷಕರಾಗಿ ಸಭೆಯಲ್ಲಿ ಭಾಗವಹಿಸಿದ್ದ ಅಜಯ್ ಮಾಕೆನ್ ಮತ್ತು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು.
- ಆದರೆ ಯೋಜನೆಗೆ ವ್ಯತಿರಿಕ್ತವಾದ ಬೆಳವಣಿಗೆಗಳು ನಡೆದವು. ಗೆಹ್ಲೋಟ್ ಅವರ ಮನೆಯಲ್ಲಿ ಕೇವಲ 20ರಿಂದ 25 ಶಾಸಕರು ಮಾತ್ರ ಕಾಣಿಸಿಕೊಂಡರು. ಗೆಹ್ಲೋಟ್ ಅವರ ಆಪ್ತ ಸಚಿವ ಶಾಂತಿ ಧರಿವಾಲ್ ಅವರ ಮನೆಯಲ್ಲಿ ನಡೆದ ಭಿನ್ನಮತೀಯರ ಸಭೆಯಲ್ಲಿ ಬಹುತೇಕ ಕಾಂಗ್ರೆಸ್ ಶಾಸಕರು ಭಾಗವಹಿಸಿದ್ದರು.
- ಸಭೆಯ ನಂತರ, ಅವರು ಸ್ಪೀಕರ್ ನಿವಾಸಕ್ಕೆ ವಿಶೇಷ ಬಸ್ನಲ್ಲಿ ತೆರಳಿದ ಭಿನ್ನಮತೀಯರು, 2020ರಲ್ಲಿ ಗೆಹ್ಲೋಟ್ ವಿರುದ್ಧ ಬಂಡಾಯ ಎದ್ದಿದ್ದ ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸಿದರೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದರು.
- ಎಐಸಿಸಿ ವೀಕ್ಷಕರಾಗಿ ಬಂದಿದ್ದ ಇಬ್ಬರು ಕೇಂದ್ರ ನಾಯಕರನ್ನು ಪ್ರತ್ಯೇಕವಾಗಿ ಭೇಟಿಯಾಗಲು ಶಾಸಕರು ನಿರಾಕರಿಸಿದರು. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಬಹಿರಂಗವಾಗಿ ಧಿಕ್ಕರಿಸಿದ್ದಲ್ಲದೇ, ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ನಂತರವಷ್ಟೇ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಷರತ್ತು ವಿಧಿಸಿದರು. ಗೆಹ್ಲೋಟ್ ಅವರು ಎಐಸಿಸಿ ಅಧ್ಯಕ್ಷರಾದರೆ ಅವರಿಗೇ ರಾಜಸ್ಥಾನದಲ್ಲಿ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಅಧಿಕಾರ ಸಿಗುವುದರಿಂದ ಇದು ಸಾಧ್ಯವಿಲ್ಲ. ಚುನಾವಣೆಗೂ ಮೊದಲೇ ಮುಖ್ಯಮಂತ್ರಿ ಬದಲಾವಣೆ ಆಗಬೇಕು ಎಂದು ಹೈಕಮಾಂಡ್ ತನ್ನ ನಿಲುವು ಸ್ಪಷ್ಟಪಡಿಸಿತು.
- ತಮ್ಮ ಆಪ್ತರಾಗಿರುವ ಮೂವರು ಸಚಿವರು ಬಂಡಾಯದಲ್ಲಿ ಪಾಲ್ಗೊಂಡಿದ್ದರೂ ಗೆಹ್ಲೋಟ್ ಇದರಲ್ಲಿ ತಮ್ಮ ಪಾತ್ರವಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಶಾಸಕರು ಬಂಡಾಯ ಎದ್ದ ದಿನದಂದು ಬೆಳಿಗ್ಗೆ ಭಾರತ-ಪಾಕಿಸ್ತಾನ ಗಡಿಯಲ್ಲಿರುವ ದೇಗುಲಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಮೊಬೈಲ್ ಫೋನ್ ಸಿಗ್ನಲ್ ಸಹ ಸಿಗುತ್ತಿರಲಿಲ್ಲ ಎಂದು ಗೆಹ್ಲೋಟ್ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.
- ಗೆಹ್ಲೋಟ್ ಅವರ ಸಕ್ರಿಯ ಬೆಂಬಲ ಮತ್ತು ಪ್ರೋತ್ಸಾಹವಿಲ್ಲದೆ 92 ಶಾಸಕರು ರಾಜೀನಾಮೆ ಬೆದರಿಕೆ ಹಾಕಬಹುದು ಎಂದು ಹೈಕಮಾಂಡ್ ನಂಬಿಲ್ಲ. ಈ ಬೆಳವಣಿಗೆಯ ಬಗ್ಗೆ ಗೆಹ್ಲೋಟ್ ಕ್ಷಮೆ ಯಾಚಿಸಿದ್ದರೂ ಕಾಂಗ್ರೆಸ್ ನಾಯಕತ್ವವು ತನ್ನ ನಿಲುವು ಸಡಿಲಿಸಿಲ್ಲ.
- ಅ 17ರಂದು ನಡೆಯಬೇಕಿರುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯ ಗೊಂದಲವನ್ನು ರಾಜಸ್ಥಾನದ ಬೆಳವಣಿಗೆಯು ಮತ್ತಷ್ಟು ಹೆಚ್ಚಿಸಿದೆ. ಎರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಗಾಂಧಿ ಕುಟುಂಬದ ಯಾರೊಬ್ಬರೂ ಅಧ್ಯಕ್ಷ ಗಾದಿಗೆ ಸ್ಪರ್ಧಿಸುವುದಿಲ್ಲ ಎಂದು ಹೈಕಮಾಂಡ್ ಸ್ಪಷ್ಟಪಡಿಸಿದೆ.
- ರಾಜಸ್ಥಾನ ಬಿಕ್ಕಟ್ಟಿಗೂ ಮೊದಲು ಗೆಹ್ಲೋಟ್ ಅವರು ಎಐಸಿಸಿ ಅಧ್ಯಕ್ಷ ಗಾದಿಗೆ ಹೈಕಮಾಂಡ್ನ ನೆಚ್ಚಿನ ಅಭ್ಯರ್ಥಿಯಾಗಿದ್ದರು. ಇದೀಗ ಗೆಹ್ಲೋಟ್ ಅವರನ್ನು ಕಡೆಗಣಿಸಲಾಗಿದ್ದು, ಮಲ್ಲಿಕಾರ್ಜುನ ಖರ್ಗೆ ಮತ್ತು ದಿಗ್ವಿಜಯ್ ಸಿಂಗ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಅಧ್ಯಕ್ಷ ಗಾದಿಗೆ ಪರಿಗಣಿಸಿದೆ. ಈ ನಡುವೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಹೆಸರು ಸಹ ಕೇಳಿಬಂದಿತ್ತು.
ಇದನ್ನೂ ಓದಿ: Rajasthan Crisis: ನಾನು ದೆಹಲಿಗೆ ಹೋಗಿ ಯಾರನ್ನೂ ಭೇಟಿಯಾಗುವುದಿಲ್ಲ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ; ಸಚಿನ್ ಪೈಲಟ್ ಸ್ಪಷ್ಟನೆ
Published On - 10:21 am, Tue, 27 September 22