ಬೆಂಗಳೂರು, ಜನವರಿ 15: ಬಿಜೆಪಿ ಹೈಕಮಾಂಡ್ ಜತೆ ಶನಿವಾರವಷ್ಟೇ ಮಾತುಕತೆ ನಡೆಸಿ ಬಂದಿರುವ ಹಿರಿಯ ನಾಯಕ ವಿ ಸೋಮಣ್ಣ (V Somanna), ಇದೀಗ ಭೇಟಿ ಬಗ್ಗೆ ಮಾಹಿತಿ ನೀಡಿದ್ದು ಎಲ್ಲವೂ ಸುಖಾಂತ್ಯವಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಮಾಡಿದ ವಿಚಾರವಾಗಿ ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಸೋಮಣ್ಣ, ಒಳ್ಳೇತನಕ್ಕೆ, ಒಳ್ಳೇ ನಡವಳಿಕೆಗೆ ಸಹಾಯ ಆಗುತ್ತದೆ. ಅದಕ್ಕೆ ದೆಹಲಿ ಭೇಟಿಯೇ ಒಂದು ಉದಾಹರಣೆ. ಅಮಿತ್ ಶಾ ನಡವಳಿಕೆ, ಅವರ ತೀರ್ಮಾನ, ಭಾವನೆ ಸಕಾರಾತ್ಮಕವಾಗಿಯೇ ಇತ್ತು. ಎಲ್ಲವೂ ಸುಖಾಂತ್ಯವಾಗಿದೆ ಎಂದು ಹೇಳಿದ್ದಾರೆ.
ಕೆಲಸ ಮಾಡಿ ಬಳಿಕ ಮುಂದಿನದ್ದನ್ನ ಚರ್ಚೆ ಮಾಡುತ್ತೇವೆ. ನಾನು ರಾಜ್ಯಸಭೆ ಸ್ಥಾನ ಕೇಳಿದ್ದೇನೆ. ಜತೆಗೆ ನನಗೆ 3 ಕಷ್ಟದ ಲೋಕಸಭಾ ಕ್ಷೇತ್ರ ಕೊಡಿ. ಯಾವುದೇ 3 ಕ್ಷೇತ್ರಗಳನ್ನು ಕೊಟ್ಟರೂ ಗಲ್ಲಿಸಿಕೊಂಡು ಬರುತ್ತೇನೆ. 28 ಕ್ಷೇತ್ರಗಳ ಪೈಕಿ 3 ಕ್ಷೇತ್ರ ವಹಿಸಿದರೆ ಕೆಲಸ ಮಾಡುತ್ತೇನೆ. ಪಕ್ಷದಲ್ಲಿ ನನ್ನ ಶ್ರಮ ಇದೆ ಎಂದು ಸೋಮಣ್ಣ ಹೇಳಿದ್ದಾರೆ.
ಬಿಜೆಪಿ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಂಸದ ಹೆಗಡೆ ಸುಸಂಸ್ಕೃತ ಕುಟುಂಬದಿಂದ ಬಂದವರು. ನಮ್ಮ ನಡವಳಿಕೆಗಳು ವಿಭಿನ್ನವಾಗಿರಬೇಕು. ಸಿಎಂ ಸಿದ್ದರಾಮಯ್ಯ ಹೇಗಾದರೂ ಮಾತಾಡಲಿ, ನಮಗೆ ಬೇಡ. ಅನಂತಕುಮಾರ್ ಹೆಗಡೆ ಸಂಸದರಾಗಿದ್ದಾರೆ ಎಂದಷ್ಟೇ ಹೇಳಿದ್ದಾರೆ.
ಇದನ್ನೂ ಓದಿ: ಅಮಿತ್ ಶಾ ಭೇಟಿಯಾದ ವಿ ಸೋಮಣ್ಣ: ಏನೇನು ನಡೆಯಿತು ಚರ್ಚೆ?
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅನಿವಾರ್ಯವಾಗಿ ಒಪ್ಪಿಕೊಂಡು ಸೋತ ನಂತರ ಸೋಮಣ್ಣ ಪಕ್ಷದ ರಾಜ್ಯ ನಾಯಕರ ವಿರುದ್ಧ ಸಿಡಿದೆದ್ದಿದ್ದರು. ಹಲವು ನಾಯಕರ ವಿರುದ್ಧ ಬಹಿರಂಗ ಟೀಕೆಗಳನ್ನೂ ಮಾಡಿದ್ದರು. ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂಬ ವದಂತಿಗಳೂ ಹಬ್ಬಿದ್ದವು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಅವರು ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿರುವುದು ಕುತೂಹಲ ಮೂಡಿಸಿತ್ತು. ಇದೀಗ ಅವರು ಆ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ