ಸಂಜೆ 7 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಫಿಕ್ಸ್ ಆಯ್ತು, ಇಂದೇ ಹೊಸ ಮುಖ್ಯಮಂತ್ರಿ ಆಯ್ಕೆ?
ಇಂದು ಸಂಜೆ 7 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಡಿ.ಕೆ.ಅರುಣ, ಕೇಂದ್ರೀಯ ವೀಕ್ಷಕ ಕಿಶನ್ ರೆಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಬೆಂಗಳೂರು: ಯಡಿಯೂರಪ್ಪ ರಾಜೀನಾಮೆಯಿಂದ ತೆರವುಗೊಂಡಿರುವ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಹುದ್ದೆಗೆ ಹೊಸಬರನ್ನು ನೇಮಿಸುವ ಕುರಿತು ಇಂದೇ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಇಂದು ಸಂಜೆ 7 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಡಿ.ಕೆ.ಅರುಣ, ಕೇಂದ್ರೀಯ ವೀಕ್ಷಕ ಕಿಶನ್ ರೆಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಬೆಂಗಳೂರಿನ ಕ್ಯಾಪಿಟಲ್ ಹೊಟೇಲ್ನಲ್ಲಿ ನಡೆಯಲಿರುವ ಸಭೆಯಲ್ಲಿ ಪಕ್ಷದ ಮುಖಂಡರು ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ರಾತ್ರಿಯ ಒಳಗೆ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ. ರಾಜ್ಯ ಬಿಜೆಪಿ ಕಚೇರಿಯಿಂದಲೇ ಶಾಸಕಾಂಗ ಸಭೆ ಬಗ್ಗೆ ಸೂಚನೆ ನೀಡಲಾಗಿದ್ದು, ಸಭೆಗೆ ಹಾಜರಾಗಲು ಬಿಜೆಪಿ ಶಾಸಕರಿಗೆ ತಿಳಿಸಲಾಗಿದೆ. ಯಡಿಯೂರಪ್ಪ ಸೇರಿದಂತೆ 119 ಬಿಜೆಪಿ ಶಾಸಕರಿಗೂ ಸಂಜೆ 7 ಗಂಟೆಗೆ ಶಾಸಕಾಂಗ ಸಭೆಗೆ ಹಾಜರಾಗಲು ಮಾಹಿತಿ ನೀಡಲಾಗಿದ್ದು, ಉಸ್ತುವಾರಿ ಸಿಎಂ ಯಡಿಯೂರಪ್ಪ ನಡೆ ಬಗ್ಗೆಯೂ ಕುತೂಹಲ ಮೂಡಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಮುರುಗೇಶ್ ನಿರಾಣಿ, ಹೊಸ ನಾಯಕರನ್ನು ಆರಿಸುವ ಸಂದರ್ಭ ಬಂದಿದೆ. ಎಲ್ಲಾ ಶಾಸಕರೂ ಮುಖ್ಯಮಂತ್ರಿಯಾಗಲು ಅರ್ಹರಿದ್ದಾರೆ. ನಮ್ಮ ಪಕ್ಷದ ನಾಯಕರು ಸೇರಿ ಅವರನ್ನು ಆರಿಸುತ್ತಾರೆ. ಯಡಿಯೂರಪ್ಪನವರು ಈ ಪ್ರಕ್ರಿಯೆಯಲ್ಲಿ ಇರುತ್ತಾರೆ. ಯಡಿಯೂರಪ್ಪ ನಮ್ಮ ನಾಯಕರು. ನಮಗೆ ತಂದೆ ಸ್ಥಾನದಲ್ಲಿ ನಿಂತು ಬೆಳೆಸಿದರು. ನಾವು ಬೆಂಗಳೂರಿನಲ್ಲಿ ಇದ್ದಾಗ ಎಲ್ಲರೂ ಭೇಟಿಯಾಗುತ್ತೇವೆ. ನಾನು ನಿನ್ನೆ ಬೆಂಗಳೂರಿನಲ್ಲಿ ಇರಲಿಲ್ಲ ದೆಹಲಿಗೆ ಹೋಗಿದ್ದೆ. ಆದರೆ, ಅಲ್ಲಿ ಯಾರನ್ನೂ ಕೂಡಾ ಭೇಟಿಯಾಗಲಿಲ್ಲ. ಗೌಪ್ಯ ಸಭೆ ಏನೂ ಮಾಡಲಿಲ್ಲ. ನಾನು ಯಾವುದರ ಲಾಬಿ ಮಾಡಿಲ್ಲ, ಹಿಂದೆಯೂ ಆ ರೀತಿ ಮಾಡಿದವನಲ್ಲ ಎಂದು ಹೇಳಿದ್ದಾರೆ.
ಈ ವಿಚಾರದಲ್ಲಿ ಹೇಗೆ ನಿರ್ಧಾರ ಕೈಗೊಳ್ಳಬೇಕೆಂಬುದು ನಾಯಕರಿಗೆ ಗೊತ್ತಿದೆ. ಬಿಜೆಪಿಯನ್ನು ಬೇರುಮಟ್ಟದಿಂದ ಬೆಳೆಸಿರೋ ಕೀರ್ತಿ ಬಿಎಸ್‌ವೈ ಗೆ ಸಲ್ಲುತ್ತದೆ. ರಾಜ್ಯದ ಪ್ರತಿಯೊಂದು ಗ್ರಾಮಕ್ಕೂ ಭೇಟಿ ಕೊಟ್ಟ ನಾಯಕ ಅಂದ್ರೆ ಯಡಿಯೂರಪ್ಪ. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂದು ಮಾತು ಇದೆ. ನಮ್ಮಂಥ ಯುವಕರಿಗೆ ಟಿಕೆಟ್ ಕೊಡೋ ಮೂಲಕ ಮಂತ್ರಿ ಮಾಡಿ ಪ್ರಮುಖ ಸ್ಥಾನ ಕೊಡಲು ಅವರು ಕಾರಣ. ತಂದೆಯ ಸ್ಥಾನದಲ್ಲಿ ನಿಂತು ನಮ್ಮನ್ನು ಬೆಳೆಸಿದವರು ಯಡಿಯೂರಪ್ಪ. ನಿನ್ನೆ ಅವರು ರಾಜೀನಾಮೆ ನೀಡಿದ್ದು ಕೇಳಿ ಬೇಜಾರು ಆಯ್ತು, ಕಣ್ಣಲ್ಲಿ ನೀರು ಬಂತು. ಆದರೆ ನಮ್ಮ ಪಕ್ಷದಲ್ಲಿ ಇದು ಅನಿವಾರ್ಯ. 75 ವರ್ಷ ಮೇಲ್ಪಟ್ಟವರಿಗೆ ಅವಕಾಶ ಇಲ್ಲ. ಇದಕ್ಕೆ ಒಪ್ಪಿಕೊಂಡು ನಿನ್ನೆ ಅವರು ರಾಜೀನಾಮೆ ನೀಡಿದ್ದಾರೆ. ಈಗ ಹೊಸ ನಾಯಕರನ್ನು ಆರಿಸುವ ಸಂದರ್ಭ ಬಂದಿದೆಯಷ್ಟೇ ಎಂದು ತಿಳಿಸಿದ್ದಾರೆ.
ಸಿಎಂ ಆಯ್ಕೆಗೆ ಕೇಂದ್ರ ಬಿಜೆಪಿ ನಾಯಕರ ಆಗಮನ ಹಿನ್ನೆಲೆ. ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಸಿದ್ಧತೆಯಾಗುತ್ತಿದ್ದು, ಅಭಿಮಾನಿಗಳು, ಮುಖಂಡರು ಮುಗಿಬೀಳುವ ಸಾಧ್ಯತೆ ಇರುವುದರಿಂದ ಆಗಮನ ದ್ವಾರದ ಬಳಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಮಧ್ಯಾಹ್ನ 2 ಗಂಟೆ ವೇಳೆಗೆ ಕೇಂದ್ರ ನಾಯಕರು ಆಗಮಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಇಂದು ಯಾವುದೇ ಕಾರ್ಯಕ್ರಮ ನಿಗದಿ ಮಾಡಿಕೊಳ್ಳದ ಹಂಗಾಮಿ ಸಿಎಂ ಯಡಿಯೂರಪ್ಪ; ಗುಪ್ತಚರ ಇಲಾಖೆ ಮುಖ್ಯಸ್ಥರ ಭೇಟಿ
BS Yediyurappa: ಬಿಎಸ್ ಯಡಿಯೂರಪ್ಪ ತಮ್ಮ ವಿದಾಯವನ್ನು ದಕ್ಕಿಸಿಕೊಂಡ ಬಗೆಯೇ ಅಪೂರ್ವ!
(BJP Legislative assembly meeting scheduled today evening Next CM Name likely to be finalized today)
Published On - 1:02 pm, Tue, 27 July 21