ಚುನಾವಣೆಯಲ್ಲಿ ಗೆಲ್ಲಲು ಬೇಕಾದ ರಣತಂತ್ರ ರೂಪಿದ್ದೇವೆ, ಗೆಲುವು ನಮ್ಮದೆ: ಆರ್.ಅಶೋಕ್
ಆತ್ಮಸಾಕ್ಷಿ ಮತಗಳನ್ನ ಕೇಳದೆ, ಸಾಕ್ಷಿ ಮತಗಳನ್ನ ಕೇಳುತ್ತಿದ್ದೇವೆ ಎಂದು ಬಿಜೆಪಿ ಶಾಸಕಾಂಕ ಪಕ್ಷದ ಸಭೆಯ ಬಳಿಕ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ. ಸಭೆಯಲ್ಲಿ ತಮಗೆ ಮತ ಚಲಾಯಿಸುವಂತೆ ರಾಜ್ಯಸಭೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳು ಶಾಸಕರಲ್ಲಿ ಮನವಿ ಮಾಡಿದರು.
ಬೆಂಗಳೂರು: ನಾವು ಕಾಂಗ್ರೆಸ್, ಜೆಡಿಎಸ್ ರೀತಿ ಬೀದಿ ನಾಟಕ ಮಾಡುವುದಿಲ್ಲ, ಆತ್ಮಸಾಕ್ಷಿ ಮತಗಳನ್ನ ಕೇಳದೆ, ಸಾಕ್ಷಿ ಮತಗಳನ್ನ ಕೇಳುತ್ತಿದ್ದೇವೆ ಎಂದು ಸಚಿವ ಆರ್.ಅಶೋಕ್ (R.Ashok) ಹೇಳಿಕೆ ನೀಡಿದ್ದಾರೆ. ಖಾಸಗಿ ಹೋಟೆಲ್ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಂತರ ಮಾತನಾಡಿದ ಅವರು, ನಮಗೆ ಇರುವ ಬಲದಲ್ಲಿ ನಾವು ಸ್ವಾಭಾವಿಕವಾಗಿ ಗೆಲ್ಲುತ್ತೇವೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಗೆಲುವು ನಮ್ಮದೆ, ಗೆಲ್ಲಲು ಬೇಕಾದ ರಣತಂತ್ರ ರೂಪಿದ್ದೇವೆ ಎಂದರು.
ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಕಚ್ಚಾಟ ನೋಡಿದರೆ ಆಶ್ಚರ್ಯವಾಗುತ್ತಿದೆ. ಜೆಡಿಎಸ್ ಪಕ್ಷ ಬಿಜೆಪಿ ಟೀಮ್ ಅಂತ ಕಾಂಗ್ರೆಸ್ ಹೇಳುತ್ತಿದ್ದರು. ನಾವು ಬಿ ಟೀಂ ಆಗುತ್ತೇವೆ ಎಂದು ಕಾಂಗ್ರೆಸ್ ಬಳಿ ಜೆಡಿಎಸ್ ಹೇಳುತ್ತಿದೆ. ಕಾಂಗ್ರೆಸ್, ಜೆಡಿಎಸ್ ಒಟ್ಟಾಗಲು ಇಬ್ಬರೂ ಕಾಲು ಹಿಡಿಯುತ್ತಿದ್ದಾರೆ. ಆದರೆ ಬಿಜೆಪಿಯ ಅಭ್ಯರ್ಥಿಗಳು ಸುಲಭವಾಗಿ ಗೆಲ್ಲುವಂತಹ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ಪೋಲಿಂಗ್ ಏಜೆಂಟ್ ಆಗಿ ಡಿಕೆ ಶಿವಕುಮಾರ್ ಘೋಷಣೆ ಸಾಧ್ಯತೆ
ನಮಗೆ ಆತ್ಮಬಲ ಇದೆ, ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಕಾಂಗ್ರೆಸ್, ಜೆಡಿಎಸ್ ಆತ್ಮಸಾಕ್ಷಿ ಮತಕ್ಕೆ ಬಿದ್ದಿವೆ. ನಾವೇನೂ ಕೇಳುವುದಿಲ್ಲ. ಸಾಕಷ್ಟು ಆತ್ಮ ಬಲ ಇರುವುದು ನಮಗೆ. ಮೊದಲು ನಮಗೆ ಮತ ಕೊಡಿ, ಮಿಕ್ಕಿದರೆ ಅವರಿಗೆ ಕೊಡಿ. ನಮ್ಮ ಮೂವರು ಅಭ್ಯರ್ಥಿಗಳು ಅನಾಯಾಸವಾಗಿ ಗೆಲ್ಲುತ್ತಾರೆ ಅನ್ನೋ ನಂಬಿಕೆ ಇದೆ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ನಂಬಿಕೆ ಇರುವಾಗ ಒಂದಲ್ಲಾ ಅರ್ಧ ಮತಗಳು ಕೂಡಾ ಆಚೆ ಈಚೆ ಹೋಗಲ್ಲ ಎಂದರು.
ಸಭೆಯಲ್ಲಿ ಘಟಾನುಘಟಿಗಳು ಭಾಗಿ
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಾಳೆ ಚುನಾವಣೆ ನಡೆಯಲಿದ್ದು, ಗುರುವಾರ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯಸಭೆಯ ಬಿಜೆಪಿ ಚುನಾವಣಾ ಉಸ್ತುವಾರಿ ಕಿಶನ್ ರೆಡ್ಡಿ, ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಭಗವಂತ್ ಖೂಬಾ, ರಾಜ್ಯದ ಸಚಿವರು, ಬಿಜೆಪಿ ಶಾಸಕರು ಭಾಗಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿಗಳಾದ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್, ಲೆಹರ್ ಸಿಂಗ್, ಮಾಜಿ ಸಿಎಂಗಳಾದ ಬಿ.ಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಉಪಸ್ಥಿತರಿದ್ದರು. ಸಭೆಯ ನಂತರ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಔತಣಕೂಟ ಏರ್ಪಡಿಸಲಾಗಿತ್ತು.
ಇದನ್ನೂ ಓದಿ: TV9 Kannada Digital Live : ರಾಜ್ಯಸಭೆ ಚುನಾವಣೆ, ಮೂರು ಪಕ್ಷಗಳು ನಾಲ್ಕನೇ ಸ್ಥಾನಕ್ಕಾಗಿ ಜಟಾಪಟಿ!
ಮತ ಚಲಾಯಿಸುವಂತೆ ಶಾಸಕರಿಗೆ ಮನವಿ
ನಾಳೆ ನಡೆಯುವ ರಾಜ್ಯಸಭೆಯ 4 ಸ್ಥಾನಗಳ ಚುನಾವಣೆ ಹಿನ್ನೆಲೆ ತಮಗೆ ಮತ ಚಲಾಯಿಸುವಂತೆ ಶಾಸಕರಲ್ಲಿ ಅಭ್ಯರ್ಥಿಗಳಾದ ನಿರ್ಮಲಾ ಸೀತಾರಾಮನ್ (Nirmala Seetharama), ಜಗ್ಗೇಶ್ (Jaggesh), ಲೆಹರ್ ಸಿಂಗ್ (Lehar Singh)ಮನವಿ ಮಾಡಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಮತಯಾಚಿಸಿದರು. ಯಾವ ಅಭ್ಯರ್ಥಿಗೆ ಮತ ಹಾಕಬೇಕೆಂದು ನಾಳೆ ಬೆಳಗ್ಗೆ ಉಸ್ತುವಾರಿ ಸಚಿವರು ಶಾಸಕರಿಗೆ ತಿಳಿಸಲಿದ್ದಾರೆ. ಲೆಕ್ಕಾಚಾರದ ಪ್ರಕಾರ, ನಿರ್ಮಲಾ ಸೀತಾರಾಮನ್ಗೆ 46, ಜಗ್ಗೇಶ್ಗೆ 45, ಲೆಹರ್ ಸಿಂಗ್ಗೆ 31 ಪ್ರಥಮ ಪ್ರಾಶಸ್ತ್ಯದ ಮತಗಳು ಇವೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:06 pm, Thu, 9 June 22