ನಾಳೆ ವಿಧಾನ ಪರಿಷತ್ನ ಖಾಲಿ ಇರುವ ಒಂದು ಸ್ಥಾನಕ್ಕೆ ಚುನಾವಣೆ; ಪುಟ್ಟಣ್ಣ-ರಂಗನಾಥ್ ಕಣದಲ್ಲಿ
ಭಾರತೀಯ ಚುನಾವಣಾ ಆಯೋಗವು (ಇಸಿಐ) ಕರ್ನಾಟಕ ವಿಧಾನ ಪರಿಷತ್ತಿನ ಖಾಲಿ ಇರುವ ಒಂದು ಸ್ಥಾನಕ್ಕೆ ನಾಳೆ (ಫೆಬ್ರವರಿ 16) ಉಪ ಚುನಾವಣೆ ನಿಗದಿ ಮಾಡಿದೆ. ಕಳೆದ ವರ್ಷ ವಿಧಾನಸಭೆ ಚುನಾವಣೆಗೂ ಮುನ್ನ ಎಂಎಲ್‌ಸಿ ಪುಟ್ಟಣ್ಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಇವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ನಿಂದ ಪುಟ್ಟಣ್ಣ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಪಿ ರಂಗನಾಥ್ ಕಣದಲ್ಲಿದ್ದಾರೆ.
ಬೆಂಗಳೂರು, ಫೆ.15: ಭಾರತೀಯ ಚುನಾವಣಾ ಆಯೋಗವು (ECI) ಕರ್ನಾಟಕ ವಿಧಾನ ಪರಿಷತ್ತಿನ (Karnataka Legistalive Council) ಖಾಲಿ ಇರುವ ಒಂದು ಸ್ಥಾನಕ್ಕೆ ನಾಳೆ ಅಂದರೆ ಶುಕ್ರವಾರ ಉಪಚುನಾವಣೆಯನ್ನು ನಿಗದಿಪಡಿಸಿದೆ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಗೆ ಮುನ್ನ ಮಾಜಿ ಎಂಎಲ್‌ಸಿ ಪುಟ್ಟಣ್ಣ (Puttanna) ಅವರು ವಿಧಾನ ಪರಿಷತ್ತು ಮತ್ತು ಬಿಜೆಪಿ ಎರಡಕ್ಕೂ ರಾಜೀನಾಮೆ ನೀಡಿದ ನಂತರ ಈ ಸ್ಥಾನ ತೆರವಾಗಿತ್ತು.
ಜನವರಿ 23 ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ನಾಮಪತ್ರ ಸಲ್ಲಿಕೆಗೆ ಜನವರಿ 30 ಕೊನೆಯ ದಿನವಾಗಿತ್ತು. ಮರುದಿನ ಜನವರಿ 31 ರಂದು ನಾಮಪತ್ರಗಳ ಪರಿಶೀಲನೆ ಮತ್ತು ಉಮೇದುವಾರಿಕೆ ಹಿಂಪಡೆಯಲು ಫೆಬ್ರವರಿ 2 ಕೊನೆಯ ದಿನಾಂಕವಾಗಿತ್ತು.
ಇದನ್ನೂ ಓದಿ; ವಿಧಾನ ಪರಿಷತ್ ಚುನಾವಣೆ: ಕರ್ನಾಟಕದಲ್ಲಿ ಚುನಾವಣೆಯ 48 ಗಂಟೆ ಮುನ್ನ ಮದ್ಯ ಮಾರಾಟಕ್ಕೆ ಹೈಕೋರ್ಟ್ ಬ್ರೇಕ್
ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಜನವರಿ 29 ರಂದು ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದವು. ಕಾಂಗ್ರೆಸ್ ಪಕ್ಷದಿಂದ ಮಾಜಿ ಎಂಎಲ್‌ಸಿ ಪುಟ್ಟಣ್ಣ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ ಎಪಿ ರಂಗನಾಥ್ ಕಣದಲ್ಲಿದ್ದಾರೆ.
ಶುಕ್ರವಾರ ಬೆಳಗ್ಗೆ 8 ರಿಂದ ಸಂಜೆ 4 ರ ವರೆಗೆ ಚುನಾವಣೆ ನಡೆಯಲಿದ್ದು, ಫೆಬ್ರವರಿ 20 ಮಂಗಳವಾರ ಮತ ಎಣಿಕೆ ನಡೆಯಲಿದೆ. ಫೆಬ್ರವರಿ 23 ರ ಒಳಗೆ ಮತದಾನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಬಾರತೀಯ ಚುನಾವಣಾ ಆಯೋಗವು ಹೇಳಿದೆ. ವಿಜೇತ ಅಭ್ಯರ್ಥಿಯ ಅಧಿಕಾರಾವಧಿ ನವೆಂಬರ್ 11, 2026 ರವರೆಗೆ ಇರುತ್ತದೆ.
ಪುಟ್ಟಣ್ಣ ಅವರು ಬಿಜೆಪಿ ತೊರೆದು ಬೆಂಗಳೂರು ನಗರದ ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. ಅವರು ಮಾಜಿ ಸಚಿವರೂ ಆಗಿರುವ ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ವಿರುದ್ಧ ಸೋಲು ಅನುಭವಿಸಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ