Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಸ್ಲಿಮರಿಗೆ ಅನುದಾನ ನೀಡುವುದರಲ್ಲಿ ತಪ್ಪೇನಿಲ್ಲ: ಪ್ರತಿಪಕ್ಷಗಳ ಟೀಕೆಗಳಿಗೆ ಸಿದ್ದರಾಮಯ್ಯ ತಿರುಗೇಟು

ತಮ್ಮ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ? ಮುಸ್ಲಿಮರು ಸೇರಿದಂತೆ ಎಲ್ಲರನ್ನೂ ರಕ್ಷಿಸುತ್ತೇವೆ ಎಂದು ಹೇಳಿದ್ದೇನೆ. ಇದು ಓಲೈಕೆಯೇ, ತುಷ್ಟೀಕರಣವೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮುಸ್ಲಿಮರಿಗೆ ಅನುದಾನ ನೀಡುವುದರಲ್ಲಿ ತಪ್ಪೇನಿಲ್ಲ: ಪ್ರತಿಪಕ್ಷಗಳ ಟೀಕೆಗಳಿಗೆ ಸಿದ್ದರಾಮಯ್ಯ ತಿರುಗೇಟು
ಹುಬ್ಬಳ್ಳಿಯಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ
Follow us
TV9 Web
| Updated By: Ganapathi Sharma

Updated on: Dec 05, 2023 | 6:44 PM

ಬೆಂಗಳೂರು, ಡಿಸೆಂಬರ್ 5: ಮುಸ್ಲಿಮರಿಗೆ ಅನುದಾನ ನೀಡುವುದರಲ್ಲಿ ತಪ್ಪೇನಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಂಗಳವಾರ ಹೇಳಿದ್ದಾರೆ. ಈ ಮೂಲಕ, ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಧಾರ್ಮಿಕ ಮುಖಂಡರ ಸಮಾವೇಶದಲ್ಲಿ ತಾವಾಡಿದ್ದ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಮುಸ್ಲಿಮರಿಗೆ (Muslims) ದೇಶದ ಸಂಪತ್ತನ್ನು ಹಂಚಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ತಮ್ಮ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಅದರಲ್ಲಿ ತಪ್ಪೇನಿದೆ? ಮುಸ್ಲಿಮರು ಸೇರಿದಂತೆ ಎಲ್ಲರನ್ನೂ ರಕ್ಷಿಸುತ್ತೇವೆ ಎಂದು ಹೇಳಿದ್ದೇನೆ. ಇದು ಓಲೈಕೆಯೇ, ತುಷ್ಟೀಕರಣವೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಇದು ವೋಟ್ ಬ್ಯಾಂಕ್ ರಾಜಕಾರಣವಲ್ಲದೆ ಬೇರೇನೂ ಅಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಮುಸ್ಲಿಮರಿಗೆ ಹೆಚ್ಚಿನ ಅನುದಾನ ನೀಡುವುದಾಗಿ ಸಿದ್ದರಾಮಯ್ಯ ಹೇಳಿದ್ದು, ತುಷ್ಟೀಕರಣ ರಾಜಕಾರಣ ಅಲ್ಲದೆ ಬೇರೇನೂ ಅಲ್ಲ. ಹಾಗೆ ಮಾಡುವುದರಿಂದ ರಾಜ್ಯದ ಖಜಾನೆಯನ್ನು ದಿವಾಳಿ ಮಾಡುವುದಲ್ಲದೆ ಸಾಮಾಜಿಕ ಭಿನ್ನತೆಗೆ ಕಾರಣವಾಗಲಿದೆ ಎಂದು ಬೊಮ್ಮಾಯಿ ಹೇಳಿದ್ದರು.

ಈ ವರ್ಷ ಮುಸ್ಲಿಮರಿಗೆ ಮೀಸಲಿಟ್ಟಿರುವ ಅನುದಾನವನ್ನು ಮೊದಲು ಬಿಡುಗಡೆ ಮಾಡಲಿ ಎಂದು ಜೆಡಿಎಸ್ ಮುಖಂಡ ಹೆಚ್​ಡಿ ಕುಮಾರಸ್ವಾಮಿ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.

ಮೊದಲು ಈ ವರ್ಷ ಮೀಸಲಿಟ್ಟಿರುವ ಬಜೆಟ್ ಬಿಡುಗಡೆ ಮಾಡುವಂತೆ ಸಿಎಂಗೆ ಹೇಳಿ. ಇದು ತುಷ್ಟೀಕರಣ ರಾಜಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಒಂದು ನಿರ್ದಿಷ್ಟ ಸಮುದಾಯದ ಮೇಲೆ ಆಗಾಗ್ಗೆ ಹೇಳಿಕೆಯನ್ನು ನೀಡುವುದು ಒಳ್ಳೆಯದಲ್ಲ. ಎಲ್ಲ ಸಮುದಾಯಗಳ ಕಲ್ಯಾಣಕ್ಕಾಗಿ ಸರ್ಕಾರವಿದೆಯೇ ಹೊರತು ಒಂದೇ ಸಮುದಾಯದವರ ಹಿತಕ್ಕಾಗಿ ಅಲ್ಲ ಎಂದು ಕುಮಾರಸ್ವಾಮಿ ಹೇಳಿದ್ದರು.

ಇದನ್ನೂ ಓದಿ: ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತೇನೆ: ಸಿಎಂ ಸಿದ್ದರಾಮಯ್ಯ

ಸೋಮವಾರ ರಾತ್ರಿ ಹುಬ್ಬಳ್ಳಿಯಲ್ಲಿ ನಡೆದ ದಕ್ಷಿಣ ಭಾರತ ಮುಸ್ಲಿಂ ಧಾರ್ಮಿಕ ಮುಖಂಡರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, ಮುಸ್ಲಿಮರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ದೇಶದ ಸಂಪತ್ತನ್ನು ಅವರಿಗೂ ಹಂಚಬೇಕಿದೆ ಎಂದು ಹೇಳಿದ್ದರು.

‘ನಾನು ಸಿಎಂ ಆಗಿದ್ದಾಗ ಮುಸ್ಲಿಮರಿಗೆ ಬಜೆಟ್ ಹೆಚ್ಚಿಸಿದ್ದೆ. ಅದನ್ನು ಹಿಂದಿನ ಸರ್ಕಾರ ಕಡಿಮೆ ಮಾಡಿದೆ. ನಾನು ಅದನ್ನು ಮತ್ತೆ ಹೆಚ್ಚಿಸಿದೆ. ವರ್ಷದ ಮಧ್ಯದಲ್ಲಿ ನಾನು ಅಧಿಕಾರಕ್ಕೆ ಬಂದೆ. ಮುಂದಿನ ವರ್ಷದಿಂದ ಅನುದಾನ ಹೆಚ್ಚಿಸುತ್ತೇನೆ. ನೀವೂ (ಮುಸ್ಲಿಮರು) ಶಿಕ್ಷಣ ಪಡೆಯಬೇಕು ಮತ್ತು ನಿಮ್ಮ ಧಾರ್ಮಿಕ ಸಂಸ್ಥೆಗಳು ಅಭಿವೃದ್ಧಿಯಾಗಬೇಕು. ಈ ದೇಶದ ಸಂಪತ್ತಿನಲ್ಲಿ ನಿಮಗೂ ಪಾಲು ಸಿಗಬೇಕು,” ಎಂದು ಹೇಳಿದ ಸಿಎಂ ಸಿದ್ದರಾಮಯ್ಯ, ಮುಸ್ಲಿಮರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ