ಪ್ರಣಬ್ ಮುಖರ್ಜಿ ಸೇರಿದಂತೆ ತನ್ನದೇ ಪಕ್ಷದ ನಾಯಕರ ಫೋನ್​ಗಳನ್ನೂ ಕಾಂಗ್ರೆಸ್ ಸರ್ಕಾರ ಕದ್ದಾಲಿಕೆ ಮಾಡಿತ್ತು!

ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ 2013ರಲ್ಲಿ 9,000 ಫೋನ್​ಗಳು, 500 ಇ-ಮೇಲ್​ಗಳನ್ನು ಹ್ಯಾಕ್ ಮಾಡಿತ್ತು. ಪ್ರಣಬ್ ಮುಖರ್ಜಿ ಸೇರಿದಂತೆ ತನ್ನದೇ ಪಕ್ಷದ ನಾಯಕರ ಫೋನ್​ಗಳನ್ನು ಕೂಡ ಕದ್ದಾಲಿಕೆ ಮಾಡಲಾಗಿತ್ತು.

ಪ್ರಣಬ್ ಮುಖರ್ಜಿ ಸೇರಿದಂತೆ ತನ್ನದೇ ಪಕ್ಷದ ನಾಯಕರ ಫೋನ್​ಗಳನ್ನೂ ಕಾಂಗ್ರೆಸ್ ಸರ್ಕಾರ ಕದ್ದಾಲಿಕೆ ಮಾಡಿತ್ತು!
ಮನಮೋಹನ್ ಸಿಂಗ್- ಪ್ರಣಬ್ ಮುಖರ್ಜಿ
TV9kannada Web Team

| Edited By: Sushma Chakre

Jul 21, 2021 | 5:46 PM

ನವದೆಹಲಿ: ಇಸ್ರೇಲ್ ದೇಶದ ಪೆಗಾಸಸ್ (Pegasus) ತಂತ್ರಜ್ಞಾನದ ಮೂಲಕ ಅನೇಕ ರಾಜಕಾರಣಿಗಳ ಫೋನ್ ಕದ್ದಾಲಿಕೆ ಮಾಡಿರುವ ಆರೋಪ ಕೇಳಿಬಂದಿದೆ. 40ಕ್ಕೂ ಹೆಚ್ಚು ಭಾರತೀಯ ಪತ್ರಕರ್ತರು, ಆರ್​ಎಸ್​ಎಸ್​ ನಾಯಕರು, ಪ್ರಮುಖ ರಾಜಕಾರಣಿಗಳ ಫೋನ್ ಕದ್ದಾಲಿಕೆ ಮಾಡಿರುವ ಬಗ್ಗೆ ದಿ ವೈರ್ ಪೋರ್ಟಲ್ ಪಟ್ಟಿಯನ್ನು ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಫೋನ್ ಕದ್ದಾಲಿಕೆಯಿಂದ ರಾಜಕಾರಣದಲ್ಲಿ ಏನೆಲ್ಲ ನಡೆದಿದೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಇದರ ಬೆನ್ನಲ್ಲೇ ಎಡಪಂಥೀಯ ಆನ್​ಲೈನ್ ಪೋರ್ಟಲ್ ಒಂದು ಅಚ್ಚರಿಯ ಸಂಗತಿಯನ್ನು ವರದಿ ಮಾಡಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿರುವಾಗಲೇ ಫೋನ್ ಕದ್ದಾಲಿಕೆ ನಡೆದಿತ್ತು. ಇದು ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಗರಣವಲ್ಲ ಎಂದು ತಿಳಿಸಿದೆ. ಇದುವರೆಗೂ ಮೋದಿ ಸರ್ಕಾರವನ್ನು ಜರಿಯುತ್ತಿದ್ದ ಈ ವೆಬ್ ಪೋರ್ಟಲ್ ಇದೀಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಕದ್ದಾಲಿಕೆಯ ಬಗ್ಗೆ ಮಾಹಿತಿ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

ಕಾಂಗ್ರೆಸ್ ನೇತೃತ್ವದ ಸರ್ಕಾರ ಫೋನ್ ಕದ್ದಾಲಿಕೆಯನ್ನು ರಾಜಕಾರಣಿಗಳ ವಿರುದ್ಧದ ಅಸ್ತ್ರವನ್ನಾಗಿ ಮಾಡಿಕೊಂಡಿತ್ತು. ಇನ್ನೂ ವಿಚಿತ್ರವೆಂದರೆ ತನ್ನದೇ ಪಕ್ಷದ ನಾಯಕರ ಫೋನ್​ಗಳನ್ನು ಕೂಡ ಕದ್ದಾಲಿಕೆ ಮಾಡಲಾಗಿತ್ತು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ 2013ರಲ್ಲಿ 9,000 ಫೋನ್​ಗಳು, 500 ಇ-ಮೇಲ್​ಗಳನ್ನು ಹ್ಯಾಕ್ ಮಾಡಿತ್ತು ಎಂಬ ಮಾಹಿತಿ ಹೊರಬಿದ್ದಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿ ತಿಂಗಳು ಬರೋಬ್ಬರಿ 9 ಸಾವಿರ ಜನರ ಫೋನ್​ಗಳನ್ನು ಟ್ಯಾಪ್ ಮಾಡಲಾಗಿತ್ತು. ಇದರಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಪ್ರಣಬ್ ಮುಖರ್ಜಿ ಮುಂತಾದವರ ಫೋನ್​ಗಳು ಕೂಡ ಸೇರಿದ್ದವು ಎಂಬ ಶಾಕಿಂಗ್ ಮಾಹಿತಿಯನ್ನು ವೆಬ್ ಪೋರ್ಟಲ್ ಹೊರಹಾಕಿದೆ.

2006ರಲ್ಲಿ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಈ ಬಗ್ಗೆ ಧ್ವನಿಯೆತ್ತಿದ್ದರು. ತಮ್ಮ ಫೋನ್ ಅನ್ನು ಮನಮೋಹನ್ ಸಿಂಗ್ ಸರ್ಕಾರ ಕದ್ದಾಲಿಕೆ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದರು. ಅದರ ಬೆನ್ನಲ್ಲೇ ಸೀತಾರಾಮ್ ಯೆಚೂರಿ, ಜಯಲಲಿತಾ, ಚಂದ್ರಬಾಬು ನಾಯ್ಡು ಮುಂತಾದ ನಾಯಕರು ಕೂಡ ಯುಪಿಎ ಸರ್ಕಾರದ ವಿರುದ್ಧ ಫೋನ್ ಕದ್ದಾಲಿಕೆಯ ಆರೋಪ ಮಾಡಿದ್ದರು. ಆದರೆ, ಈ ಆರೋಪವನ್ನು ತಳ್ಳಿಹಾಕಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ನಮ್ಮ ಸರ್ಕಾರದಿಂದ ಫೋನ್ ಕದ್ದಾಲಿಕೆ ನಡೆದಿಲ್ಲ. ಇದು ಪ್ರೈವೇಟ್ ಏಜೆನ್ಸಿಯೊಂದರ ಕೆಲಸ ಎಂದಿದ್ದರು. ಈ ಹಿನ್ನೆಲೆಯಲ್ಲಿ ಭೂಪೀಂದರ್ ಸಿಂಗ್ ಎಂಬುವವರನ್ನು ಬಂಧಿಸಲಾಗಿತ್ತು.

2011ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದ ಪ್ರಣಬ್ ಮುಖರ್ಜಿ ಪ್ರಧಾನಿಗೆ ಪತ್ರ ಬರೆದು, ತಮ್ಮ ಕಚೇರಿಯ ಗೌಪ್ಯ ಸಂಗತಿಗಳು ಸೋರಿಕೆಯಾಗುತ್ತಿರುವ ಬಗ್ಗೆ ಗೌಪ್ಯವಾಗಿ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದರು. ತಮ್ಮದೇ ಸಂಪುಟದ ಸಚಿವರಿಂದ ತಮ್ಮ ಫೋನ್ ಕದ್ದಾಲಿಕೆಯಾಗುತ್ತಿದೆ ಎಂಬ ಅನುಮಾನ ಅವರನ್ನು ಕಾಡಿತ್ತು. ಕರ್ನಾಟಕದಲ್ಲೂ ತಮ್ಮ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದರು. ಯಡಿಯೂರಪ್ಪ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು.

ಕಳೆದ ಲೋಕಸಭಾ ಚುನಾವಣೆಗೂ ಮೊದಲು ಭಾರತದ 300ಕ್ಕೂ ಹೆಚ್ಚು ಗಣ್ಯರ ಫೋನ್​ಗಳನ್ನು ಇಸ್ರೇಲ್​ನ ಪೆಗಾಸಸ್ ಸಾಫ್ಟ್​ವೇರ್ ಮೂಲಕ ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಪೆಗಾಸಸ್ ಸಾಫ್ಟ್​ವೇರ್ ವ್ಯಕ್ತಿಗಳ ಕಾಲ್ ಟ್ರಾಕಿಂಗ್, ಕಾಲ್ ರೀಡಿಂಗ್ ಮತ್ತು ಅವರ ಚಟುವಟಿಕೆಗಳ ಮೇಲೆ ನಿಗಾ ಇಡುತ್ತದೆ. ಮೊಬೈಲ್​ನ ಕ್ಯಾಮೆರಾ ಆ್ಯಕ್ಟಿವ್ ಆಗುವಂತೆ ಮಾಡಿ ಅವರ ಎಲ್ಲ ಚಟುವಟಿಕೆಗಳ ಮೇಲೆ ಕಣ್ಣಿಡುತ್ತದೆ. ಇದು ಒಮ್ಮೆ ಮೊಬೈಲ್​ನಲ್ಲಿ ಇನ್​ಸ್ಟಾಲ್ ಆದರೆ ಅವರ ಪೂರ್ತಿ ಮಾಹಿತಿ ಲಭ್ಯವಾಗುತ್ತದೆ.

ಇದನ್ನೂ ಓದಿ: ಕರ್ನಾಟಕ ರಾಜಕಾರಣದಲ್ಲೂ ಪೆಗಾಸಸ್ ನೆರಳು; ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಕೆಡವಲು ಸಿದ್ದರಾಮಯ್ಯ, ಡಾ ಪರಮೇಶ್ವರ್ ಫೋನ್ ಕದ್ದಾಲಿಕೆ ಆರೋಪ

(Congress led UPA governments unabashedly snooped on politicians including Congress leader Pranab Mukherjee)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada