ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲ: ರೇಣುಕಾಚಾರ್ಯ

ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿಯ ಶಿಸ್ತಿನ ಸಿಪಾಯಿ. ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಿ ಈ ಮಟ್ಟಕ್ಕೆ ಬಂದಿದ್ದಾರೆ. ಅವರು ರೆಡಿಮೇಡ್ ಫುಡ್ ಅಲ್ಲ ಎಂದು ರೇಣುಕಾಚಾರ್ಯ ಹೇಳಿದರು.

  • Updated On - 7:32 pm, Wed, 21 July 21 Edited By: Ghanashyam D M | ಡಿ.ಎಂ.ಘನಶ್ಯಾಮ
ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲ: ರೇಣುಕಾಚಾರ್ಯ
ಶಾಸಕ ರೇಣುಕಾಚಾರ್ಯ

ದೆಹಲಿ: ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ವಾನುಮತದ ನಾಯಕರು. ಅವರು ಎಂದಿಗೂ ವ್ಯಕ್ತಿಪೂಜೆ ಮಾಡಿದವರಲ್ಲ. ಯಡಿಯೂರಪ್ಪ ಬಗ್ಗೆ ಗೌರವ, ಪ್ರೀತಿ ಮತ್ತು ವಿಶ್ವಾಸ ಇದೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೈಬಿಡುತ್ತಾರೆಂದು ಯಾರು ಹೇಳಿದ್ದಾರೆ ಎಂದು ಹೊನ್ನಾಳಿ ಶಾಸಕ ಮತ್ತು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ರಾಷ್ಟ್ರ ರಾಜಧಾನಿಯನ್ನು ರಾಜ್ಯದಿಂದ ಈಚೆಗೆ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾದವರನ್ನು ಭೇಟಿಯಾದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಯಾರೂ ಹೇಳಿಲ್ಲ. ಬಿಎಸ್​​ವೈ 2 ವರ್ಷ ಪೂರೈಸುತ್ತಾರೆ ಎಂದೇ ಎಲ್ಲರೂ ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿಯ ಶಿಸ್ತಿನ ಸಿಪಾಯಿ. ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಿ ಈ ಮಟ್ಟಕ್ಕೆ ಬಂದಿದ್ದಾರೆ. ಅವರು ರೆಡಿಮೇಡ್ ಫುಡ್ ಅಲ್ಲ ಎಂದರು.

ಕರ್ನಾಟಕದ ವಿವಿಧ ಸಮುದಾಯಗಳ ಮಠಾಧೀಶರು ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದಾರೆ. ವರಿಷ್ಠರು ಹೇಳಿದ್ದನ್ನ ಗೌರವಿಸುವುದಾಗಿ ಮುಖ್ಯಮಂತ್ರಿಯೂ ಹೇಳಿದ್ದಾರೆ. ರಾಜಕಾರಣದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಟವೆಲ್​ ಹಾಕುವುದು ಸಹಜ. ಆದ್ರೆ ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಲ್ಹಾದ್ ಜೋಶಿ, ನಳಿನ್​ ಕುಮಾರ್, ಶೋಭಾ, ನಾರಾಯಣಸ್ವಾಮಿ ಮತ್ತು ಭಗವಂತ ಖೂಬಾ ಅವರನ್ನು ಭೇಟಿಯಾಗಿದ್ದೇನೆ. ನನ್ನ ಕ್ಷೇತ್ರದ ಕೆಲ ಯೋಜನೆಗಳು ಮತ್ತು ಪಕ್ಷ ಸಂಘಟನೆ ಕುರಿತು ನಳಿನ್ ಕುಮಾರ್​ ಜೊತೆ ಚರ್ಚೆ ಮಾಡಿದೆ. ಯಡಿಯೂರಪ್ಪ ಅವರ ಗಮನಕ್ಕೆ ತಂದ ನಂತರವೇ ದೆಹಲಿಗೆ ಹೊರಟೆ. ಗುಂಪಾಗಿ ಹೋಗಬೇಡಿ ಎಂದು ಮುಖ್ಯಮಂತ್ರಿ ಸೂಚಿಸಿದ್ದರು. ಹೀಗಾಗಿ ಒಬ್ಬನೇ ಬಂದೆ ಎಂದು ರೇಣುಕಾಚಾರ್ಯ ತಿಳಿಸಿದರು.

ರೇಣುಕಾಚಾರ್ಯ ಎಂದಿಗೂ ಬ್ಲ್ಯಾಕ್​ಮೇಲ್ ಅಥವಾ ಕುತಂತ್ರಕ್ಕೆ ಒಳಗಾಗುವುದಿಲ್ಲ. ಷಡ್ಯಂತ್ರಗಳಿಗೂ ಹೆದರುವುದಿಲ್ಲ. ನನ್ನ ಹೊನ್ನಾಳಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನಹರಿಸುತ್ತೇನೆ. ಪಕ್ಷದ ಸಂಘಟನೆ ಬಗ್ಗೆ ಮುಕ್ತ ಮನಸ್ಸಿನಿಂದ ಚರ್ಚೆ ನಡೆಸಿದ್ದೇನೆ. ಯಡಿಯೂರಪ್ಪ ಕೇವಲ ನನ್ನೊಬ್ಬನ ನಾಯಕ ಅಲ್ಲ. ಸರ್ವರ ನಾಯಕ, ಅವರಿಗೆ ಪ್ರಬಲ ಇಚ್ಛಾಶಕ್ತಿಯಿದೆ ಎಂದು ತಿಳಿಸಿದರು.

(Renukacharya speaks on Chief Minister Change talks in Karnataka)

ಇದನ್ನೂ ಓದಿ: ಸಿಎಂ ಬದಲಾವಣೆ ಚರ್ಚೆ ಗರಿಗೆದರಿದ ಬೆನ್ನಲ್ಲೇ ದೆಹಲಿಗೆ ಹಾರಿದ ರೇಣುಕಾಚಾರ್ಯ

ಇದನ್ನೂ ಓದಿ: ಮುಖ್ಯಮಂತ್ರಿ ಬದಲಿಸಿದರೆ ಬಿಜೆಪಿ ಇತಿಹಾಸ ಮುಗೀತು: ಬಿಎಸ್​ವೈ ಪರ ನಿಂತ ಶಾಮನೂರು ಶಿವಶಂಕರಪ್ಪ, ರೇಣುಕಾಚಾರ್ಯ, ಎಂ ಬಿ ಪಾಟೀಲ್