ರಾಷ್ಟ್ರಪತಿ ಚುನಾವಣೆ: ಶರದ್ ಪವಾರ್​ ಉಮೇದುವಾರಿಕೆಗೆ ಕಾಂಗ್ರೆಸ್ ಒಲವು, ಟಿಎಂಸಿ ಸೇರಿ ಹಲವು ಪಕ್ಷಗಳ ಬೆಂಬಲ

ರಾಷ್ಟ್ರಪತಿ ಚುನಾವಣೆಯಲ್ಲಿ ಸಣ್ಣ ಮತ್ತು ಪ್ರಾದೇಶಿಕ ಪಕ್ಷಗಳ ಮತಗಳು ಮುಖ್ಯಪಾತ್ರ ವಹಿಸುತ್ತವೆ. ಎನ್​ಸಿಪಿ ನಾಯಕ ಶರದ್ ಪವಾರ್ ಅವರು ವಿವಿಧ ಪಕ್ಷಗಳೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ.

ರಾಷ್ಟ್ರಪತಿ ಚುನಾವಣೆ: ಶರದ್ ಪವಾರ್​ ಉಮೇದುವಾರಿಕೆಗೆ ಕಾಂಗ್ರೆಸ್ ಒಲವು, ಟಿಎಂಸಿ ಸೇರಿ ಹಲವು ಪಕ್ಷಗಳ ಬೆಂಬಲ
ಶರದ್ ಪವಾರ್
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jun 13, 2022 | 3:53 PM

ಮುಂಬೈ: ಎನ್​ಸಿಪಿ ನಾಯಕ (Nationalist Congress Party – NCP) ಶರದ್ ಪವಾರ್ ಅವರು (Sharad Pawar) ರಾಷ್ಟ್ರಪತಿ ಸ್ಥಾನಕ್ಕೆ (Presidential Election) ನಾಮಪತ್ರ ಸಲ್ಲಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಸಲಹೆ ಮಾಡಿದ್ದಾರೆ. ವಿರೋಧ ಪಕ್ಷಗಳ ಒಮ್ಮತ ಅಭ್ಯರ್ಥಿಯಾಗಿ ಶರದ್ ಪವಾರ್ ನಾಮಪತ್ರ ಸಲ್ಲಿಸಬೇಕು ಎಂದು ಕಾಂಗ್ರೆಸ್​ ಅಭಿಪ್ರಾಯಪಟ್ಟಿದೆ. ಆದರೆ ಶರದ್ ಪವಾರ್ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಈವರೆಗೆ ತಮ್ಮ ಅಭಿಪ್ರಾಯ ಸ್ಪಷ್ಟಪಡಿಸಿಲ್ಲ. ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಜುಲೈ 21ರಂದು ಫಲಿತಾಂಶ ಪ್ರಕಟವಾಗಿದೆ. ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸುವಂತೆ ಮನವೊಲಿಸುವ ಸಂಬಂಧ ಇತ್ತೀಚೆಗೆ ಎನ್​ಸಿಪಿ ನಾಯಕರನ್ನು ಮುಂಬೈನ ಸಿಲ್ವರ್ ಓಕ್​ನಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಭೇಟಿಯಾಗಿ ಮಾತುಕತೆ ನಡೆಸಿದರು ಎಂದು ಉನ್ನತ ಮೂಲಗಳು ಹೇಳಿವೆ.

ಈ ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರ ಸಂದೇಶವನ್ನು ಖರ್ಗೆ ಎನ್​ಸಿಪಿ ನಾಯಕ ಶರದ್ ಪವಾರ್ ಅವರಿಗೆ ತಲುಪಿಸಿದರು. ಬಿಜೆಪಿ ಅಭ್ಯರ್ಥಿಯ ಎದುರು ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಶರದ್ ಪವಾರ್ ನಿಲ್ಲಬೇಕು ಎಂದು ಖರ್ಗೆ ವಿನಂತಿಸಿದರು. ರಾಷ್ಟ್ರಪತಿ ಚುನಾವಣೆಯಲ್ಲಿ ಸಣ್ಣ ಮತ್ತು ಪ್ರಾದೇಶಿಕ ಪಕ್ಷಗಳ ಮತಗಳು ಮುಖ್ಯಪಾತ್ರ ವಹಿಸುತ್ತವೆ. ಎನ್​ಸಿಪಿ ನಾಯಕ ಶರದ್ ಪವಾರ್ ಅವರು ವಿವಿಧ ಪಕ್ಷಗಳೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಅವರು ಅಭ್ಯರ್ಥಿಯಾದರೆ ರಾಷ್ಟ್ರಪತಿ ಸ್ಥಾನ ಗೆಲ್ಲಲು ಬೇಕಿರುವಷ್ಟು ಮತಗಳನ್ನು ಒಗ್ಗೂಡಿಸುವುದು ಸುಲಭ ಎನ್ನುವುದು ಕಾಂಗ್ರೆಸ್​ನ ಲೆಕ್ಕಾಚಾರ.

ಆದರೆ ಈ ಪ್ರಸ್ತಾವದ ಬಗ್ಗೆ ಶರದ್ ಪವಾರ್ ಅವರು ಈವರೆಗೆ ಹೌದು ಅಥವಾ ಇಲ್ಲ ಎಂದು ಹೇಳಿಲ್ಲ. ಅವರು ಒಮ್ಮೆ ದೃಢಮನಸ್ಕರಾಗಿ ತಮ್ಮ ನಿರ್ಧಾರ ತಿಳಿಸಿದ ನಂತರ ವಿವಿಧ ಪಕ್ಷಗಳೊಂದಿಗೆ ಚರ್ಚೆ ನಡೆಸಿ, ಅಧಿಕೃತವಾಗಿ ವಿರೋಧ ಪಕ್ಷಗಳ ಒಕ್ಕೂಟ ತನ್ನ ಅಭ್ಯರ್ಥಿಯನ್ನು ಪ್ರಕಟಿಸುತ್ತದೆ. ಶರದ್ ಪವಾರ್ ಅವರ ಭೇಟಿಯ ನಂತರ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನೂ ಖರ್ಗೆ ಭೇಟಿಯಾಗಿ, ಶರದ್ ಪವಾರ್ ಅವರನ್ನು ರಾಷ್ಟ್ರಪತಿ ಸ್ಥಾನದ ಉಮೇದುವಾರಿಕೆಗೆ ಆಯ್ಕೆ ಮಾಡುವ ಬಗ್ಗೆ ಚರ್ಚಿಸಿದರು.

ಶರದ್ ಪವಾರ್ ಅವರನ್ನು ರಾಷ್ಟ್ರಪತಿಯಾಗಿ ನೋಡುವ ಬಗ್ಗೆ ಉದ್ಧವ್ ಠಾಕ್ರೆ ಅವರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಪವಾರ್ ಅವರಿಗೆ 50 ವರ್ಷಗಳ ಚುನಾವಣಾ ರಾಜಕೀಯದ ಅನುಭವವಿದೆ. ಅವರು ನಾಲ್ಕು ಸಲ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು, ಒಮ್ಮೆ ರಕ್ಷಣಾ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಮಹಾರಾಷ್ಟ್ರ ಮತ್ತು ಭಾರತದ ಅಭಿವೃದ್ಧಿಗೆ ಅವರು ತಮ್ಮದೇ ಆದ ರೀತಿಯಲ್ಲಿ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ತಮ್ಮ ವೃತ್ತಿಬದುಕಿನ ಅಂತ್ಯ ಕಾಲದಲ್ಲಿ ರಾಷ್ಟ್ರಪತಿ ಹುದ್ದೆಯನ್ನು ಅವರು ಅಲಂಕರಿಸುವುದು ಅತ್ಯಂತ ಸೂಕ್ತ ನಿರ್ಧಾರವಾಗುತ್ತದೆ ಎಂದು ಖರ್ಗೆ ಉದ್ಧವ್ ಠಾಕ್ರೆ ಅವರಿಗೆ ವಿವರಿಸಿದರು. ಶರದ್ ಪವಾರ್ ಅವರಿಗೆ ಬೆಂಬಲ ದೊರಕಿಸಿಕೊಡಲು ಉದ್ಧವ್ ಠಾಕ್ರೆ ಸಹ ಇತರ ಕೆಲ ಪಕ್ಷಗಳ ನಾಯಕರಿಗೆ ಕರೆ ಮಾಡಿ ಬೆಂಬಲ ಯಾಚಿಸಲಿದ್ದಾರೆ.

ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಅಧ್ಯಕ್ಷ ನಾನಾ ಪಟೋಲೆ ಸಹ ಶರದ್ ಪವಾರ್ ಅವರ ಉಮೇದುವಾರಿಕೆಗೆ ಸಹಮತವಿದೆ ಎಂದು ಹೇಳಿದ್ದಾರೆ. ಪವಾರ್ ಅವರನ್ನು ಆಮ್ ಆದ್ಮಿ ಪಕ್ಷದ ನಾಯಕರು ಸಹ ಭೇಟಿಯಾಗಿ, ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದರೆ ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಪವಾರ್ ಅವರನ್ನು ರಾಷ್ಟ್ರಪತಿ ಸ್ಥಾನದ ಉಮೇದುವಾರಿಕೆಗೆ ಸೂಚಿಸುವ ಸೋನಿಯಾರ ನಿರ್ಧಾರ ಅರಿತ ನಂತರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ಶರದ್ ಪವಾರ್​ ಅವರಿಗೆ ಕರೆ ಮಾಡಿ ತಮ್ಮ ಬೆಂಬಲ ಸೂಚಿಸಿದರು. ಇತರ ಪ್ರಾದೇಶಿಕ ಪಕ್ಷಗಳ ಬೆಂಬಲ ದೊರಕಿಸಿಕೊಡುವುದಾಗಿಯೂ ಅವರು ಭರವಸೆ ನೀಡಿದ್ದಾರೆ.

ಈ ಬೆಳವಣಿಗೆ ಕುರಿತು ಶರದ್ ಪವಾರ್ ಅವರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅವರ ಪಕ್ಷದ ನಾಯಕರು ಪ್ರತ್ಯೇಕವಾಗಿ ಪ್ರತಿಕ್ರಿಯಿಸಿದ್ದು, ಎನ್​ಸಿಪಿಗೆ ರಾಷ್ಟ್ರಪತಿ ಹುದ್ದೆ ದೊರೆಯುವುದಾದರೆ, ಅದು ಸಂಭ್ರಮದ ಸಂಗತಿ ಎಂದು ಹೇಳಿದ್ದಾರೆ. ಕುತೂಹಲಕಾರಿ ಅಂಶವೆಂದರೆ ಬಿಜೆಪಿ ಈವರೆಗೆ ತನ್ನ ಅಭ್ಯರ್ಥಿ ಯಾರು ಎಂದು ಘೋಷಿಸಿಲ್ಲ. ಶರದ್ ಪವಾರ್ ಅವರು ಮುಖ್ಯಮಂತ್ರಿ ನರೇಂದ್ರ ಮೋದಿ ಅವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎನ್ನುವುದು ಗಮನಾರ್ಹ ಅಂಶವಾಗಿದೆ.

ಇದನ್ನೂ ಓದಿ

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada