AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿಲ್ಲಿಯಲ್ಲಿ ಸಚಿವ ಸಂಪುಟ ಸರ್ಕಸ್‌: ಇಂದು ಹೈಕಮಾಂಡ್ ಜೊತೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈನಲ್ ಸಭೆ!

ಮಂತ್ರಿಗಳಾದವರು ಪ್ರಬಲ ಖಾತೆಗಳಿಗೆ ಪಟ್ಟು ಹಿಡಿದು ಕುಳಿತಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರೂ ತಮ್ಮ ತಮ್ಮ ಆಪ್ತರಿಗೆ ಸಚಿವ ಸ್ಥಾನ ಕೊಡಿಸಲು ಹಗ್ಗಜಗ್ಗಾಟ ನಡೆಸ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆ ಕಸರತ್ತು ಮತ್ತೆ ದಿಲ್ಲಿ ಅಂಗಳಕ್ಕೆ ತಲುಪಿದ್ದು, ಮೀಟಿಂಗ್‌ಗಳ ಮೇಲೆ ಮೀಟಿಂಗ್ ನಡೆಯುತ್ತಿದೆ.

ದಿಲ್ಲಿಯಲ್ಲಿ ಸಚಿವ ಸಂಪುಟ ಸರ್ಕಸ್‌: ಇಂದು ಹೈಕಮಾಂಡ್ ಜೊತೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈನಲ್ ಸಭೆ!
Follow us
ರಮೇಶ್ ಬಿ. ಜವಳಗೇರಾ
|

Updated on: May 25, 2023 | 8:18 AM

ನವದೆಹಲಿ: ಸರ್ಕಾರ ರಚನೆ ಬಳಿಕ ಸಿಎಂ ಸಿದ್ದರಾಮಯ್ಯ (Siddaramaiah) ತಮ್ಮ ಸಂಪುಟ ವಿಸ್ತರಣೆ(Cabinet berth) ಮಾಡಿಕೊಳ್ಳೋಕೆ ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ (DK Shivakumar)ತಮ್ಮ ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸಲು ಪೈಪೋಟಿಗೆ ಬಿದ್ದಿದ್ದಾರೆ. ಇನ್ನೊಂದೆಡೆ ದಂಡು ದಾಳಿ ಕಟ್ಕೊಂಡು ಸಚಿವ ಆಕಾಂಕ್ಷಿಗಳು ಹೈಕಮಾಂಡ್ ಮಟ್ಟದಲ್ಲೇ ಲಾಬಿ ನಡೆಸುತ್ತಿದ್ದಾರೆ. ಸಿಎಂ, ಡಿಸಿಎಂ ಸೇರಿ ಒಟ್ಟು 10 ಮಂದಿ ಈಗ ಸ್ಥಾನ ಪಡೆದಿದ್ದಾರೆ. ಇನ್ನು ಉಳಿದಿರುವ 23 ಸ್ಥಾನಗಳನ್ನು ಹಂಚಿಕೆ ಮಾಡಬೇಕಿದೆ. ಸಂಪುಟದಲ್ಲಿ ಮೇಲು’ಗೈ’ ಸಾಧಿಸಲು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಪರಸ್ಪರ ಪ್ರಯತ್ನ ನಡೆಸಿರುವುದು ಗುಟ್ಟಾಗಿ ಉಳಿದಿಲ್ಲ. ಜಿಲ್ಲೆ, ಪ್ರದೇಶ, ಜಾತಿವಾರು ಪ್ರಾತಿನಿಧ್ಯ ಕಲ್ಪಿಸಿ ಸೈ ಎನಿಸಿಕೊಳ್ಳಬೇಕೆಂಬುದು ಹೈಕಮಾಂಡ್ ಆಶಯ. ಇದೀಗ ಈ ಲೆಕ್ಕಾಚಾರ ತಪ್ಪುವಂತೆ ಕಾಣಿಸಲು ಆರಂಭವಾಗಿದೆ. ಒಂದೆಡೆ, ಹಿರಿಯ ಶಾಸಕರು ಸಚಿವ ಸ್ಥಾನಕ್ಕೆ ಪಟ್ಟುಹಿಡಿದರೆ, ಸಿಎಂ ಹಾಗೂ ಡಿಸಿಎಂ ತಮ್ಮತಮ್ಮ ಆಪ್ತರಿಗೆ ಅವಕಾಶ ಕೊಡಿಸಲು ಜಿದ್ದಿಗೆ ಬಿದ್ದಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ಶುರು; ಡಿಕೆ ಶಿವಕುಮಾರ್ ಪಟ್ಟಿಯಲ್ಲಿ ಯಾರಿಗೆಲ್ಲ ಸ್ಥಾನ? ಇಲ್ಲಿದೆ ವಿವರ

ದೆಹಲಿಯಲ್ಲಿ ಭರ್ಜರಿ ಪೈಪೋಟಿ

ಕಾಂಗ್ರೆಸ್​ನಲ್ಲಿ ಮೊದಲಿಗೆ ಮುಖ್ಯಮಂತ್ತಿ ಆಯ್ಕೆಗೆ ಇನ್ನಿಲ್ಲದ ಕಸರತ್ತು ನಡೀತು. ಬಳಿಕ ಸಚಿವ ಸಂಪುಟ ರಚನೆಗೆ ಮಧ್ಯರಾತ್ರಿವರೆಗೂ ಮೀಟಿಂಗ್ ಮೇಲೆ ಮೀಟಿಂಗ್ ಮಾಡಿ ಕೇವಲ 8 ಶಾಸಕರಿಗೆ ಮಾತ್ರ ಮಂತ್ರಿಗಿರಿ ಕೊಟ್ಟರು. ಇದೀಗ ಮತ್ತೊಂದು ಸುತ್ತಿನ ಸಂಪುಟ ರಚನೆ ಕಸರತ್ತು ನಡೆಯುತ್ತಿದೆ. ಸಂಪುಟದಲ್ಲಿ ತಮ್ಮ ಬಲ ಹೆಚ್ಚಿಸಿಕೊಳ್ಳೋಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವೆ ದೆಹಲಿಯಲ್ಲಿ ಭರ್ಜರಿ ಪೈಪೋಟಿ ನಡೆಯುತ್ತಿದೆ. ತಮ್ಮ ಬೆಂಬಲಿಗ ಶಾಕಸರಿಗೆ ಮಂತ್ರಿ ಪಟ್ಟ ಕೊಡಿಸಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಭರ್ಜರಿ ಕಸರತ್ತು ನಡೆಸಿದ್ದು, ದೆಹಲಿಯಲ್ಲಿ ಸಂಪುಟ ಸಮುದ್ರ ಮಂಥನವೇ ನಡೆಯುತ್ತಿದೆ. ಕಾಂಗ್ರೆಸ್ ಜೋಡೆತ್ತುಗಳಾದ ಸಿದ್ದರಾಮಯ್ಯ ಮತ್ತು ಡಿಕೆಶಿ ಸಂಪುಟ ಕಗ್ಗಂಟು ಬಗೆಹರಿಸಲು ದೆಹಲಿ ತಲುಪಿದ್ದಾರೆ. ಆದ್ರೆ ಇಬ್ಬರೂ ನಾಯಕರು ಹೈಕಮಾಂಡ್ ಮುಂದೆ ತಮ್ಮ ತಮ್ಮ ಬೇಡಿಕೆ ಮುಂದಿಟ್ಟಿದ್ದಾರಂತೆ.

ಹೈಕಮಾಂಡ್ ನಾಯಕರ ಜತೆ ಸಿದ್ದು-ಡಿಕೆಶಿ ಪ್ರತ್ಯೇಕ ಸಭೆ

ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸಲು ಡಿಕೆಶಿ ತಂತ್ರಗಾರಿಕೆ ಮಾಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯಗೂ ಮೊದಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ದೆಹಲಿಯ ಲೋದಿ ಎಸ್ಟೇಟ್​ನಲ್ಲಿರುವ ವೇಣುಗೋಪಾಲ್ ಮನೆಗೆ ಡಿಕೆಶಿ ಶಿವಕುಮಾರ್, ಡಿ.ಕೆ ಸುರೇಶ್ ಭೇಟಿ ನೀಡಿ ಸಂಪುಟ ವಿಸ್ತರಣೆ ಸಂಬಂಧ ಬಿಸಿಬಿಸಿ ಚರ್ಚೆ ನಡೆಸಿದ್ದಾರೆ.

ಬೆಂಬಲಿಗರ ಬೆನ್ನಿಗೆ ಸಿದ್ದರಾಮಯ್ಯ ನಿಂತಿದ್ದಾರೆ. ವೇಣುಗೋಪಾಲ್ ಮನೆಗೆ ಡಿಕೆ ಶಿವಕುಮಾರ್ ಬಂದು ಹೋಗುತ್ತಿದ್ದಂತೆಯೇ ಎಂಟ್ರಿಕೊಟ್ಟ ಸಿದ್ದರಾಮಯ್ಯ ತಡರಾತ್ರಿವರೆಗೆ ವೇಣುಗೋಪಾಲ್ ಜೊತೆಗೆ ಮಾತುಕತೆ ನಡೆಸಿದ್ದಾರೆ. ಅತ್ತ ಮಲ್ಲಿಕಾರ್ಜುನ ಖರ್ಗೆ ಜೊತೆಗೂ ಸಿದ್ದರಾಮಯ್ಯ ಪ್ರತ್ಯೇಕವಾಗಿ ಚರ್ಚೆ ಮಾಡಿದ್ದಾರೆ.

ಒಟ್ಟಾರೆ ಸಚಿವ ಸಂಪುಟದಲ್ಲಿ (34 ಸ್ಥಾನ) ಜಾತಿ ಲೆಕ್ಕಾಚಾರದ ಪ್ರಕಾರ ಲಿಂಗಾಯತರಿಗೆ ಆರು, ಒಕ್ಕಲಿಗರಿಗೆ ಐದು, ಪರಿಶಿಷ್ಟರಿಗೆ 5, ಪರಿಶಿಷ್ಟಪಂಗಡಕ್ಕೆ 2, ಹಿಂದುಳಿದವರಿಗೆ 4, ಮುಸ್ಲಿಂ – 3, ಕುರುಬ -3, ಕ್ರೈಸ್ತರು, ಜೈನ, ಬ್ರಾಹ್ಮಣದಂತಹ ಸಮುದಾಯಗಳಿಗೆ ತಲಾ ಒಂದು ಸ್ಥಾನ ನೀಡುವ ಸಾಧ್ಯತೆಯಿದ್ದು, ಮೂರು ಸ್ಥಾನಗಳನ್ನು ಖಾಲಿ ಇಟ್ಟುಕೊಳ್ಳುವ ಸಾಧ್ಯತೆಯಿದೆ.

ಸದ್ಯ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿ ಸಂಪುಟದಲ್ಲಿ 10 ಮಂದಿ ಇದ್ದು, ಬಾಕಿ ಉಳಿದ 24ರ ಪೈಕಿ 20 ಸ್ಥಾನಗಳನ್ನು ತುಂಬಿಕೊಳ್ಳುವ ಉದ್ದೇಶವಿದೆ. ಆದರೆ, ಒತ್ತಡ ತೀವ್ರವಾದರೆ ಇದು 21 ಅಥವಾ 22ಕ್ಕೂ ಹೆಚ್ಚಬಹುದು ಎಂದು ಮೂಲಗಳು ಹೇಳುತ್ತವೆ.

ಇಂದೇ ಫೈನಲ್?

ಇಂದು ಸಚಿವ ಸಂಪುಟ ಫೈನಲ್ ಆಗುವ ಸಾಧ್ಯತೆ ಇದೆ. ಇಂದು ಬೆಳಗ್ಗೆ ವೇಣುಗೋಪಾಲ್ ನಿವಾಸದಲ್ಲಿ ಹೈಕಮಾಂಡ್ ಮೀಟಿಂಗ್ ಇದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಸಚಿವ ಸ್ಥಾನ ಹಾಗೂ ಖಾತೆ ಹಂಚಿಕೆ ಎರಡೂ ಫೈನಲ್ ಆಗುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಶುಕ್ರವಾರವೇ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆಯಾಗುವ ಸಾಧ್ಯತೆಯಿದೆ.