ಬೆಂಗಳೂರು: ಇಂದು ದೇಶದ 15 ರಾಜ್ಯಗಳ 57 ರಾಜ್ಯಸಭಾ (Rajya Sabha Polls) ಸ್ಥಾನಗಳಿಗೆ ಚುನಾವಣೆ (Election) ನಡೆಯಲಿದ್ದು, 57 ಸ್ಥಾನಗಳಲ್ಲಿ ಈಗಾಗಲೇ 41 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿವೆ. ಉಳಿದ 16 ರಾಜ್ಯಸಭಾ ಸ್ಥಾನಗಳಿಗೆ ಇಂದು ಶಾಸಕರು ಮತದಾನ ಮಾಡಲಿದ್ದಾರೆ. ಉತ್ತರ ಪ್ರದೇಶದಲ್ಲಿ 11, ಬಿಹಾರ 5, ತಮಿಳುನಾಡು 6, ಕರ್ನಾಟಕ 4, ಆಂಧ್ರ ಪ್ರದೇಶ 4, ಒಡಿಶಾ 3, ಮಹಾರಾಷ್ಟ್ರ 6, ಮಧ್ಯಪ್ರದೇಶದಲ್ಲಿ 3, ತೆಲಂಗಾಣ, ಛತ್ತೀಸ್ಗಢ, ಪಂಜಾಬ್, ಜಾರ್ಖಂಡ್ ತಲಾ 2 ಹಾಗೂ ಉತ್ತರಾಖಂಡ್ನ ಒಂದು ರಾಜ್ಯಸಭಾ ಸ್ಥಾನಕ್ಕೆ ಮತದಾನ ನಡೆಯುತ್ತದೆ.
ಇನ್ನು ಕರ್ನಾಟಕದಲ್ಲಿ ನಾಲ್ಕು ಸ್ಥಾನಗಳಿಗೆ ಮತದಾನ ನಡೆಯುತ್ತದೆ. ಬೆಜೆಪಿಯಿಂದ ಮೊದಲ ಅಭ್ಯರ್ಥಿಯಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಎರಡನೇ ಅಭ್ಯರ್ಥಿಯಾಗಿ ನಟ ಜಗ್ಗೇಶ್ ಮತ್ತು ಮೂರನೇ ಅಭ್ಯರ್ಥಿಯಾಗಿ ಲೇಹರ್ ಸಿಂಗ್ ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ನಲ್ಲಿ ಮೊದಲ ಅಭ್ಯರ್ಥಿಯಾಗಿ ಜೈರಾಮ್ ರಮೇಶ್ ಹಾಗೂ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿ ಖಾನ್ ಸ್ಪರ್ಧಿಸುತ್ತಿದ್ದಾರೆ. ಜೆಡಿಎಸ್ ಪಕ್ಷದಿಂದ ಕುಪೇಂದ್ರ ರೆಡ್ಡಿ ಕಣಕ್ಕಿಳಿದಿದ್ದಾರೆ.
ರಾಜ್ಯಸಭೆಗೆ ಆಯ್ಕೆಯಾಗಲು ಪ್ರತಿ ಅಭ್ಯರ್ಥಿಗೆ 45 ಮತ ಬೇಕು. ಕರ್ನಾಟಕದಲ್ಲಿ ಬಿಜೆಪಿ 121, ಕಾಂಗ್ರೆಸ್ 70, ಜೆಡಿಎಸ್ 32 ಮತಗಳನ್ನು ಹೊಂದಿವೆ.
ಇದನ್ನೂ ಓದಿ: ನನ್ನ ಆತ್ಮಸಾಕ್ಷಿಗನುಗುಣವಾಗಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುತ್ತೇನೆ: ಜಿ.ಟಿ.ದೇವೇಗೌಡ
ಜಿದ್ದಾಜಿದ್ದಿನ ಸ್ಪರ್ಧೆ:
121 ಶಾಸಕರನ್ನು ಹೊಂದಿರುವ ಬಿಜೆಪಿ ಮತ್ತು 70 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಕ್ರಮವಾಗಿ ಎರಡು ಮತ್ತು ಒಂದು ಸ್ಥಾನವನ್ನು ಗೆಲ್ಲುವುದು ಖಚಿತ. ನಾಲ್ಕನೇ ಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ. ರಾಜ್ಯಸಭಾ ಸ್ಥಾನವನ್ನು ಗೆಲ್ಲುವ ಸಂಖ್ಯಾಬಲದ ಕೊರತೆಯ ಹೊರತಾಗಿಯೂ 32 ಶಾಸಕರನ್ನು ಹೊಂದಿರುವ ಜೆಡಿಎಸ್ ತನ್ನ ಏಕೈಕ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ. ನಾಲ್ಕನೇ ಸ್ಥಾನಕ್ಕಾಗಿ ಲೆಹರ್ ಸಿಂಗ್ ಸಿರೋಯಾ , ಮನ್ಸೂರ್ ಅಲಿ ಖಾನ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಲಿದೆ. ನಾಲ್ಕನೇ ಸ್ಥಾನವನ್ನು ಗೆಲ್ಲಲು ಅಗತ್ಯವಿರುವ ಮತಗಳನ್ನು ಮೂರು ಪಕ್ಷಗಳೂ ಹೊಂದಿಲ್ಲ, ಅದಕ್ಕಾಗಿಯೇ ಅವರು ಪರಸ್ಪರ ಬೆಂಬಲವನ್ನು ಕೋರುತ್ತಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:37 am, Fri, 10 June 22