ವಿಮಾನ ಇಳಿಯುತ್ತಿದ್ದಂತೆಯೇ ಸರ್ಕಾರದ ವಿರುದ್ಧ ಕಮಿಷನ್ ದಂಧೆ ಬಾಂಬ್ ಸಿಡಿಸಿದ ಕುಮಾರಸ್ವಾಮಿ
ಕಾಂಗ್ರೆಸ್ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಬಗ್ಗೆ ಪೆನ್ಡ್ರೈವ್ ಸಾಕ್ಷಿ ತೋರಿಸಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿ ವಿದೇಶ ಪ್ರವಾಸಕ್ಕೆ ತೆರಳಿದ್ದ ಕುಮಾರಸ್ವಾಮಿ ಇದೀಗ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಆದ್ರೆ ವಿಮಾನ ಇಳಿಯುತ್ತಿದ್ದಂತೆಯೇ ಸರ್ಕಾರದ ವಿರುದ್ಧ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರು, (ಆಗಸ್ಟ್.4): ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರು ಕುಟುಂಬ ಸಮೇತ ಯುರೋಪ್ ಪ್ರವಾಸ(foreign Trip) ಮುಗಿಸಿ ನಿನ್ನೆ ತಡರಾತ್ರಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ವಿದೇಶದಿಂದ ಬೆಂಗಳೂರಿಗೆ ಮರುಳುತ್ತಿದ್ದಂತೆಯೇ ಕಾಂಗ್ರೆಸ್ ಸರ್ಕಾರದ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ. ವಿದೇಶದಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕುಮಾರಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಪರ್ಸೆಂಟೇಜ್ ನೀಡುವಂತೆ ಗುತ್ತಿಗೆದಾರರಿಗೆ ಹೇಳಿದ್ದಾರಂತೆ. ನಾನು ಯುರೋಪ್ ಪ್ರವಾಸದಲ್ಲಿದ್ದಾಗಲೇ ಕಮಿಷನ್ ಬಗ್ಗೆ ಮಾಹಿತಿ ಬಂತು ಎಂದು ಗಂಭೀರ ಆರೋಪ ಮಾಡಿದರು.
ಬೆಂಗಳೂರಿನಲ್ಲೇ ಪರ್ಸೆಂಟೇಜ್ ನೀಡಲು ಹೇಳಿದ್ದಾರಂತೆ. ಮಂತ್ರಿಗಳು, ಮಂತ್ರಿಗಳ ಚೇಲಾಗಳು ಕಮಿಷನ್ ಕೇಳುತ್ತಿದ್ದಾರಂತೆ. ಇಂತವರು ರಾಹುಲ್ ಮುಂದೆ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾತಾಡುತ್ತಾರಂತೆ. ಹೊರನೋಟಕ್ಕೆ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎನ್ನುತ್ತಾರೆ. ಆದರೆ ಕಾಂಗ್ರೆಸ್ ಸ್ವಾತಂತ್ರ್ಯ ಬಂದಾಗಿನಿಂದಲೂ ಅಧಿಕಾರ ನಡೆಸಿದೆ. ಅಂದಿನಿಂದಲೂ ವಲೂಲಿಗಾಗಿಯೇ ಕಾಂಗ್ರೆಸ್ ಪಕ್ಷ ಇದೆ ಎಂದು ಕಿಡಿಕಾರಿದರು.
ಈಸ್ಟ್ ಇಂಡಿಯಾ ಕಂಪನಿ ಕಾಂಗ್ರೆಸ್ಗೆ ಅಧಿಕಾರ ನೀಡಿ ಹೋಯ್ತು. ಈಸ್ಟ್ ಇಂಡಿಯಾ ಕಂಪನಿಯ ವಸೂಲಿಯನ್ನು ಕಾಂಗ್ರೆಸ್ ಮುಂದುವರಿಸಿದೆ. ಕಾಂಗ್ರೆಸ್ನವರು ಭ್ರಷ್ಟಾಚಾರ ನಿಲ್ಲಿಸುತ್ತಾರಾ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಬಿಡಿಎ ಅಧಿಕಾರಿಗಳಿಗೆ 250 ಕೋಟಿ ರೂ. ಸಂಗ್ರಹ ಮಾಡಲು ಹೇಳಿದ್ದಾರಂತೆ. ದೆಹಲಿಗೆ ಹೇಗೆ ಹಣ ಕಳಿಸಬೇಕು ಅಂತಾ ಹೇಳುತ್ತೇವೆಂದಿದ್ದಾರಂತೆ. ಕೆಲ ಬಿಡಿಎ ಅಧಿಕಾರಿಗಳೇ ಈ ವಿಚಾರವನ್ನು ನನ್ನ ಬಳಿ ಹೇಳಿದ್ದಾರೆ. ಸದ್ಯ ಯಾವುದೇ ಪೆನ್ಡ್ರೈವ್ ಬಿಡುಗಡೆ ಮಾಡಲ್ಲ, ಜನರಿಗೆ ಗೊತ್ತಾಗಲಿ ಎಂದು ಹೇಳಿದರು.
ಇನ್ನು ಇದೇ ವೇಳೆ ರಾಜ್ಯ ಪೊಲೀಸ್ ಇಲಾಖೆ ನಡೆಯುತ್ತಿರುವ ಇನ್ಸ್ಪೆಕ್ಟರ್ಗಳ ವರ್ಗಾವಣೆ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಗೃಹ ಇಲಾಖೆಯಲ್ಲಿ ಯಾವ ರೀತಿ ವರ್ಗಾವಣೆ ದಂಧೆ ನಡೆಯಿತು, ಪೊಲೀಸ್ ಅಧಿಕಾರಿಗಳನ್ನ ಯಾವ ಮಟ್ಟಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ನಾನು ವಿದೇಶದಲ್ಲಿದ್ದರೂ ಪ್ರತಿನಿತ್ಯದ ಬೆಳವಣಿಗೆಗಳನ್ನ ಗಮನಿಸಿದ್ದೇನೆ ಎಂದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 11:04 am, Fri, 4 August 23