ಮಾನ ಮರ್ಯಾದೆ ಇದ್ದರೆ ಪಕ್ಷ ಬಿಟ್ಟು ಹೋಗಲಿ! ಜೆಡಿಎಸ್ ಶಾಸಕ ಶ್ರೀನಿವಾಸ್ಗೌಡ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ಕೆಂಡ
ರಾಜಕೀಯದಲ್ಲಿ ಇದೆಲ್ಲಾ ಕಾಮನ್ ಎಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಶ್ರೀನಿವಾಸ್ಗೌಡ ವಿರುದ್ಧ ಕೆಂಡ ಕಾರಿದ್ದಾರೆ. ಮಾನ ಮರ್ಯಾದೆ ಇದ್ದರೆ ಪಕ್ಷ ಬಿಟ್ಟು ಹೋಗಲಿ.
ಬೆಂಗಳೂರು: ಇಂದು (ಜೂನ್ 10) ನಡೆಯುತ್ತಿರುವ ರಾಜ್ಯಸಭಾ ಚುನಾವಣೆಯಲ್ಲಿ (Rajya Sabha Election 2022) ಜೆಡಿಎಸ್ ಕೋಲಾರ ಕ್ಷೇತ್ರದ ಶಾಸಕ ಶ್ರೀನಿವಾಸ್ಗೌಡ (Srinivas Gowda) ಕಾಂಗ್ರೆಸ್ಗೆ ಮತದಾನ ಮಾಡಿದ್ದಾರೆ. ಈ ಬಗ್ಗೆ ಶಾಸಕರೇ ಮಾತನಾಡಿ, ನಾನು ಕಾಂಗ್ರೆಸ್ಗೆ ಮತ ಹಾಕಿದ್ದೇನೆ. ನಾನು ಹಿಂದೆ ಕಾಂಗ್ರೆಸ್ನಿಂದಲೇ ಸಚಿವನಾಗಿದ್ದೆ. ಕುಮಾರಸ್ವಾಮಿ ಸಿಟ್ಟಾದರೆ ಆಗಲಿ ಬಿಡಿ. ರಾಜಕೀಯದಲ್ಲಿ ಇದೆಲ್ಲಾ ಕಾಮನ್. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದೇನೆ ಎಂದು ಹೇಳಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಶ್ರೀನಿವಾಸ್ಗೌಡ ವಿರುದ್ಧ ಕೆಂಡ ಕಾರಿದ್ದಾರೆ. ಮಾನ ಮರ್ಯಾದೆ ಇದ್ದರೆ ಪಕ್ಷ ಬಿಟ್ಟು ಹೋಗಲಿ. ಇಂಥವರಿಗೆ ಪಕ್ಷದಿಂದ ಶಿಸ್ತು ಕ್ರಮ ಅಗತ್ಯವಿಲ್ಲ. ಈ ರೀತಿಯಾಗಿ ಮಾಡಿ ಜನರ ಮುಂದೆ ಹೇಗೆ ಹೋಗುತ್ತಾರೆ ಎಂದು ಗರಂ ಆದರು.
ಇನ್ನುಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ಯಾರಿಗೂ ಮತ ಚಲಾಯಿಸಿಲ್ಲ. ಬ್ಯಾಲೆಟ್ ಪೇಪರ್ ಖಾಲಿ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಇಬ್ಬರು ಅಡ್ಡ ಮತದಾನದ ನಿರೀಕ್ಷೆ ಮೊದಲೇ ಇತ್ತು. ಜೆಡಿಎಸ್ಗೆ ಮತ ಹಾಕುತ್ತೇನೆ ಎಂದು ಗುಬ್ಬಿ ಶ್ರೀನಿವಾಸ್ ಹೇಳಿ ಈ ರೀತಿ ಮಾಡಿದ್ದಾರೆ. ಇಲ್ಲಿಂದ ಹೊಸ ರಾಜಕೀಯ ಚಾಪ್ಟರ್ ಶುರು ಆಗುತ್ತದೆ. ಜನ ಹೊಸ ಚಾಪ್ಟರ್ ಶುರು ಮಾಡುತ್ತಾರೆ. ಎಂಟರಿಂದ ಹತ್ತು ಜನ ಅಡ್ಡ ಮತದಾನ ಮಾಡುತ್ತಾರೆ ಎನ್ನುವ ಕಾಂಗ್ರೆಸ್ ನಿರೀಕ್ಷೆ ಹುಸಿಯಾಗಿದೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯನ ಕಾಂಗ್ರೆಸ್ಗೆ ಗೂಟ ಹೊಡೆಯುತ್ತಾರೆ ಎಂದರು.
ಇದನ್ನೂ ಓದಿ: ನನ್ನ ಮತವನ್ನು ಪೆಟ್ಟಿಗೆಗೆ ಹಾಕುವ ಮೊದಲು ಶಿವಕುಮಾರ್ಗೆ ತೋರಿಸಿಲ್ಲ: ಹೆಚ್ ಡಿ ರೇವಣ್ಣ
ಆಗ ಕೆ ಸಿ ರಾಮಮೂರ್ತಿನ ಗೆಲ್ಲಸಿಕೊಂಡರು. ಅವರನ್ನ ಕಾಂಗ್ರೆಸ್ ಪಕ್ಷ ಉಳಿಸಿಕೊಂಡರಾ? ಈಗಲೂ 14 ಶಾಸಕರು ಸುಮ್ಮನೆ ಕೂರಿಸಿಕೊಂಡಿದ್ದಾರೆ. ಬಿಜೆಪಿನ ಗೆಲ್ಲಿಸಲು ಸಿದ್ದರಾಮಯ್ಯ ಕೂರಿಸಿಕೊಂಡಿದ್ದಾರೆ. ಕಾಂಗ್ರೆಸ್ನ ಇಬ್ಬರು, ಮೂವರು ಶಾಸಕರ ಜೊತೆ ನಾನು ಮಾತನಾಡಿದ್ದೆ. ಎರಡನೇ ಪ್ರಾಶಸ್ತ್ಯ ಮತ ನಮಗೆ ಹಾಕಿ ಎಂದು ಕೇಳಿದ್ದೆ. ಆದರೆ ಜೆಡಿಎಸ್ಗೆ ಮತ ಹಾಕಲೇಬೇಡಿ ಎಂದು ಕಾಂಗ್ರೆಸ್ ಪಕ್ಷದ ನಾಯಕು ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿನ ಗೆಲ್ಲಿಸಲು ಇವರು ಹೀಗೆ ಮಾಡುತ್ತಿದ್ದಾರೆ. ಇದು ಸಿದ್ದರಾಮಯ್ಯನವರ ರಾಜಕಾರಣ. ಇನ್ನುಮುಂದೆ ನಮ್ಮನ್ನ ಬಿಜೆಪಿ ಟೀಂ ಅಂತ ಕರೆಯೋದನ್ನ ನಿಲ್ಲಿಸಿ. ನಾವು ಅವರನ್ನ ಕರೆಯ ಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನಾನು ಮತ ಹಾಕಿ ರೇವಣ್ಣನವರಿಗೆ ತೋರಿಸಿದ್ದೇನೆ-ಶ್ರೀನಿವಾಸ್: ನಾನು ಜೆಡಿಎಸ್ಗೆ ಮತ ಹಾಕಿದ್ದೇನೆ ಎಂದು ಹೇಳಿದ್ದ ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಮತ ಹಾಕಿ ರೇವಣ್ಣನವರಿಗೆ ತೋರಿಸಿದ್ದೇನೆ. ನಮ್ಮ ತಂದೆ ಅಷ್ಟೋ ಇಷ್ಟೋ ವಿದ್ಯಾಭ್ಯಾಸ ಕಲಿಸಿದ್ದಾರೆ. ಮತ ಎಣಿಕೆ ವೇಳೆ ಎಲ್ಲವೂ ಗೊತ್ತಾಗಲಿದೆ. ಕುಮಾರಸ್ವಾಮಿ ಯಾಕೆ ಹೀಗೆ ಹೇಳಿದ್ರೋ ಗೊತ್ತಾಗುತ್ತಿಲ್ಲ. ನನಗೂ ಮತದಾನದ ಹಕ್ಕಿನ ಬೆಲೆ ಗೊತ್ತಿದೆ. ಹೆಚ್ ಡಿ ಕುಮಾರಸ್ವಾಮಿಯವರ ಮನಸ್ಥಿತಿಯೇ ಹೀಗೆ. ಕುಮಾರಸ್ವಾಮಿ ದೊಡ್ಡವರು, ಅವರು ಏನು ಹೇಳಿದ್ರು ನಡೆಯುತ್ತೆ. ಯಾರದ್ದು ಕೀಳು ಮಟ್ಟದ ರಾಜಕಾರಣ ಎಂದು ಗೊತ್ತಾಗುತ್ತೆ. ಸಂಜೆ ವೇಳೆ ಎಲ್ಲವೂ ಗೊತ್ತಾಗಲಿದೆ. ನಮ್ಮಂಥವರು ಗೆದ್ದಿದ್ದರಿಂದಲೇ ಹೆಚ್ಡಿಕೆ ಸಿಎಂ ಆಗಿದ್ದು ಎಂದು ಶ್ರೀನಿವಾಸ್ ಹೇಳಿದರು.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:57 pm, Fri, 10 June 22