
ಬೆಂಗಳೂರು, ಫೆಬ್ರವರಿ 21: ಸಿಎಂ ಸಿದ್ದರಾಮಯ್ಯ (Siddaramaiah) ನಿನ್ನೆ ಮಾಡಿದ ಸರಣಿ ಟ್ವೀಟ್‌ಗಳು ಸದ್ಯ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವಿಪಕ್ಷಗಳ ನಾಯಕರಿಗೆ ಸಿದ್ದರಾಮಯ್ಯ ಮಾಡಿರುವ ಪೋಸ್ಟ್ಗಳೇ ಅಸ್ತ್ರವಾಗಿವೆ. ಇನ್ನು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಅಂತಾ ಅವರ ಆಪ್ತ ಶಾಸಕರು ನೀಡುತ್ತಿರುವ ಡೇಟ್ಗಳು ಕಾಂಗ್ರೆಸ್ ಪಕ್ಷದಲ್ಲಿ ಪಟ್ಟದ ಕಾಳಗವನ್ನ ತೀವ್ರಗೊಳಿಸಿದೆ.
ಸಾಮಾಜಿಕ ನ್ಯಾಯಕ್ಕಾಗಿ ನನ್ನ ಉಸಿರ ಇರೋವರೆಗೆ ಹೋರಾಡುತ್ತೇನೆ. ನನ್ನ ನಾಲ್ಕು ದಶಕಗಳ ರಾಜಕೀಯ ಜೀವನ ಎಂದಿಗೂ ಹೂವಿನ ಹಾಸಿಗೆ ಆಗಿರಲಿಲ್ಲ, ಅದು ಕಲ್ಲು-ಮುಳ್ಳುಗಳ ಹಾದಿಯಾಗಿತ್ತು. ಕುರಿ ಕಾಯುತ್ತಿದ್ದವನು ಸಿಎಂ ಆದದ್ದೇ ಪಟ್ಟಭದ್ರರ ಕಣ್ಣು ಕೆಂಪಾಗಲು ಕಾರಣ. ನನ್ನ ಮೇಲೆ ವಿರೋಧಿಗಳು ನಡೆಸುತ್ತಿರುವ ಬಹುತೇಕ ದಾಳಿಗಳು, ಮಾಡುತ್ತಿರುವ ಟೀಕೆ-ಆರೋಪಗಳಿಗೆ ನಾನು ಹುಟ್ಟಿದ ಜಾತಿಯೂ ಒಂದು ಕಾರಣ. ನನ್ನನ್ನು ರಾಜಕೀಯವಾಗಿ ಮುಗಿಸಲು ಹಲವಾರು ದೊಡ್ಡ ದೊಡ್ಡ ನಾಯಕರು ಹಲವಾರು ಬಗೆಯ ಕುಟಿಲ ಕಾರಸ್ತಾನಗಳನ್ನು ಮಾಡಿದ್ದಾರೆ. ನನ್ನ ವಿರುದ್ಧ ಯಾಕೆ ಷಡ್ಯಂತ್ರ ಮಾಡುತ್ತಿದ್ದಾರೆ ಎನ್ನುವುದೂ ನನಗೆ ಗೊತ್ತಿದೆ. ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಹೋರಾಟವನ್ನು ನನ್ನ ಉಸಿರು ಇರುವವರೆಗೆ ನಡೆಸುತ್ತೇನೆ, ರಣರಂಗವನ್ನು ಬಿಟ್ಟು ಓಡಿ ಹೋಗುವ ಹೇಡಿ ನಾನಾಗಲಾರೆ ಎಂದಿದ್ದಾರೆ.
ಸಾಮಾಜಿಕ ನ್ಯಾಯ ಎನ್ನುವುದು ನನ್ನ ಪಾಲಿಗೆ ಒಂದು ಸಿದ್ಧಾಂತ ಅಲ್ಲ, ಅದು ಸರ್ವ ಸಮಾನತೆಯ ಗುರಿಯನ್ನು ತಲುಪಲು ನಾನು ಆರಿಸಿಕೊಂಡ ಬದುಕಿನ ಹಾದಿ. ಸಾಮಾನ್ಯವಾಗಿ ಸಾಮಾಜಿಕ ನ್ಯಾಯ ಎಂದರೆ ಯಾರಿಂದಲೋ ಕಿತ್ತು, ಇನ್ನಾರಿಗೋ ಹಂಚುವ ಜನವಿರೋಧಿಯಾದ, ತಾರತಮ್ಯದ ನೀತಿ ಎಂಬಂತೆ ಬಿಂಬಿಸಲಾಗುತ್ತಿದೆ. ಸಂಪತ್ತು, ಅಧಿಕಾರ ಮತ್ತು ಅವಕಾಶಗಳು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು. ಅಭಿವೃದ್ದಿಯ ಫಲವನ್ನು ಜಾತಿ, ಧರ್ಮ, ಪ್ರದೇಶಗಳ ಭೇದವಿಲ್ಲದೆ ಸರ್ವರಿಗೂ ಸಮಾನವಾಗಿ ಹಂಚಿಕೆಯಾಗಬೇಕೆನ್ನುವುದು ಸಂವಿಧಾನದ ಆಶಯವಾಗಿ ಹೊರಹೊಮ್ಮಿರುವ ಸಾಮಾಜಿಕ ನ್ಯಾಯದ ಪರಿಕಲ್ಪನೆ. ಇದೇ ನಿಜವಾದ ವೈಜ್ಞಾನಿಕವಾದ ಅಭಿವೃದ್ಧಿ ಮಾದರಿ. ಜಾತಿ, ಲಿಂಗ, ವರ್ಗ, ಪ್ರದೇಶಗಳ ತಾರತಮ್ಯ ನಿವಾರಣೆಗಳ ಜೊತೆಯಲ್ಲಿ ನಗರ ಮತ್ತು ಹಳ್ಳಿಗಳ ನಡುವಿನ ಅಂತರವನ್ನು ನಿವಾರಿಸುವುದು ಕೂಡಾ ಸಾಮಾಜಿಕ ನ್ಯಾಯವೇ ಆಗಿದೆ ಎಂದಿದ್ದಾರೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಲೇವಡಿ
ನಿನ್ನೆ ಸಿಎಂ ಸಿದ್ದರಾಮಯ್ಯ ಮಾಡಿರುವ ಸರಣಿ ಟ್ವೀಟ್‌ಗಳು ಸಿಎಂ ಕುರ್ಚಿ ಕಾಳಗಕ್ಕೆ ಹೊಸ ಆಯಾಮ ತಂದು ಕೊಟ್ಟಿವೆ. ಏಕೆಂದರೆ ಸಿಎಂ ಬಳಸಿದ ಪದಗಳು ಅಷ್ಟು ಹರಿತವಾಗಿವೆ. ಇದೆಲ್ಲವನ್ನ ಸಿಎಂ ಸಿದ್ದರಾಮಯ್ಯ ಯಾರಿಗೆ ಹೇಳಿದ್ದು, ಯಾಕೆ ಅನ್ನೋ ಪ್ರಶ್ನೆ ರಾಜಕಾರಣದಲ್ಲಿ ಹರಿದಾಡುತ್ತಿದೆ. ಆದರೆ ಜೆಡಿಎಸ್, ಬಿಜೆಪಿ ನಾಯಕರು ಸಿಎಂರ ಈ ಮಾತುಗಳ ಕಾಂಗ್ರೆಸ್ನವರಿಗೆ ಅಂತಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕರು ಸಿಎಂ ಮಾತು ಕೈ ಪಡೆಗೆ ಹೇಳಿದ್ದು ಅನ್ನೋದನ್ನ ತಳ್ಳಿಹಾಕ್ತಿದ್ದಾರೆ. ಡಿಕೆ ಶಿವಕುಮಾರ್ ಆಪ್ತ ಶಾಸಕ ಇಕ್ಬಾಲ್ ಹುಸೇನ್ ನಮ್ಮಲ್ಲಿ ಯಾವ ಪಟ್ಟಭದ್ರ ಶಕ್ತಿ ಇಲ್ಲ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:26 pm, Sat, 21 February 26